ಬೆಂಗಳೂರು(ಫೆ.11): ನಕಲಿ ಡಿಡಿ ತಯಾರಿಸಿ ಬ್ಯಾಂಕ್‌ಗಳಿಗೆ ವಂಚಿಸಿ, ಹಣ ಲಪಟಾಯಿಸಲು ಯತ್ನಿಸಿದ್ದ ದಂಪತಿ ಸೇರಿದಂತೆ ನಾಲ್ವರು ಬೇಗೂರು ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬನ್ನೇರುಘಟ್ಟ ರಸ್ತೆಯ ವಾಜರಹಳ್ಳಿ ಇಂದ್ರಜಿತ್‌ ನಾಯಕ್‌ ಅಲಿಯಾಸ್‌ ಅರ್ಜುನ್‌, ಆತನ ಪತ್ನಿ ಮಂಜುಳಾ, ಸಹಚರರಾದ ಮುನಿರಾಜು ಹಾಗೂ ಜೆ.ಪಿ.ನಗರದ ಆನಂದ್‌ ಬಂಧಿತರು. ಆರೋಪಿಗಳಿಂದ ಪ್ರಿಂಟರ್‌, ಆರು ಸೀಲುಗಳು, ಮೊಬೈಲ್‌ ಹಾಗೂ 7.18 ಕೋಟಿ ಮೌಲ್ಯದ 25 ನಕಲಿ ಡಿಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿಗೆ ವ್ಯಾಪಾರಿ ಜಯರಾಮ್‌ ಅವರಿಗೆ ಕಮಿಷನ್‌ ಆಧಾರದಡಿ 4.95 ಲಕ್ಷ ನೀಡಿ ಇಂದ್ರಜಿತ್‌ ಹಣ ಪಡೆದಿದ್ದ. ಬಳಿಕ ಈ ಡಿಡಿಯನ್ನು ಫೆಡರಲ್‌ ಬ್ಯಾಂಕ್‌ನಲ್ಲಿ ಜಯರಾಮ್‌ ಜಮಾ ಮಾಡಲು ತೆರಳಿದ್ದಾಗ ನಕಲಿ ಎಂಬುದು ಗೊತ್ತಾಗಿದೆ. ಬಳಿಕ ಇಂದ್ರಜಿತ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ವಂಚನೆ ನಡೆದಿದ್ದು ಹೇಗೆ?

ಇಂದ್ರಜಿತ್‌ ಹಾಗೂ ಮಂಜುಳಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ವಾಜರಹಳ್ಳಿಯಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದಾರೆ. ಈ ಮೊದಲು ಇವೆಂಟ್‌ ಮ್ಯಾನೇಜ್ಮೆಂಟ್‌ ಸಂಸ್ಥೆ ನಡೆಸುತ್ತಿದ್ದ ಇಂದ್ರಜಿತ್‌, ಅದರಲ್ಲಿ ಆರ್ಥಿಕ ನಷ್ಟದಿಂದ ಸಮಸ್ಯೆಗೆ ಸಿಲುಕಿದ್ದ. ಈ ಹಿನ್ನೆಲೆಯಲ್ಲಿ ಸುಲಭವಾಗಿ ಹಣ ಸಂಪಾದನೆಗೆ ನಕಲಿ ಡಿಡಿ ದಂಧೆ ಶುರು ಮಾಡಿದ್ದ. ಆದರೆ ಪ್ರಥಮ ಯತ್ನದಲ್ಲೇ ಆತನ ಮೋಸದ ಕೃತ್ಯವು ಬಯಲಾಗಿ ಈಗ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವಂತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ರೂ. ಕದ್ದು ಪರಾರಿ..!

ಗ್ರಾಫಿಕ್ಸ್‌ ಡಿಸೈನರ್‌ ಆಗಿದ್ದ ಇಂದ್ರಜಿತ್‌ಗೆ ಅಸಲಿ ಡಿಡಿಯಂತೆಯೇ ನಕಲಿ ಡಿಡಿಗಳನ್ನು ಸಿದ್ಧಪಡಿಸಿ, ಬಳಿಕ ಆ ನಕಲಿ ಡಿಡಿಗಳನ್ನು ಯಾರಾದರೂ ಡಿಸ್ಕೌಂಟ್‌ ವ್ಯವಹಾರ ಮಾಡುವವರಿಗೆ ಕೊಟ್ಟು ಹಣ ಸಂಪಾದನೆ ಮಾಡೋಣವೆಂದು ಆತನ ಸ್ನೇಹಿತ ಮುನಿರಾಜು ತಿಳಿಸಿದ್ದ. ಈ ಪ್ರಸ್ತಾಪಕ್ಕೆ ಇಂದ್ರಜಿತ್‌ ಸಮ್ಮತಿಸಿದ್ದ. ಅಂತೆಯೇ ಮುನಿರಾಜುವಿನಿಂದ ಅಸಲಿ ಡಿಡಿ ಪಡೆದ ಇಂದ್ರಜಿತ್‌, ನಂತರ ತನ್ನ ಮನೆಯಲ್ಲಿ ಪತ್ನಿ ಜತೆ ಸೇರಿ ನಕಲಿ ಡಿಡಿಗಳನ್ನು ಸೃಷ್ಟಿಸಿದ್ದ. ಅಸಲಿ ಡಿಡಿಯನ್ನು ಸ್ಕಾ್ಯನ್‌ ಮಾಡಿ ಬಳಿಕ ಎಡಿಟ್‌ ಮಾಡಿ ಹಲವು ನಕಲಿ ಡಿಡಿ ತಯಾರಿಸಿದ್ದರು. ನಂತರ ಈ ಡಿಡಿಗಳಿಗೆ ಹಾಕಲು ಬೇಕಾಗುವ ಸೀಲ್‌ಗಳನ್ನು ಗೆಳೆಯ ಆನಂದ್‌ನಿಂದ ಇಂದ್ರಜಿತ್‌ ಪಡೆದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಸೆರೆಯಾಗಿದ್ದು ಹೇಗೆ?

ವ್ಯಾಪಾರಿ ಜಯರಾಮ್‌ ಅವರಿಗೆ ಸ್ವಾಮಿ ಎಂಬಾತನ ಮೂಲಕ ಇಂದ್ರಜಿತ್‌ ನಾಯಕ್‌ ಪರಿಚಯವಾಗಿದ್ದ. ನನಗೆ ತುರ್ತು ಹಣದ ಅಗತ್ಯವಿದೆ. ನನ್ನ ಬಳಿ ಶ್ರೀ ಬಿಲ್ಡ​ರ್‍ಸ್ ಅಂಡ್‌ ಡೆವಲಪ​ರ್‍ಸ್ ಎಂಬ ಹೆಸರಿನಲ್ಲಿ .4.95 ಲಕ್ಷ ಮೌಲ್ಯದ ಡಿಡಿ ಇದೆ. ಇದನ್ನು ವಿಲೇವಾರಿ ಮಾಡಿಕೊಡುವಂತೆ ಜಯರಾಮ್‌ಗೆ ಇಂದ್ರಜಿತ್‌ ವಿನಂತಿಸಿದ್ದ. ಈ ಮಾತಿಗೊಪ್ಪಿದ ಅವರು, ಕಮಿಷನ್‌ ಆಧಾರದಲ್ಲಿ ಆ ಡಿಡಿ ಪಡೆದು .1.5 ಲಕ್ಷ ಹಣ ನೀಡಿದ್ದರು. ಬಳಿಕ ಇಂದ್ರಜಿತ್‌ ಕೊಟ್ಟಡಿಡಿಯನ್ನು ಜಯರಾಮ್‌, ಫೆಡರಲ್‌ ಬ್ಯಾಂಕ್‌ನಲ್ಲಿ ತಮ್ಮ ಖಾತೆಗೆ ಜಮಾ ಮಾಡಿಸಿಕೊಳ್ಳಲು ಹೋಗಿದ್ದರು. ಆಗ ಬ್ಯಾಂಕ್‌ ಅಧಿಕಾರಿಗಳು, ಡಿಡಿಯನ್ನು ಪರಿಶೀಲಿಸಿ ನಕಲಿ ಎಂದಿದ್ದಾರೆ. ಕೂಡಲೇ ಬೇಗೂರು ಠಾಣೆಯಲ್ಲಿ ಜಯರಾಮ್‌ ದೂರು ದಾಖಲಿಸಿದ್ದರು. ಅದರನ್ವಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮೋಸದ ಜಾಲ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.