ಕೊಟ್ಟೂರು: ಉದ್ಯಮಿ ಅಪಹರಣ, 48 ಗಂಟೆಯಲ್ಲೇ ಆರೋಪಿಗಳ ಬಂಧನ
ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 16.52 ಲಕ್ಷ ವಶಪಡಿಸಿಕೊಂಡ ಪೊಲೀಸರು
ಕೊಟ್ಟೂರು(ಜು.23): ಬುಧವಾರ ನಡೆದ ಕೊಟ್ಟೂರು ಪಟ್ಟಣದ ರಿಯಲ್ ಎಸ್ಟೆಟ್ ವಹಿವಾಟು ನಡೆಸುತ್ತಿದ್ದ ಕಿರಣ್ ಟೈಲರ್ ಅಂಗಡಿ ಮಾಲೀಕ ಟಿ. ಹಾಲೇಶ ಅಪಹರಣದ ಪ್ರಕರಣವನ್ನು ಪೊಲೀಸರು 48 ಗಂಟೆಯೊಳಗೆ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 16.52 ಲಕ್ಷ ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಈ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಅಪಹರಣಕ್ಕೆ ಒಳಗಾದ ಟಿ. ಹಾಲೇಶ ಅವರಿಂದ ಅಪಹರಣಕಾರರು ಪಡೆದಿದ್ದ .20 ಲಕ್ಷ ಪೈಕಿ ಇನ್ನೂ .3.48 ಲಕ್ಷವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಬೇಕಿದೆ. ಕೆಲ ದಿನಗಳ ಹಿಂದೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಮಗು ಅಪಹರಣದ ಪ್ರಕರಣವನ್ನು ಸಹ ಇದೇ ರೀತಿ ಭೇದಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಹೇಳಿದರು.
SUVARNA FIR: ಮದುವೆಯಾದ ಬಳಿಕ ಮಾಜಿ ಪ್ರೇಯಸಿಯನ್ನು ಕೊಂದ ಪಾಗಲ್ ಪ್ರೇಮಿ!
ಹಾಲೇಶ ಅವರ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಲ್ತಾಫ್ (23), ಹಾಲೇಶ ವಹಿವಾಟು ಮತ್ತು ಆತನು ಹೊಂದಿರುವ ಜಮೀನುಗಳ ವಿವರಗಳನ್ನು ಇತರ ಆರೋಪಿಗಳ ಗಮನಕ್ಕೆ ತಂದಿದ್ದ. ಈ ವಿಷಯ ಗೊತ್ತಾಗುತ್ತಿದ್ದಂತೆ ಹಾಲೇಶನನ್ನು ಅಪಹರಣ ಮಾಡುವ ಸಂಚನ್ನು ರೂಪಿಸಿದ್ದರು. ಜುಲೈ 20 ಬುಧವಾರ ಕಿರಣ್ ಟೈಲರ್ ಅಂಗಡಿ ಬಳಿ ಟೋಯೋಟಾ ಇಟಿಯೋಸ್ ಕಾರನೊಂದಿಗೆ ಬಂದು ಸೈಟ್ ಖರೀದಿಸಬೇಕಿದ್ದು, ನಮಗೆ ಸೂಕ್ತ ಸೈಟ್ ತೋರಿಸುವಂತೆ ಬೇಡಿಕೆ ಇಟ್ಟಿದ್ದರು. ಇದನ್ನು ನಂಬಿದ ಹಾಲೇಶ ಆರೋಪಿಗಳೊಂದಿಗೆ ಕಾರಿನಲ್ಲಿ ತೆರಳಿದರು. ಕಾರು ಹಾಲೇಶ ಸೈಟ್ ಇರುವ ಕಡೆಗೆ ಪ್ರಯಾಣ ಬೆಳಸದಿದ್ದಾಗ ಹಾಲೇಶ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಂತೆ ಚಾಕು, ಮಚ್ಚು ತೋರಿಸಿ ಶಿವಮೊಗ್ಗದ ಕಡೆಗೆ ಪ್ರಯಾಣ ಬೆಳಸಿದ್ದರು. ನಂತರ ಹಾಲೇಶಗೆ .80 ಲಕ್ಷ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು. ನನ್ನ ಬಳಿ ಅಷ್ಟೊಂದು ಹಣ ಇಲ್ಲ ಎಂದು ಹೇಳಿದಾಗ ಕೊನೆಗೆ 20 ಲಕ್ಷ ರೂಪಾಯಿಗೆ ಒಪ್ಪಿಕೊಂಡರು.
ಬುಧವಾರ ರಾತ್ರಿ 8ರ ಸುಮಾರಿಗೆ ಪುನಃ ಕೊಟ್ಟೂರಿಗೆ ಕರೆದುಕೊಂಡು ಬಂದು ಹಾಲೇಶ ಸಂಬಂಧಿಕರಿಂದ .20 ಲಕ್ಷ ಪಡೆದು ನಂತರ ಹಾಲೇಶನನ್ನು ಬಿಡುಗಡೆಗೊಳಿಸಿದ್ದರು. ಈ ಬೆಳವಣಿಗೆ ನಂತರ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಹಾಲೇಶ ದೂರು ದಾಖಲಿಸಿದ್ದರು.
ಮದುವೆ ದಿನವೇ ಮಸಣ ಸೇರಿದ ವರ; ದೇವರೇ ಇದೆಂಥ ಸಾವು!
ಡಿ.ವೈ.ಎಸ್.ಪಿ ಜಿ. ಹರೀಶ್ ಮಾರ್ಗದರ್ಶನದಲ್ಲಿ 3 ವಿಶೇಷ ಪೊಲೀಸ್ ತನಿಖಾ ತಂಡವನ್ನು ರಚಿಸಿಕೊಂಡು ಆರೋಪಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡರು. ಕೊಟ್ಟೂರು ಸಿಪಿಐ ಸೋಮಶೇಖರ ಹೆಚ್. ಕೆಂಚಾರೆಡ್ಡಿ, ನೇತೃತ್ವದಲ್ಲಿ ಒಂದು ತಂಡ, ಹಗರಿಬೊಮ್ಮನಹಳ್ಳಿ ಸಿಪಿಐ ಮಂಜಣ್ಣ ನೇತೃತ್ವದ ತಂಡ, ಚಿತ್ತವಾಡಿಗಿ ಸರ್ಕಲ್ ಇನಸ್ಪೆಕ್ಟರ್ ನೇತೃತ್ವದ 3 ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ತೀವ್ರ ಬಗೆಯ ಕಾರ್ಯಾಚರಣೆ ನಂತರ ಈ ಪ್ರಕರಣದ ಆರೋಪಿಗಳಾದ ಮಂಜು(26) ದಾವಣಗೆರೆ, ಶಾಂತಕುಮಾರ (24) ಜಗಳೂರು, ರಾಕೇಶ (19) ಮಾಳಗೊಂಡನಹಳ್ಳಿ, ಚಿರಾಗ್(19) ಜಗಳೂರು, ಶಿವಕುಮಾರ (21) ರಾಣಿಬೆನ್ನೂರು, ರಾಹುಲ್ (21) ಕಂದಗಲ್ -ದಾವಣಗೆರೆ, ಆಲ್ತಾಫ್ (23) ಜಗಳೂರು ಇವರುಗಳನ್ನು ಪೊಲೀಸರ ತಂಡಗಳು ಸಿನಿಮಿಯ ರೀತಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ಟಯೋಟಾ ಇಟಿಯೋಸ್ ಕಾರ್, 5 ಮೊಬೈಲ್, 2 ಮಚ್ಚು, 2 ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಈ ಕಾರ್ಯಾಚರಣೆಗೆ ಎಸ್‌ಪಿ ಡಾ. ಕೆ.ಅರುಣ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಡಿವೈಎಸ್‌ಪಿ ಜಿ.ಹರೀಶ, ಸಿಪಿಐಗಳಾದ ಸೋಮಶೇಖರ ಹೆಚ್. ಕೆಂಚಾರೆಡ್ಡಿ, ಟಿ. ಮಂಜಣ್ಣ, ಕೊಟ್ಟೂರು ಪಿಎಸ್‌ಐ ವಿಜಯಕೃಷ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.