Asianet Suvarna News Asianet Suvarna News

ಬೆಂಗಳೂರು: ದೂರವಾಗಿದ್ದ ಪ್ರಿಯಕರನ ಅಪಹರಿಸಿ ಥಳಿಸಿದ ಪ್ರಿಯತಮೆ..!

ಮನಸ್ತಾಪದಿಂದ ದೂರವಾಗಿದ್ದ ಪ್ರೇಮಿಗಳು, ಕೊನೆಯ ಭೇಟಿ ನೆಪದಲ್ಲಿ ಕರೆಸಿ ಗೋಡೌನ್‌ನಲ್ಲಿ ಬಂಧಿಸಿಟ್ಟು ದೌರ್ಜನ್ಯ

8 Arrested For Kidnap Case in Bengaluru grg
Author
Bengaluru, First Published Aug 28, 2022, 5:45 AM IST

ಬೆಂಗಳೂರು(ಆ.28):  ತನ್ನಿಂದ ದೂರವಾಗಿದ್ದ ಪ್ರಿಯಕರನನ್ನು ಅಪಹರಿಸಿ ದೌರ್ಜನ್ಯ ನಡೆಸಿದ್ದ ಆತನ ಪ್ರೇಯಸಿ ಹಾಗೂ ಪತಿ ಸೇರಿದಂತೆ ಎಂಟು ಮಂದಿಯನ್ನು ಹನುಮಂತನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ರಾಜರಾಜೇಶ್ವರಿ ನಗರದ ಎ.ಎಂ.ಕ್ಲಾರಾ, ಆಕೆಯ ಪತಿ ಮಧು, ಸಹಚರರಾದ ಸಂತೋಷಗೌಡ, ಹೇಮಾವತಿ, ಕಿರಣ್‌, ಅಶ್ವತ್ಥ್‌ ನಾರಾಯಣ್‌, ಲೋಕೇಶ್‌ ಹಾಗೂ ಮನು ಬಂಧಿತರಾಗಿದ್ದು, ಇತ್ತೀಚೆಗೆ ತನ್ನ ಪ್ರಿಯಕರ ಖಾಸಗಿ ಕಂಪನಿ ಉದ್ಯೋಗಿ ಮಹದೇವ್‌ ಪ್ರಸಾದ್‌ನನ್ನು ಕ್ಲಾರಾ ಅಪಹರಿಸಿದ ಬಳಿಕ ಮೈಸೂರು ರಸ್ತೆಯ ಬ್ಯಾಟರಾಯನಪುರದ ಟಿಂಬರ್‌ ಯಾರ್ಡ್‌ನ ಗೋದಾಮಿನಲ್ಲಿ ಅಕ್ರಮ ಬಂಧನಲ್ಲಿಟ್ಟು ದೌರ್ಜನ್ಯ ನಡೆಸಿ ಬಿಡುಗಡೆಗೊಳಿಸಿದ್ದರು. ಈ ಬಗ್ಗೆ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಭಟ್ಕಳ: ಬ್ರೆಡ್ ತರಲು ಅಂಗಡಿಗೆ ಹೋದ ಬಾಲಕ ಕಿಡ್ನ್ಯಾಪ್, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

‘ಜಸ್ಟ್‌ ಡಯಲ್‌’ನಲ್ಲಿ ಅರಳಿದ ಪ್ರೇಮ

ಸಾಫ್ಟ್‌ವೇರ್‌ ಉದ್ಯೋಗಿ ಮಹದೇವ ಪ್ರಸಾದ್‌, ಹನುಮಂತನಗರದ ಅಪ್ಪಾಜಿ ಕ್ಯಾಂಟೀನ್‌ ಹತ್ತಿರ ನೆಲೆಸಿದ್ದಾನೆ. ಆರು ತಿಂಗಳ ಹಿಂದೆ ಅಕ್ಯುಪಂಕ್ಚರ್‌ ಖರೀದಿ ಸಂಬಂಧ ಜಸ್ಟ್‌ ಡಯಲ್‌ನಲ್ಲಿ ಮೂಲಕ ಕರೆ ಮಾಡಿದ್ದಾಗ ಆತನಿಗೆ ಕ್ಲಾರಾಳ ಪರಿಚಯವಾಗಿದೆ. ಆಕ್ಯುಪಂಕ್ಚರ್‌ ವ್ಯವಹಾರದಲ್ಲಿ ಕ್ಲಾರ ತೊಡಗಿದ್ದಳು. ಈ ಸ್ನೇಹವಾದ ಬಳಿಕ ಇಬ್ಬರಲ್ಲಿ ಆತ್ಮೀಯತೆ ಮೂಡಿದ್ದು, ಕ್ರಮೇಣ ಪ್ರೇಮವಾಗಿದೆ. ತನ್ನ ಪತಿ ಮಧು ಜತೆ ಕೌಟುಂಬಿಕ ಕಾರಣಕ್ಕೆ ವಿಚ್ಛೇದನ ಪಡೆಯಲು ಕ್ಲಾರ ಮುಂದಾಗಿದ್ದಳು. ಹಾಗಾಗಿ ಮಹದೇವಪ್ರಸಾದ್‌ನನ್ನು ಕ್ಲಾರ ಪ್ರೇಮಿಸುತ್ತಿದ್ದಳು. ಹೀಗಿರುವಾಗ ವೈಯಕ್ತಿಕ ಕಾರಣಗಳಿಗೆ ಇವರಿಬ್ಬರ ಮಧ್ಯೆ ಮನಸ್ತಾಪವಾಗಿ ಕ್ಲಾರಾಳಿಂದ ಮಹದೇವ ಪ್ರಸಾದ್‌ ದೂರವಾಗಿದ್ದ ಎನ್ನಲಾಗಿದೆ.
ಇದಾದ ನಂತರ ಪತಿ ಮಧುಗೆ ಕ್ಲಾರಾಳ ಖಾಸಗಿ ಫೋಟೋಗಳು ಹಾಗೂ ಸಂದೇಶ ಕಳುಹಿಸಿ ಪ್ರಸಾದ್‌ ಅನುಚಿತವಾಗಿ ವರ್ತಿಸಿದ್ದ. ಇದರಿಂದ ಮಹದೇವ ಪ್ರಸಾದ್‌ಗೆ ಬುದ್ಧಿ ಕಲಿಸಲು ನಿನ್ನನ್ನು ಕೊನೆ ಬಾರಿ ಭೇಟಿಯಾಗಬೇಕು ಎಂದು ಹೇಳಿ ಆ.16ರಂದು ರಾತ್ರಿ ಮನೆಯಿಂದ ಕರೆಸಿಕೊಂಡಿದ್ದಳು. ನಂತರ ಮಾತನಾಡುವ ನೆಪದಲ್ಲಿ ಮೈಸೂರು ರಸ್ತೆಯ ಬ್ಯಾಟರಾಯನಪುರದ ಟಿಂಬರ್‌ ಯಾರ್ಡ್‌ ಹತ್ತಿರದ ಗೋದಾಮಿಗೆ ಆಕೆ ಕರೆದೊಯ್ದಿದ್ದಳು. ಈ ಕೃತ್ಯಕ್ಕೆ ಆಕೆಯ ಪತಿ ಹಾಗೂ ಸಹಚರರು ಸಾಥ್‌ ಕೊಟ್ಟಿದ್ದರು. ಆ ವೇಳೆ ಪ್ರಸಾದ್‌ ಮೇಲೆ ಹಲ್ಲೆ ನಡೆಸಿ ಮರುದಿನ ಆತನನ್ನು ಆರೋಪಿಗಳು ಬಿಟ್ಟು ಕಳುಹಿಸಿದ್ದರು. ಮೊದಲು ದೂರು ದಾಖಲಿಸಲು ಹಿಂದೇಟು ಹಾಕಿದ ಪ್ರಸಾದ್‌, ನಾಲ್ಕೈದು ದಿನಗಳ ಬಳಿಕ ಘಟನೆ ಕುರಿತು ಹನುಮಂತನಗರ ಠಾಣೆಗೆ ದೂರು ನೀಡಿದ್ದ. ಅದರಂತೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.

ಬೆಳಗಾವಿ: ಮಗು ಅಪಹರಣ ಕೇಸ್‌, ಆರು ಆರೋಪಿಗಳ ಬಂಧನ

ಅವಳಿಂದ ನನಗೆ ಕಿರುಕುಳ: ಪ್ರಸಾದ್‌

ಸಣ್ಣಪುಟ್ಟ ವಿಚಾರಗಳಿಗೆ ಕ್ಲಾರಾ ಕೋಪಿಸಿಕೊಳ್ಳುತ್ತಿದ್ದಳು. ಸಕಾರಣವಿಲ್ಲದೆ ತನ್ನ ಮೇಲೆ ಆರೋಪಿಸಿ ಕಿರುಕುಳ ನೀಡುತ್ತಿದ್ದಳು. ಅಲ್ಲದೆ ನಮ್ಮ ಖಾಸಗಿ ಕ್ಷಣದ ಭಾವಚಿತ್ರಗಳನ್ನು ಮುಂದಿಟ್ಟು ಹಣಕ್ಕಾಗಿ ಆಕೆ ಬ್ಲ್ಯಾಕ್‌ಮೇಲ್‌ ಸಹ ಮಾಡುತ್ತಿದ್ದಳು ಎಂದು ಸಂತ್ರಸ್ತ ಮಹದೇವ ಪ್ರಸಾದ್‌ ಪೊಲೀಸರಿಗೆ ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ.

ನನ್ನನ್ನು ಅನುಮಾನಿಸುತ್ತಿದ್ದ: ಕ್ಲಾರಾ

ತನ್ನನ್ನು ಪ್ರಸಾದ್‌ ಅನುಮಾನಿಸುತ್ತಿದ್ದ. ನಾನು ಮೊಬೈಲ್‌ ಯಾರೇ ಜೊತೆ ಮಾತನಾಡಿದರೂ ಆತ ಸಿಡಿಮಿಡಿಗೊಳ್ಳುತ್ತಿದ್ದ. ನಾನೇ ಆತನಿಗೆ .12 ಲಕ್ಷ ಕೊಟ್ಟಿದ್ದೇನೆ. ನಮ್ಮ ಖಾಸಗಿ ಕ್ಷಣದ ಪೋಟೋಗಳನ್ನು ಆತನೇ ಬೇರೆಯವರಿಗೆ ಕೊಟ್ಟು ಕಿರುಕುಳ ನೀಡುತ್ತಿದ್ದ ಎಂದು ವಿಚಾರಣೆ ವೇಳೆ ಆರೋಪಿ ಕ್ಲಾರ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
 

Follow Us:
Download App:
  • android
  • ios