ತಿರುವನಂತಪುರಂನ ನೆಡುಮಂಗಾಡ್‌ನಲ್ಲಿ 13 ವರ್ಷದ ಮಗುವಿನ ಮೇಲೆ ಅತ್ಯಾ೧ಚಾರ ಎಸಗಿದ 60 ವರ್ಷದ ಆಟೋ ಚಾಲಕನನ್ನು ಬಂಧಿಸಲಾಗಿದೆ. ನೆಡುಮಂಗಾಡ್‌ನ ಪತ್ತಂಕಲ್ಲು ನಿವಾಸಿ ಶಿಯಾದ್ ಮೊಯ್ದೀನ್ ಬಂಧಿತ ಆರೋಪಿ.
ತಿರುವನಂತಪುರಂ: ಕೇರಳದ ನೆಡುಮಂಗಾಡ್‌ನಲ್ಲಿ ಬಾಲಕನೊಬ್ಬನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವೃದ್ಧ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯರ ಜಾಗರೂಕತೆಯಿಂದಾಗಿ ಈ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಜೈಲಿಗಟ್ಟಲಾಗಿದೆ.
ಹತ್ತು ರೂಪಾಯಿ ನೀಡಿ ಬಾಲಕನ ಮೇಲೆ ದೌರ್ಜನ್ಯ
ನೆಡುಮಂಗಾಡ್ ಮೂಲದ ಶಿಯಾದ್ ಮೊಯ್ದೀನ್ (60) ಎಂಬ ಆಟೋ ಚಾಲಕ ಕಳೆದ ಅಕ್ಟೋಬರ್‌ನಿಂದಲೂ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಪತ್ತಮಕಲ್ಲುವಿನ ಮೈದಾನದಲ್ಲಿ ಸೈಕಲ್ ಕಲಿಯಲು ಬರುತ್ತಿದ್ದ ಬಾಲಕನೊಂದಿಗೆ ಮೊದಲು ಸ್ನೇಹ ಬೆಳೆಸಿದ ಈತ, ನಂತರ ಆತನನ್ನು ತನ್ನ ಆಟೋದಲ್ಲಿ ಖಾಲಿ ಹೊಲವೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಘಟನೆಯ ಬಳಿಕ ಬಾಲಕನಿಗೆ ಕೇವಲ 10 ರೂಪಾಯಿ ನೀಡಿ, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಪ್ರಾಣ ಬೆದರಿಕೆ ಹಾಕಿದ್ದ.
ಸ್ಥಳೀಯರ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದ ಕಾಮುಕ
ಬಾಲಕನಿಗೆ ಬೆದರಿಕೆ ಹಾಕಿದ್ದ ಆರೋಪಿ, ಇದನ್ನೇ ಬಂಡವಾಳ ಮಾಡಿಕೊಂಡು ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದನು. ನಿನ್ನೆ ಕೂಡ ಖಾಲಿ ಹೊಲವೊಂದರಲ್ಲಿ ಆಟೋ ನಿಂತಿದ್ದನ್ನು ಕಂಡು ಅನುಮಾನಗೊಂಡ ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ಶಿಯಾದ್‌ನ ಅಸಲಿ ರೂಪ ಬಯಲಾಗಿದೆ. ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸುತ್ತಿದ್ದ ಆಟೋ ಚಾಲಕನನ್ನು ಸಾರ್ವಜನಿಕರೇ ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು: ಆರೋಪಿ ರಿಮಾಂಡ್
ಪೊಲೀಸ್ ವಿಚಾರಣೆಯ ವೇಳೆ ಬಾಲಕನು ತನಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಬಗ್ಗೆ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆರೋಪಿ ಶಿಯಾದ್ ಮೊಯ್ದೀನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ (ರಿಮಾಂಡ್) ಒಪ್ಪಿಸಿದ್ದಾರೆ.


