ಬೆಂಗಳೂರು(ಡಿ.16): ಖಾತೆಯಲ್ಲಿ ಹಣವಿಲ್ಲದಿದ್ದರೂ 7 ಲಕ್ಷ ರು. ಡ್ರಾ ಆಗಿರುವ ಬಗ್ಗೆ ಗ್ರಾಹಕರೊಬ್ಬರ ಮೊಬೈಲ್‌ಗೆ ಸಂದೇಶ ಬಂದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಈ ಸಂಬಂಧ ಸದಾಶಿವನಗರದ ಐಡಿಬಿಐ ಬ್ಯಾಂಕ್‌ ಶಾಖೆಯ ಮಾನ್ಯೇಜರ್‌ ಶಿಲ್ಲಿ ಕುರಿಯನ್‌ ಎಂಬುವರ ಕೊಟ್ಟ ದೂರಿನ ಮೇರೆಗೆ ಉತ್ತರ ವಿಭಾಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಐಡಿಬಿಐ ಬ್ಯಾಂಕಿನಲ್ಲಿ ಬ್ಲೂ ಮೂನ್‌ ಎಂಬ ಗ್ರಾಹಕರು ಖಾತೆ ಹೊಂದಿದ್ದು, 19 ರುಪಾಯಿ ಮಾತ್ರ ಹಣವಿತ್ತು. ಆದರೆ, ಡಿ.9ರಂದು ಎಟಿಎಂ ಕಾರ್ಡ್‌ ಬಳಸಿ ಬ್ಲೂ ಮೂನ್‌ ಅವರ ಖಾತೆಯಿಂದ ಹಂತ-ಹಂತವಾಗಿ 7.20 ಲಕ್ಷ ಡ್ರಾ ಆಗಿದ್ದು, ಈ ಸಂಬಂಧ ಅವರಿಗೆ ಸಂದೇಶ ಬಂದಿದೆ. ಹಣವಿಲ್ಲದ ತಮ್ಮ ಖಾತೆಯಿಂದ ಹೀಗೆ ಲಕ್ಷ ಲಕ್ಷ ಡ್ರಾ ಆಗಿರುವ ಸಂದೇಶ ಕಂಡು ಬ್ಲೂ ಮೂನ್‌ ಅಚ್ಚರಿಗೊಂಡಿದ್ದು, ಕೂಡಲೇ ಬ್ಯಾಂಕ್‌ನವರ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಶಾಖೆಯ ಮ್ಯಾನೇಜರ್‌ ದೂರು ನೀಡಿದ್ದಾರೆ.

ನಕಲಿ ಗನ್‌ ತೋರಿಸಿ ಸಾವಿರಾರು ರೂ. ಲೂಟಿ: ಸುಲಿಗೆ ಹಣದಿಂದ ಮಹದೇಶ್ವರನಿಗೆ ಕಾಣಿಕೆ..!

ಖಾತೆಯಲ್ಲಿ ಹಣ ಇಲ್ಲದಿದ್ದರೂ ಹೇಗೆ ಏಳು ಲಕ್ಷ ಬಂತು, ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಗ್ರಾಹಕರ ಖಾತೆ ಬಳಸಿ ಯಾರಾದರೂ ಹಣ ಹಾಕಿಕೊಂಡು ಡ್ರಾ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಬ್ಯಾಂಕ್‌ ಸಿಬ್ಬಂದಿ ಬಳಿ ಕೂಡ ಮಾಹಿತಿ ಪಡೆಯಲಾಗುತ್ತಿದೆ ಎಂದು ಸಿಇಎನ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.