ಕೋಲಾರ: ಕಾಂಗ್ರೆಸ್ ಮುಖಂಡನ ಬರ್ಬರ ಕೊಲೆ, 8 ಮಂದಿ ಬಂಧನ
ಬಂಧಿತ ಪ್ರಮುಖ ಆರೋಪಿ ವೇಣುಗೋಪಾಲ್ ಮತ್ತು ಶ್ರೀನಿವಾಸನ್ ಮಧ್ಯೆ ಹತ್ತು ವರ್ಷಗಳಿಂದ ವೈಷಮ್ಯ ಇತ್ತು. ಆರೋಪಿ ವೇಣುಗೋಪಾಲ್ ಮನೆಗೆ ಬೆಂಕಿ ಇಟ್ಟು ಸುಡಲಾಗಿತ್ತು. ಆಗ ಶ್ರೀನಿವಾಸನ್ ರವರ ಬೆಂಬಲಿಗರು ಕೃತ್ಯ ನಡೆಸಿದ್ದರು ಎಂದು ಶ್ರೀನಿವಾಸನ್ ಸೇರಿ ಅವರ ಬೆಂಬಲಿಗರ ಮೇಲೆ ಕೇಸು ದಾಖಲಾಗಿತ್ತು. ಇದಲ್ಲದೆ ಆಗಾಗ ಇಬ್ಬರ ಮಧ್ಯೆಯೂ ಜಗಳ ನಡೆಯುತ್ತಿದ್ದವಲ್ಲದೆ ಪ್ರಕರಣಗಳು ದಾಖಲಾಗುತ್ತಿದ್ದವು.
ಕೋಲಾರ(ಅ.25): ಜಿಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ರನ್ನು ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಕಾರ್ಯಾಚರಣೆ ವೇಳೆ ಪೊಲೀಸರು ಮೂವರು ಆರೋಪಿಗಳ ಮೇಲೆ ಗುಂಡು ಹಾರಿಸಿ, ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ.
ಗೃಹ ಮಂತ್ರಿ ಜಿ.ಪರಮೇಶ್ವರ್ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತರಾಗಿದ್ದ ಶ್ರೀನಿವಾಸನ್ ಸೋಮವಾರ ಬೆಳಗ್ಗೆ ೧೧.೩೦ರ ಸಂದರ್ಭದಲ್ಲಿ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಮುಳಬಾಗಿಲು ರಸ್ತೆಯ ಅವರ ತೋಟದ ಕೆಲಸ ಮಾಡಿಸುತ್ತಿದ್ದ ಸಂದರ್ಭದಲ್ಲಿ 6 ಮಂದಿ ಪರಿಚಿತರು ಆಗಮಿಸಿ ಥ್ಯಾಂಕ್ ಯು ಅಂಕಲ್ ಎಂದು ಹೇಳಿ, ಮುಖಕ್ಕೆ ಮೂರ್ಛೆ ತರಿಸುವಂತಹ ರಾಸಾಯನಿಕ ಎರಚಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಜೊತೆಯಲ್ಲಿದ್ದ ಚಾಲಕ ಅಮರ್ ಮತ್ತು ಕಾವಲುಗಾರ ಕೃಷ್ಣ ಭಯಗೊಂಡು ಪರಾರಿಯಾಗಿದ್ದರು.
ಹಾಡಹಗಲೇ ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಆಪ್ತನನ್ನು ಅಟ್ಟಾಡಿಸಿ ಕೊಲೆಗೈದ ದುಷ್ಕರ್ಮಿಗಳು
ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿ ವೇಣುಗೋಪಾಲ್ ಮತ್ತು ಶ್ರೀನಿವಾಸನ್ ಮಧ್ಯೆ ಹತ್ತು ವರ್ಷಗಳಿಂದ ವೈಷಮ್ಯ ಇತ್ತು. ಆರೋಪಿ ವೇಣುಗೋಪಾಲ್ ಮನೆಗೆ ಬೆಂಕಿ ಇಟ್ಟು ಸುಡಲಾಗಿತ್ತು. ಆಗ ಶ್ರೀನಿವಾಸನ್ ರವರ ಬೆಂಬಲಿಗರು ಕೃತ್ಯ ನಡೆಸಿದ್ದರು ಎಂದು ಶ್ರೀನಿವಾಸನ್ ಸೇರಿ ಅವರ ಬೆಂಬಲಿಗರ ಮೇಲೆ ಕೇಸು ದಾಖಲಾಗಿತ್ತು. ಇದಲ್ಲದೆ ಆಗಾಗ ಇಬ್ಬರ ಮಧ್ಯೆಯೂ ಜಗಳ ನಡೆಯುತ್ತಿದ್ದವಲ್ಲದೆ ಪ್ರಕರಣಗಳು ದಾಖಲಾಗುತ್ತಿದ್ದವು.
ಮುಳಬಾಗಿಲು ರಸ್ತೆಯ ಲಕ್ಷ್ಮೀಸಾಗರ ಅರಣ್ಯದಲ್ಲಿ ಅವಿತಿದ್ದ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಆರೋಪಿಗಳು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪ್ರಮುಖ ಆರೋಪಿ ವೇಣುಗೋಪಾಲ್ ಮತ್ತು ಇತರ ಮೂವರು ಆರೋಪಿಗಳ ಮೇಲೆ ಸರ್ಕಲ್ ಇನ್ಸ್‌ಪೆಕ್ಟರ್ ವೆಂಕಟೇಶ್ ಗುಂಡು ಹಾರಿಸಿ ಬಂಧಿಸಿದ್ದಾರೆ. ಕಲ್ಲೇಟಿನಿಂದ ಸರ್ಕಲ್ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಪೊಲೀಸರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟು ತಗುಲಿದ ಮೂವರು ಆರೋಪಿಗಳನ್ನು ಕೋಲಾರದ ಎಸ್.ಎನ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಮಧ್ಯಾಹ್ನದ ಒಳಗಾಗಿ ೮ ಆರೋಪಿಗಳನ್ನೂ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.