ಚೆನ್ನೈ(ಜ.25): ಕಳೆದ 3 ದಿನಗಳಿಂದ ದುಬೈ ಮತ್ತು ಶಾರ್ಜಾದ ನಗರಗಳಿಂದ ಭಾರತಕ್ಕೆ ಅಕ್ರಮವಾಗಿ ತರಲಾಗಿದ್ದ 9 ಆರೋಪಿಗಳನ್ನು ಬಂಧಿಸುವಲ್ಲಿ ಚೆನ್ನೈ ವಿಮಾನ ನಿಲ್ದಾಣದ ಸೀಮಾಸುಂಕ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅಲ್ಲದೆ ಬಂಧಿತರ ಗುದನಾಳ ಸೇರಿದಂತೆ ಇನ್ನಿತರೆಡೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ 9 ಕೇಜಿಯಷ್ಟುಚಿನ್ನವನ್ನು ಸಹ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ದುಬೈ ಮತ್ತು ಶಾರ್ಜಾದ ನಗರಗಳಿಂದ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟಾರೆ 17 ಮಂದಿ ವಿದೇಶದಿಂದ ಅಕ್ರಮ ಚಿನ್ನವನ್ನು ಭಾರತಕ್ಕೆ ತರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರಯಾಣಿಕರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಲಾಗಿದ್ದು, ಈ ವೇಳೆ 48 ಬಂಡಲ್‌ಗಳಲ್ಲಿದ್ದ 9.03ರಷ್ಟು ಕೇಜಿ ಚಿನ್ನವು ಆರೋಪಿಗಳ ಗುದನಾಳದಲ್ಲಿ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ ಬ್ಯಾಗ್‌ ಮತ್ತು ಪಾಕೆಟ್‌ಗಳಲ್ಲಿ 12 ಚಿನ್ನದ ಗಟ್ಟಿಗಳು, ಚಿನ್ನದ ಸರ ಸೇರಿದಂತೆ ಇನ್ನಿತರ ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.