ಮಂಗಳೂರು(ಫೆ.26): ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಕೇರಳದ ಕಾಸರಗೋಡಿನ ಇಬ್ಬರನ್ನು ಕಸ್ಟಮ್ಸ್‌ ಅಧಿಕಾರಿಗಳು ಪ್ರತ್ಯೇಕ ಪ್ರಕರಣಗಳಲ್ಲಿ ಬುಧವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 60 ಲಕ್ಷ ರು. ಮೌಲ್ಯದ 1,267 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.

ಕಾಸರಗೋಡಿನ ಪೈವಳಿಕೆ ನಿವಾಸಿ ಅಬ್ದುಲ್‌ ರಶೀದ್‌ ಎಂಬಾತ ಚಿನ್ನದ ಪೌಡರ್‌ನ್ನು ಗಮ್‌ ಮೂಲಕ ಅಂಟಿಸಿ ಪಾರದರ್ಶಕ ಪ್ಲಾಸ್ಟಿಕ್‌ ಕವರ್‌ನಲ್ಲಿ ಕಟ್ಟಿಬ್ಲೂ ಕಲರ್‌ ಟೇಪ್‌ನಲ್ಲಿ ಸುತ್ತಿ ಸಾಗಾಟ ಮಾಡಿದ್ದ. ಅದನ್ನು ಪಾರ್ಕಿಂಗ್‌ ಸ್ಥಳದಲ್ಲಿರುವ ಶೌಚಗೃಹದಲ್ಲಿ ಇರಿಸಿದ್ದ. ಈ ಮೊದಲು ಈತ 30,75,160 ರು. ಮೌಲ್ಯದ 638 ಗ್ರಾಂ ಚಿನ್ನ ಅಕ್ರಮ ಸಾಗಾಟ ಮಾಡಿದ್ದ.

ಗುದನಾಳದಲ್ಲಿ 9 ಜನರಿಂದ 9 ಕೇಜಿ ಅಕ್ರಮ ಚಿನ್ನ ಸಾಗಣೆ!

ಇನ್ನೊಂದು ಪ್ರಕರಣದಲ್ಲಿ ಕಾಸರಗೋಡು ನಿವಾಸಿ ಅಬ್ದುಲ್‌ ನಿಸಾದ್‌ ಯಾನೆ ಪುಲಿಕೂರು ಮೂಸ ದುಬೈಯಿಂದ ಆಗಮಿಸಿದ್ದು, ಪೆನ್‌ ಹಾಗೂ ಟಾರ್ಚ್‌ ಬ್ಯಾಟರಿ ಒಳಗಿಟ್ಟು 30,26,933 ರು. ಮೌಲ್ಯದ 629 ಗ್ರಾಂ ಚಿನ್ನವನ್ನು ಅಕ್ರಮ ಸಾಗಾಟ ಮಾಡಿದ್ದ. ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ವೇಳೆ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಕಸ್ಟಮ್ಸ್‌ ಅಧಿಕಾರಿಗಳಾದ ಅವಿನಾಶ್‌ ಕುಮಾರ್‌, ಪ್ರವೀಣ್‌ ಖಂಡಿ, ರಾಕೇಶ್‌ ಕುಮಾರ್‌, ಬೂಮ್‌ಕರ್‌, ಶ್ರೀಕಂಠ ಕೆ.ಸುಪ್ತಾ ಕಾರ್ಯಾಚರಣೆ ನಡೆಸಿದ್ದರು.