*   ಜೈಲಿನಲ್ಲಿರುವ ಆರೋಪಿಗಳಿಂದ ಹಣ ಪಡೆದು ಕೃತ್ಯ*  ನಕಲಿ ಸೀಲು, ಪಹಣಿ ಬಳಸಿ ಕೋರ್ಚ್‌ಗೆ ಶ್ಯೂರಿಟಿ*  9 ಮಂದಿ ಬಂಧನ 

ಬೆಂಗಳೂರು(ಏ.24):  ಹಣದಾಸೆಗೆ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನಿಗೆ ಕೊಡಿಸಲು ನ್ಯಾಯಾಲಯಕ್ಕೆ(Court) ನಕಲಿ ದಾಖಲೆ ಸಲ್ಲಿಸಿ ಶ್ಯೂರಿಟಿ ನೀಡುತ್ತಿದ್ದ 9 ಜನರ ತಂಡವನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜೀವಿನಿ ನಗರದ ಪುಟ್ಟಸ್ವಾಮಿ, ಮಧುಗಿರಿಯ ನಸ್ರೀನ್‌, ನಗರದ ಜಗದೀಶ್‌ ಅಲಿಯಾಸ್‌ ಬಾಂಬೆ, ಚಂದ್ರೇಗೌಡ, ಸೊನ್ನೇಗೌಡ, ವೆಂಕಟೇಶ್‌, ಶಿಕ್ಷಣ ಇಲಾಖೆಯ ‘ಡಿ’ ಗ್ರೂಪ್‌ ನೌಕರ ಅಂಜಿನಪ್ಪ, ಮಂಜುನಾಥ, ರಾಜಣ್ಣ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ನಕಲಿ ಸೀಲುಗಳು, ನಕಲಿ ಪಹಣಿಗಳು, ಕಂಪ್ಯೂಟರ್‌, ಪ್ರಿಂಟರ್‌, ಸ್ಕಾ್ಯನರ್‌, ಲ್ಯಾಮಿನೇಷನ್‌ ಮಿಷನ್‌, ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ(Accused) ಪುಟ್ಟಸ್ವಾಮಿ ಜೈಲಿನಲ್ಲಿರುವ ಆರೋಪಿಗಳನ್ನು ಸಂಪರ್ಕಿಸಿ ಜಾಮೀನಿಗೆ ಶ್ಯೂರಿಟಿ ಕೊಡಿಸುವುದಾಗಿ ವ್ಯವಹಾರ ಕುದುರಿಸುತ್ತಿದ್ದ. ಬಳಿಕ ತನ್ನ ಸಹಚರರ ಜತೆ ತಾಲೂಕು ಕಚೇರಿಗಳಿಗೆ ತೆರಳಿ ರೈತರು ಎಂದು ಹೇಳಿಕೊಂಡು ರೈತರ ಪಹಣಿ ಮತ್ತು ಮ್ಯೂಟೇಷನ್‌ಗಳನ್ನು ಪಡೆಯುತ್ತಿದ್ದರು. ಬಳಿಕ ಆರೋಪಿ ಮಂಜುನಾಥ್‌ ಹಾಗೂ ನಸ್ರೀನ್‌ ಮೂಲಕ ಪಹಣಿಯಲ್ಲಿರುವ ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌ ತಯಾರಿಸುತ್ತಿದ್ದರು. ಬಳಿಕ ಶಿಕ್ಷಣ ಇಲಾಖೆಯ ಡಿ ಗ್ರೂಪ್‌ ನೌಕರ ಅಂಜಿನಪ್ಪನ ನೆರವಿನಿಂದ ನಕಲಿ ಸೀಲು ಬಳಸಿಕೊಂಡು ಶ್ಯೂರಿಟಿ ಬಾಂಡ್‌ ದೃಢಿಕರಿಸಿ ದಾಖಲೆ ಸಿದ್ಧಪಡಿಸಿ ವಕೀಲರ ಮೂಲಕ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದರು. ಆರೋಪಿಗಳ ಜಾಮೀನಿಗೆ(Bail) ಶ್ಯೂರಿಟಿ ನೀಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈತ ಕಳ್ಳತನ ಮಾಡುವ ವಿಧಾನವೇ ಡಿಫರೆಂಟ್, ಅಪಾರ್ಟ್‌ಮೆಂಟ್ ಟಾರ್ಗೆಟ್..!

ಆರೋಪಿಗಳಾದ ಜಗದೀಶ್‌, ಚಂದ್ರೇಗೌಡ, ಸೊನ್ನೇಗೌಡ, ವೆಂಕಟೇಶ್‌, ರಾಜಣ್ಣ ನಾವೇ ರೈತರು ಎಂದು ನ್ಯಾಯಾಲಕ್ಕೆ ಹಾಜರಾಗುತ್ತಿದ್ದರು. ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಈ ಆರೋಪಿಗಳ ಹೆಸರಿನ ನಕಲಿ ಪಹಣಿ, ನಕಲಿ ಆಧಾರ್‌ ಕಾರ್ಡ್‌, ನಕಲಿ ಶ್ಯೂರಿಟಿ ಬಾಂಡ್‌ ಇರುತ್ತಿತ್ತು. ಹೀಗಾಗಿ ಆರೋಪಿಗಳು ನ್ಯಾಯಾಲಯಕ್ಕೆ ವಂಚಿಸಿ ಜೈಲಿನಲ್ಲಿರುವ ಆರೋಪಿಗಳಿಗೆ ಶ್ಯೂರಿಟಿ ನೀಡಿ ಜಾಮೀನು ಸಿಗಲು ನೆರವಾಗುತ್ತಿದ್ದರು.

ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದಿದ್ದ ಖದೀಮರ ಸೆರೆ!

ಟೀಂ ಚೇಂಜ್‌!

ಆರೋಪಿ ಪುಟ್ಟಸ್ವಾಮಿ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ಕೊಡಿಸಲು .20-30 ಸಾವಿರ ಪಡೆಯುತ್ತಿದ್ದ. ರೈತರ(Farmers) ಹೆಸರಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ಆರೋಪಿಗಳಿಗೆ .1-2 ಸಾವಿರ ನೀಡುತ್ತಿದ್ದ. ಪ್ರತಿ ಪ್ರಕರಣದಲ್ಲಿಯೂ ನಕಲಿ ರೈತರ ತಂಡ ಬದಲಾಯಿಸುತ್ತಿದ್ದ. ಒಬ್ಬ ವ್ಯಕ್ತಿ ಐದಾರು ಪ್ರಕರಣಗಳಲ್ಲಿ ಜಾಮೀನಿಗೆ ಶ್ಯೂರಿಟಿ ನೀಡಿದರೆ ನ್ಯಾಯಾಲಯಕ್ಕೆ ಅನುಮಾನ ಬರಲಿದೆ ಎಂಬ ಕಾರಣಕ್ಕೆ ನಕಲಿ ಶ್ಯೂರಿಟಿದಾರರನ್ನು ಬದಲಿಸುತ್ತಿದ್ದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ತಂಡ ನ್ಯಾಯಾಲಯಕ್ಕೆ ವಂಚಿಸಿ ಈವರೆಗೆ ಎಷ್ಟುಮಂದಿ ಆರೋಪಿಗಳ ಜಾಮೀನಿಗೆ ನಕಲಿ ಶ್ಯೂರಿಟಿ ನೀಡಿದೆ ಎಂಬುದರ ಬಗ್ಗೆ ತನಿಖೆ(Investigation) ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಸಿಕ್ಕಿದ್ದು ಹೀಗೆ

ಏ.19ರಂದು ರಾತ್ರಿ 10.30ರ ಸುಮಾರಿಗೆ ಸಿ.ಟಿ.ಮಾರ್ಕೆಟ್‌ ಪೊಲೀಸ್‌ ಠಾಣೆಯ ಎಎಸ್‌ಐ ರಮೇಶ್‌ಗೌಡ ಅವರು ಮಾರ್ಕೆಟ್‌ ಸರ್ಕಲ್‌ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಹಿಳೆ ಸೇರಿ ಇಬ್ಬರು ವ್ಯಕ್ತಿಗಳಿದ್ದ ಆಟೋ ರಿಕ್ಷಾವೊಂದು ಅದೇ ಮಾರ್ಗದಲ್ಲಿ ಬಂದಿದೆ. ಈ ವೇಳೆ ತಪಾಸಣೆ ಮಾಡಲು ಮುಂದಾಗ ಆಟೋ ರಿಕ್ಷಾದಲ್ಲಿದ್ದ ಪುಟ್ಟಸ್ವಾಮಿ ಆಟೋ ಇಳಿದು ಓಡಲು ಆರಂಭಿಸಿದ್ದಾನೆ. ಈ ವೇಳೆ ಪೊಲೀಸರು ಪುಟ್ಟಸ್ವಾಮಿ ಮತ್ತು ನಸ್ರೀನ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ನಕಲಿ ಶ್ಯೂರಿಟಿ ಜಾಲ ಬೆಳಕಿಗೆ ಬಂದಿದೆ. ಈ ಇಬ್ಬರು ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.