Asianet Suvarna News Asianet Suvarna News

Muharram ಮೆರವಣಿಗೆ ವೇಳೆ ಘರ್ಷಣೆ: ಉತ್ತರ ಭಾರತದಲ್ಲಿ 8 ಬಲಿ, 10 ಪೊಲೀಸರು ಸೇರಿ ಹಲವರಿಗೆ ಗಾಯ

ತಾಜಿಯಾ ಮೊಹರಂ ಮೆರವಣಿಗೆ ವೇಳೆ ಉತ್ತರ ಭಾರತದಲ್ಲಿ ಹೆಚ್ಚು ಘರ್ಷಣೆಗಳು ಸಂಭವಿಸಿದೆ. ಈ ಘಟನೆಗಳಲ್ಲಿ ಭಾರತದಾದ್ಯಂತ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, 10 ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

8 killed vehicles damaged in clashes during muharram procession in delhi and up ash
Author
First Published Jul 30, 2023, 11:25 AM IST

ಹೊಸದೆಹಲಿ (ಜುಲೈ 30, 2023): ಜುಲೈ 29 ರ ಶನಿವಾರದಂದು 'ತಾಜಿಯಾ' ಮೊಹರಂ ಮೆರವಣಿಗೆ ವೇಳೆ ಉತ್ತರ ಭಾರತದಲ್ಲಿ ಹೆಚ್ಚು ಘರ್ಷಣೆಗಳು ಸಂಭವಿಸಿದೆ. ಈ ಘಟನೆಗಳಲ್ಲಿ ಭಾರತದಾದ್ಯಂತ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು, 10 ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯ ದೋಷಿಪುರ ಪ್ರದೇಶದಲ್ಲಿ ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿದ್ದು, ಈ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ ಮತ್ತು ವಾಹನಗಳಿಗೆ ಹಾನಿಯಾಗಿದೆ. ದೆಹಲಿಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಜನರು ಪೊಲೀಸರೊಂದಿಗೆ ಘರ್ಷಣೆ ನಡೆಸಿದರು ಮತ್ತು ಅವರ ಮೇಲೆ ಕಲ್ಲು ತೂರಿದ್ದಾರೆ. ಪಶ್ಚಿಮ ದೆಹಲಿಯ ನಂಗ್ಲೋಯ್‌ನಲ್ಲಿ ಗೊತ್ತುಪಡಿಸಿದ ಮಾರ್ಗವನ್ನು ಬದಲಾಯಿಸದಂತೆ ಅವರನ್ನು ತಡೆಹಿಡಿದಿದ್ದಕ್ಕೆ ಈ ಗಲಾಟೆ ನಡೆದಿದೆ.

ಇದನ್ನು ಓದಿ: 90 ದೇಶಗಳ ಜೈಲಿನಲ್ಲಿದ್ದಾರೆ 8,330 ಭಾರತೀಯ ಕೈದಿಗಳು: ಗಲ್ಫ್‌ ದೇಶಗಳ ಜೈಲಲ್ಲಿ ಹೆಚ್ಚು ಕೈದಿಗಳು

ದೆಹಲಿಯಲ್ಲಿ ಘರ್ಷಣೆ
ದೆಹಲಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, 12 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಜತೆಗೆ ಘರ್ಷಣೆಯಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಘರ್ಷಣೆಯ ನಂತರ, ಪೊಲೀಸರು "ಅಶಿಸ್ತಿನ ಗುಂಪನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕಾಯಿತು" ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೆಲವು 'ತಾಜಿಯಾ' ಮೆರವಣಿಗೆ ಸಂಘಟಕರು ತಮ್ಮ ಮೆರವಣಿಗೆಯನ್ನು ಮೊದಲೇ ನಿರ್ಧರಿಸಿದ ಮಾರ್ಗದಿಂದ ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದಾಗ ಘರ್ಷಣೆ ಪ್ರಾರಂಭವಾಯಿತು. ಮಾರ್ಗ ಬದಲಾವಣೆಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಗುಂಪನ್ನು ಚದುರಿಸಲು, ಜನಸಮೂಹವನ್ನು ನಿಯಂತ್ರಿಸಲು ಪೊಲೀಸರು "ಸೌಮ್ಯ ಲಾಠಿ ಚಾರ್ಜ್" ಅನ್ನು ಆಶ್ರಯಿಸಬೇಕಾಯಿತು ಎಂದು ಡಿಸಿಪಿ ಹರೇಂದ್ರ ಸಿಂಗ್‌ ಹೇಳಿದರು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಲೇಜಿಗೆ ಹಿಂದೂ ವಿದ್ಯಾರ್ಥಿ ತಿಲಕ ಇಟ್ಕೊಂಡು ಬಂದಿದ್ದಕ್ಕೆ ಆಕ್ಷೇಪ: ತಿಲಕ ಅಳಿಸಿ ಇಸ್ಲಾಂಗೆ ಮತಾಂತರವಾಗಲು ಬೆದರಿಕೆ

ಯುಪಿಯಲ್ಲಿ ಘರ್ಷಣೆ, ಅಗ್ನಿ ಅವಘಡ
ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ 'ಶಿಯಾ' ಮತ್ತು 'ಸುನ್ನಿ' ಮುಸ್ಲಿಂ ಸಮುದಾಯಗಳ ಸದಸ್ಯರ ನಡುವೆ ಹಿಂಸಾತ್ಮಕ ಹೋರಾಟ ಮತ್ತು ಕಲ್ಲು ತೂರಾಟ ನಡೆಯಿತು. ಇದರ ಪರಿಣಾಮವಾಗಿ ಕೆಲವರಿಗೆ ಗಾಯಗಳಾಗಿವೆ. 

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಮೊಹರಂ ಮೆರವಣಿಗೆಯ ಸಂಗೀತ ವ್ಯವಸ್ಥೆಯು ಹೈ-ವೋಲ್ಟೇಜ್ ಕರೆಂಟ್ ಹೊಂದಿರುವ ವೈರ್‌ಗಳ ಸಂಪರ್ಕಕ್ಕೆ ಬಂದಾಗ ಇಬ್ಬರು ಮೃತಪಟ್ಟಿದ್ದು, 52 ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಮೃತರನ್ನು ಶಾನು (35) ಮತ್ತು ಓವೈಸ್ (13) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ನಾಲ್ವರನ್ನು ಚಿಕಿತ್ಸೆಗಾಗಿ ದೆಹಲಿಗೆ ಕಳುಹಿಸಲಾಗಿದೆ ಎಂದು ಅಮ್ರೋಹಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆದಿತ್ಯ ಲಾಂಗೆಹ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಸಿಕ್ಕ ಸಿಕ್ಕ ಕಾರುಗಳ ಮೇಲೆ ಶೂಟ್‌ ಮಾಡಿದ ಬೆತ್ತಲೆ ಮಹಿಳೆ: ವಿಡಿಯೋ ವೈರಲ್‌

ಮತ್ತೊಂದು ಮೊಹರಂ ಸಂಬಂಧಿತ ಘಟನೆಯಲ್ಲಿ, ಉತ್ತರ ಪ್ರದೇಶದ ಲಖನೌದಲ್ಲಿ  ಹೈ-ಟೆನ್ಷನ್ ತಂತಿಯ ಸಂಪರ್ಕಕ್ಕೆ ಬಂದ ನಂತರ ಬೆಂಕಿ ಹೊತ್ತಿಕೊಂಡು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಾರ್ಖಂಡ್‌ನಲ್ಲೂ ಅವಘಡ
ಜಾರ್ಖಂಡ್‌ನ ಬೊಕಾರೊದಲ್ಲಿ ಶನಿವಾರ ಮುಹರಂ ಮೆರವಣಿಗೆ ನಡೆಸುತ್ತಿದ್ದಾಗ ನಾಲ್ವರು ವಿದ್ಯುತ್ ಸ್ಪರ್ಶಿಸಿ, 13 ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಸಾಜಿದ್ ಅನ್ಸಾರಿ (18), ಆಶಿಫ್ ರಜಾ (21), ಗುಲಾಮ್ ಹುಸೇನ್ (19) ಮತ್ತು ಇನಾಮುಲ್ ರಬ್ (34) ಎಂದು ಗುರುತಿಸಲಾಗಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ; ಡೇಟಿಂಗ್ ಆ್ಯಪ್‌ನಲ್ಲಿ ಸ್ನೇಹ: ಮಹಿಳೆಗೆ ಮತ್ತು ಬರಿಸಿ ಗ್ಯಾಂಗ್‌ರೇಪ್‌; ಕೃತ್ಯ ಸೆರೆ ಹಿಡಿದ ಪಾಪಿಗಳು

ಗುಜರಾತ್‌ನಲ್ಲಿ ಇಬ್ಬರು ಬಲಿ
ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯಲ್ಲಿ ಮೊಹರಂ ಮೆರವಣಿಗೆ ನಡೆಸುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಇಬ್ಬರು ಸಾವಿಗೀಡಾಗಿದ್ದು, 22 ಜನರು ಗಾಯಗೊಂಡಿದ್ದಾರೆ. ಮೃತರನ್ನು ಜುನೈದ್ ಮಜೋತಿ (22) ಮತ್ತು ಸಾಜಿದ್ ಸಮಾ (20) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Manipur: ಬಿಎಸ್‌ಎಫ್‌ ಯೋಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ ; ಸಿಸಿ ಕ್ಯಾಮರಾದಲ್ಲಿ ಸೆರೆ

Follow Us:
Download App:
  • android
  • ios