Charmadi Ghat: ಸಿಗಲೇ ಇಲ್ಲ ಶರತ್ ಮೃತದೇಹ: ದಿಕ್ಕುತಪ್ಪಿಸುತ್ತಿದ್ದಾರಾ ಆರೋಪಿಗಳು..!
ಮೃತದೇಹಕ್ಕಾಗಿ ಚಾರ್ಮಾಡಿ ಘಾಟ್‌ನಲ್ಲಿ ಪೊಲೀಸರ ಕಾರ್ಯಾಚರಣೆ
ಒಮ್ಮೊಮ್ಮೆ ಒಂದೊಂದು ಜಾಗ ತೋರಿಸ್ತಿರೋ ಆರೋಪಿಗಳು
ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ ಎಂದ ಸ್ಥಳೀಯರು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಜ.05): ಸಬ್ಸಿಡಿ ಕಾರಿನ ವಿಚಾರವಾಗಿ ಹಣಕಾಸಿನ ವಿಷಯಕ್ಕೆ ಕೊಲೆಯಾದ ಬೆಂಗಳೂರಿನ ಕೋಣನಕುಂಟೆಯ ಯುವಕ ಶರತ್ ಮೃತದೇಹಕ್ಕಾಗಿ ಬೆಂಗಳೂರಿನ ಪೊಲೀಸರು ಕಳೆದ ಎರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಮೃತದೇಹ ಪತ್ತೆಯಾಗಿಲ್ಲ.
ಮೂರನೇ ದಿನ ಇಂದೂ ಕೂಡ ಶೋಧ ಕಾರ್ಯ ಮುಂದುವರೆಯಲಿದೆ. ಮೃತದೇಹದ ಶೋಧಕ್ಕಾಗಿ ಎ1 ಹಾಗೂ ಎ2 ಇಬ್ಬರು ಆರೋಪಿಗಳನ್ನ ಸ್ಥಳಕ್ಕೆ ಕರೆತಂದಿರೋ ಪೊಲೀಸರು ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಹುಡುಕಾಡುತ್ತಿದ್ದಾರೆ. ಆದರೆ, ಮೃತದೇಹ ಮಾತ್ರ ಸಿಕ್ಕಿಲ್ಲ. ಆರೋಪಿಗಳು ಒಂದೊಂದು ಬಾರಿ ಒಂದೊಂದು ಜಾಗ ತೋರಿಸುತ್ತಿರುವುದರಿಂದ ಹುಡುಕಾಡಿ-ಹುಡುಕಾಡಿ ಪೊಲೀಸರು ಕೂಡ ಹೈರಾಣಾಗಿದ್ದಾರೆ. ಒಮ್ಮೆ ಓರ್ವ ಬಲ ಭಾಗ ಅಂದ್ರೆ ಮತ್ತೋರ್ವ ಎಡಭಾಗ ಅಂತಿದ್ದಾನೆ. ಇದು ಪೊಲೀಸರನ್ನ ಅತಂತ್ರಕ್ಕೀಡು ಮಾಡಿದೆ.
9 ತಿಂಗಳ ಹಿಂದೆ ನಡೆದ ಕೊಲೆ ಪ್ರಕರಣ ಪತ್ತೆ ಹಚ್ಚಿದ ಕಬ್ಬನ್ ಪಾರ್ಕ್ ಪೊಲೀಸರು!
ಕಾಡು ಪ್ರಾಣಿಗಳು ಎಳೆದೊಯ್ದಿರುವ ಸಾಧ್ಯತೆ: ಗೋಣಿಚೀಲದಲ್ಲಿ ತುಂಬಿ ಮೃತದೇಹವನ್ನ ಎಸೆದಿದ್ದೇವೆ ಎನ್ನುತ್ತಿರೊ ಆರೋಪಿಗಳು. ಗೋಣೀಚೀಲವಾದ್ರೆ ಮೃತದೇಹ ಸಿಗೋದು ಡೌಟ್ ಅಂತಿರೋ ಸ್ಥಳಿಯರು. ಕಾಡುಹಂದಿ ಹಂದಿ, ಸೀಳು ನಾಯಿಗಳು ಹೆಚ್ಚಿರೋ ಚಾರ್ಮಾಡಿ ಘಾಟಿಯಲ್ಲಿ ಚೀಲವನ್ನ ಎಳೆದೊಯ್ಯೋ ಸಾಧ್ಯತೆ ಇದೆ. ಅಷ್ಟೆ ಅಲ್ಲದೆ ಒಂಬತ್ತು ತಿಂಗಳ ಹಿಂದಿನ ಶವವಾಗಿರೋದ್ರಿಂದ ಸಿಗೋದು ಡೌಟ್ ಅನ್ನೋದು ಸ್ಥಳಿಯರು ಮಾತು. ಆದರೆ, ಪೊಲೀಸರು ಮಾತ್ರ ಆರೋಪಿಗಳು ಹೇಳಿದ ಜಾಗದಲ್ಲೆಲ್ಲಾ ಮೃತದೇಹಕ್ಕಾಗಿ ಬೆಟ್ಟ-ಗುಡ್ಡ ಹತ್ತಿ ಇಳಿದು ಹುಡುಕಾಡುತ್ತಿದ್ದಾರೆ. 22 ಕಿ.ಮೀ. ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ಮಧ್ಯರಾತ್ರಿಯ ಕಗ್ಗತ್ತಲಲ್ಲಿ ಎಲ್ಲಿ ಬಿಸಾಡಿದ್ದಾರೋ ಏನೋ. ಆದರೆ, ಪೋಲೀಸರು ಅವರು ಹೇಳಿದ ಕಡೆಯಲ್ಲೆಲ್ಲಾ ಹುಡುಕಾಡುತ್ತಿದ್ದಾರೆ. ಆದರೆ, ಮೃತದೇಹದ ಯಾವುದೇ ಗುರುತು ಪತ್ತೆಯಾಗಿಲ್ಲ.
9 ತಿಂಗಳ ಹಿಂದಿನ ಹೆಣ ಹುಡುಕೋದು ಕಷ್ಟ ಸಾಧ್ಯ : ಚಾರ್ಮಾಡಿ ಘಾಟಿಯಲ್ಲಿ ಮೃತದೇಹ ಹುಡುಕೋದು ಅಷ್ಟು ಸುಲಭದ ಮಾತಲ್ಲ. ಚಾರ್ಮಾಡಿ ಘಾಟ್ ಸಾವಿರಾರು ಅಡಿ ಪ್ರಪಾತದ ಪ್ರದೇಶ. ದಟ್ಟ ಕಾನನ. ಅಸಂಖ್ಯಾತ ಪ್ರಾಣಿಗಳ ಆವಸ ಸ್ಥಾನ. ಜೊತೆಗೆ ಯತೇಚ್ಛವಾಗಿ ಮಳೆ ಬೀಳುವ ಪ್ರದೇಶ. ಇಲ್ಲಿ ಬೀಳುವ ಮಳೆ ನೀರು ಕಣಿವೆಯಲ್ಲಿ ಹರಿದು ನೇತ್ರಾವತಿ ನದಿ ಸೇರುತ್ತದೆ. 2022ರಲ್ಲಿ ಕಾಫಿನಾಡಲ್ಲಿ ಯತೇಚ್ಛವಾಗಿ ಮಳೆ ಸುರಿದಿದೆ. ಮಳೆ ಮಳೆ ನೀರಲ್ಲಿ ಕೊಚ್ಚಿಯೂ ಹೋಗಿರಬಹುದು ಅಥವ ಪ್ರಾಣಿಗಳು ತಿಂದಿರಬಹುದು. ಇಂತಹಾ ದುರ್ಗಮ ಪ್ರದೇಶದಲ್ಲಿ 9 ತಿಂಗಳ ಹಿಂದಿನ ಹೆಣ ಹುಡುಕೋದು ಕಷ್ಟ ಸಾಧ್ಯ ಎಂದು ಸ್ಥಳೀರು ಹೇಳಿದ್ದಾರೆ.
ಇದನ್ನೂ ಓದಿ: Bengaluru Crime: ಸಾಲ ಮರಳಿಸಿಲ್ಲವೆಂದು ಮನಸೋ ಇಚ್ಛೆ ಥಳಿಸಿ ಕೊಲೆ: ನರಕವನ್ನೂ ಮೀರಿಸುವಂತಿದೆ ಹಿಂಸೆ
ಪೊಲೀಸರು, ಸಮಾಜಸೇವಕರು ಹೈರಾಣು: ಚಾರ್ಮಾಡಿ ಘಾಟಿಯಲ್ಲಿ ಒಂದೇ ರೀತಿಯ ತಿರುವುಗಳು ಹತ್ತಾರಿವೆ. ಕೊಲೆ ಮಾಡಿರೋ ಭಯದಲ್ಲಿ ಮಧ್ಯ ರಾತ್ರಿಯ ಕತ್ತಲಲ್ಲಿ ಮೃತದೇಹವನ್ನ ಯಾವ ತಿರುವಿನಲ್ಲಿ ಎಲ್ಲಿ ಎಸೆದಿದ್ದಾರೋ ಗೊತ್ತಿಲ್ಲ. ಆದರೆ, ಪೊಲೀಸರು ಅವರು ಹೇಳಿದ ಜಾಗದಲ್ಲೆಲ್ಲಾ ನಿರಂತರವಾಗಿ ಹುಡುಕಾಡುತ್ತಿದ್ದಾರೆ. ಆದರೆ, ಮೃತದೇಹ ಮಾತ್ರ ಸಿಕ್ಕಿಲ್ಲ. ಇನ್ನೂ ಮೃತದೇಹಕ್ಕಾಗಿ ಹುಡುಕಾಟ ಮುಂದುವರೆಸಲಾಗಿದ್ದು, ಪೊಲೀಸರು ಮತ್ತು ಸಮಾಜ ಸೇವಕರು ಮೂರು ದಿನದಿಂದ ಶವ ಹುಡುಕಾಟದಲ್ಲಿ ಹೈರಾಣು ಆಗಿದ್ದಾರೆ.