ಭಾರತದಲ್ಲಿ ಇಂದಿಗೂ ಬಗೆಹರಿಯದ 6 ಪ್ರಮುಖ ಕೊಲೆ ಪ್ರಕರಣಗಳಿವು!
ಭಾರತದಲ್ಲಿ ಅದೆಷ್ಟೋ ಕೊಲೆಗಳಾಗಿವೆ. ಆದರೆ, ದಕ್ಷ ಪೊಲೀಸ್ ಅಧಿಕಾರಿಗಳು ತನಿಖೆಯ ಜಾಡು ಹಿಡಿದು ಅದನ್ನು ಮಾಡಿದವರು ಯಾರು ಅನ್ನೋದನ್ನು ಕಂಡುಹಿಡಿದ್ದಾರೆ. ಆದರೆ, ಇಲ್ಲಿರುವ ಆರು ಪ್ರಮುಖ ಕೊಲೆ ಕೇಸ್‌ಗಳು ಇಡೀ ದೇಶವನ್ನು ತಲ್ಲಣಗೊಳಿಸಿದ್ದು ಮಾತ್ರವಲ್ಲ, ಇಂದಿಗೂ ಕೂಡ ಬಗೆಹರಿಯದೇ ಉಳಿದುಕೊಂಡಿವೆ.

ಬೆಂಗಳೂರು (ಸೆ.14): ಭಾರತದಲ್ಲಿ ಕೆಲವೊಂದು ಪ್ರತಿದಿನದಂತೆ ಕೊಲೆಗಳು ಆಗುತ್ತವೆ. ಆದರೆ, ಪೊಲೀಸ್ ಇಲಾಖೆ ಈಗ ಎಷ್ಟು ದಕ್ಷವಾಗಿದೆಯೆಂದರೆ, ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೆಲವೇ ಹೊತ್ತಲ್ಲಿ ಆರೋಪಿಗಳು ಯಾರು ಅನ್ನೋದನ್ನು ಪತ್ತೆ ಮಾಡಲು ಯಶಸ್ವಿಯಾಗುತ್ತದೆ. ಆದರೆ, ಈ ಎಲ್ಲಾ ಆಧುನಿಕ ತಂತ್ರಜ್ಞಾನಗಳ ಮೂಲಕ ತನಿಖೆಯ ಲೀಡ್ ಸಿಗುತ್ತಿರುವುದು ತೀರಾ 10 ವರ್ಷದಿಂದೀಚೆಗೆ. ಅದಕ್ಕೂ ಮುನ್ನ ಚಾಣಾಕ್ಷ ಪೊಲೀಸರ ಯೋಚನೆಗಳೇ ಆರೋಪಿಗಳನ್ನು ಹಿಡಿಯಲು ಯಶಸ್ವಿಯಾಗುತ್ತಿದ್ದವು. ಆದರೆ, ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿಯೂ ಇಂದಿಗೂ ಬಗೆಹರಿಯದೇ ಉಳಿದುಕೊಂಡ ಹಲವಾರು ಕೊಲೆ ಕೇಸ್‌ಗಳು ನಮ್ಮ ನಡುವೆ ಇದೆ. ಇದರಲ್ಲಿ ಅಂಥ ಆರು ಪ್ರಮುಖ ಬಗೆಹರಿಯದ ಕೊಲೆ ಕೇಸ್‌ಗಳ ವಿವರಗಳನ್ನು ನೀಡಲಾಗಿದೆ.
1. ಸ್ಟೋನ್‌ಮನ್ ಮರ್ಡರ್: 1985 ರಿಂದ 1989ರ ಅವಧಿ. ಕೋಲ್ಕತ್ತ ಹಾಗೂ ಮುಂಬೈನಲ್ಲಿ ಒಂದೆ ತೆರನಾದ ಕೊಲೆ ಕೇಸ್‌ಗಳು ದಾಖಲಾಗಿದ್ದವು. 1989ರಲ್ಲಿ ಕೋಲ್ಕತ್ತದಲ್ಲಿ ಅಂದಾಜು 13 ಮಂದಿಯನ್ನು ಮಲಗಿದ್ದಲ್ಲಿಯೇ ಕೊಲೆ ಮಾಡಲಾಗಿತ್ತು. 1985 ರಿಂದ 1988ರ ಅವಧಿಯಲ್ಲಿ ಮುಂಬೈನಲ್ಲಿ ಕೂಡ ಇದೇ ರೀತಿಯ ಕೊಲೆಗಳು ನಡೆದಿದ್ದವು. ಕೋಲ್ಕತ್ತದ ಪ್ರಸಿದ್ಧ ಪತ್ರಿಕೆ ಈ ಕೊಲೆಗಳಿಗೆ 'ದಿ ಸ್ಟೋನ್‌ಮನ್' ಎನ್ನುವ ಹೆಸರು ನೀಡಿತ್ತು. ಅಂದಿನಿಂದಲೂ ಎರಡು ನಗರಗಳಲ್ಲಿ ನಡೆದ ಬರೋಬ್ಬರಿ 26 ಕೊಲೆ ಪ್ರಕರಣಗಳಿಗೆ ಒಬ್ಬನೇ ಕಾರಣ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕೇವಲ 6 ತಿಂಗಳಲ್ಲಿಯೇ ಈತ 13 ಕೊಲೆಗಳನ್ನು ಮಾಡಿದ್ದ. ಇದನ್ನು ಒಬ್ಬ ವ್ಯಕ್ತಿ ಮಾಡಿದ್ದಾನೆಯೇ ಅಥವಾ ಕೊಲೆಗಡುಕರ ಗುಂಪು ಮಾಡಿದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಒಂದೇ ತೆರನಾದ ಈ ಕೊಲೆಗಳನ್ನು ಮಾಡಿದ್ದು ಯಾರು ಅನ್ನೋದು ತಿಳಿಯಲು ಕೋಲ್ಕತ್ತಾ ಪೊಲೀಸ್‌ಗೆ ಇಲ್ಲಿಯವರೆಗೂ ಸಾಧ್ಯವಾಗಲಿಲ್ಲ. ಈ 26 ಕೊಲೆಗಳಿಗೆ ಆರೋಪಿ ಯಾರು ಎನ್ನುವುದೇ ಗೊತ್ತಾಗದ ಕಾರಣ, ಇಂದಿಗೂ ಕೂಡ ಈ ಕೊಲೆಗಾರ ಅನಾಮಿಕನಾಗಿಯೇ ಉಳಿದಿದ್ದಾನೆ.
2. ಲಾಲ್ ಬಹದ್ದೂರ್ ಶಾಸ್ತ್ರೀ: ತಮ್ಮ ಸರಳ ಸ್ವಭಾವದಿಂದಲೇ ಜನಮಾನಸದಲ್ಲಿ ಹೆಸರು ಸಂಪಾದಿಸಿದ ದೇಶದ 2ನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವು ಕೂಡ ಇಂದಿಗೂ ಬಗೆಹರಿದಿಲ್ಲ. ಲಾಲ್ ಬಹದ್ದೂರ್ ಶಾಸ್ತ್ರಿ ಹೇಗೆ ಸಾವು ಕಂಡರು ಎನ್ನುವುದು ಇನ್ನೂ ಅನುಮಾನವಾಗಿಯೇ ಉಳಿದುಕೊಂಡಿದೆ. ಕಾರ್ಡಿಯಾಕ್ ಅರೆಸ್ಟ್‌ನಿಂದ ಸಾವು ಕಂಡರು ಎಂದು ಹೇಳಲಾಗಿದ್ದರೂ, ಅವರ ಮರಣೋತ್ತರ ಪರೀಕ್ಷೆಯನ್ನೂ ಮಾಡಿರಲಿಲ್ಲ. ರಷ್ಯಾದಲ್ಲಿ 1966ರಲ್ಲಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ಗಂಟೆಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಸಾವು ಕಂಡಿದ್ದರು. ಶಾಸ್ತ್ರಿ ಅವರಿಗೆ ವಿಷವಿಟ್ಟು ಸಾಯಿಸಲಾಗಿತ್ತು ಎನ್ನುವ ಆರೋಪಗಳು ಇದ್ದವು. ಈ ಕುರಿತಾಗಿ ಸಲ್ಲಿಕೆಯಾದ ಯಾವ ಆರ್‌ಟಿಐ ಅರ್ಜಿಗೂ ಈವರೆಗೂ ಸಮಪರ್ಕ ಉತ್ತರ ಬಂದಿಲ್ಲ.
3. ಆರುಷಿ ತಲ್ವಾರ್ ಕೊಲೆ ಪ್ರಕರಣ: 2008ರ ನೋಯ್ಡಾ ಡಬಲ್ ಮರ್ಡರ್ ಕೇಸ್ ಈ ಪಟ್ಟಿಯಲ್ಲಿ ಇನ್ನೊಂದು. ಭಾರತದಲ್ಲಿ ಈವರೆಗೂ ನಡೆದ ಅತ್ಯಂತ ಆಘಾತಕಾರಿ ಹಾಗೂ ವಿಸ್ಮಯಗೊಳಿಸಿದಂಥ ಕೊಲೆ ಕೇಸ್ ಇದು. 13 ವರ್ಷದ ಆರುಷಿ ತಲ್ವಾರ್ ಹಾಗೂ 45 ವರ್ಷದ ಮನೆಗೆಲಸದ ವ್ಯಕ್ತಿ ಹೇಮರಾಜ್‌ರನ್ನು 2008ರ ಮೇ 15 ಹಾಗೂ 16 ರಂದು ಯಾರು ಕೊಲೆ ಮಾಡಿದರು ಎನ್ನುವುದು ಇನ್ನೂ ಬಗೆಹರಿದಿಲ್ಲ. ಆರುಷಿಯ ತಂದೆ-ತಾಯಿ ಆದ ಡಾ.ರಾಜೇಶ್ ತಲ್ವಾರ್ ಹಾಗೂ ನಿಧಿ ತಲ್ವಾರ್ ಪ್ರಮುಖ ಶಂಕಿತರು ಎಂದು ಹೇಳಲಾದರೂ. ಇವರಿಬ್ಬರೂ ಮಾತ್ರ ಕೊಲೆ ತಾವು ಮಾಡಿಲ್ಲ ಎಂದೇ ಈವರೆಗೂ ಹೇಳಿದ್ದಾರೆ.
4. ಸುನಂದಾ ಪುಷ್ಕರ್: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅನುಮಾನಾಸ್ಪದವಾಗಿ 2014ರಲ್ಲಿ ಸಾವು ಕಂಡಿದ್ದರು. ಈಕೆಯ ಸಾವಿಗೂ ಕೆಲ ದಿನ ಮುನ್ನ ಶಶಿ ತರೂರ್ ಅವರ ಟ್ವಿಟರ್ ಪೇಜ್‌ನಲ್ಲಿ ಕೆಲವು ಸಂದೇಶಗಳು ಪೋಸ್ಟ್ ಆಗಿದ್ದವು. ಇದು ಶಶಿ ತರೂರ್ ಹಾಗೂ ಪಾಕಿಸ್ತಾನಿ ಜರ್ನಲಿಸ್ಟ್ ಮೆಹರ್ ನಡುವಿನ ಸಂಭಾಷಣೆ ಎಂದು ಹೇಳಲಾಗಿತ್ತು. ಆದರೆ, ಇಬ್ಬರೂ ಕೂಡ ತಮ್ಮ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿತ್ತು ಎಂದು ಹೇಳಿದ್ದರು. ಅದರೆ, ಸುನಂದಾ ಪುಷ್ಕರ್ ಇದನ್ನು ತಾನೇ ಮಾಡಿದ್ದು ಎಂದು ಹೇಳಿದ್ದರು. ಅದಾದ ಮರುದಿನ ಶಶನಿ ಹಾಗೂ ಸುನಂದಾ ಪುಷ್ಕರ್ ತಾವು ಮದುವೆಯಿಂದ ಖುಷಿಯಾಗಿದ್ದೇವೆ ಎಂದು ಹೇಳಿದ್ದಷ್ಟೇ, ಅದೇ ದಿನ ಆಕೆ ತನ್ನ ಹೋಟೆಲ್ ರೂಮ್‌ನಲ್ಲಿ ಶವವಾಗಿದ್ದಳು. ವಿಷ ಅಥವಾ ಡ್ರಗ್ ಓವರ್‌ಡೋಸ್‌ನಿಂದ ಸಾವು ಕಂಡಿರಬಹುದು ಎಂದು ಹೇಳಲಾಗಿದ್ದರೂ, ಇನ್ನೂ ಈ ಕೇಸ್ ಬಗೆಹರಿದಿಲ್ಲ.
5. ಅಮರ್ ಸಿಂಗ್ ಚಮ್ಕೀಲಾ ಮತ್ತು ಅಮರ್‌ಜೋತ್ ಕೌರ್: ಪ್ರಖ್ಯಾತ ಪಂಜಾಬಿ ಗಾಯಕ ಅಮರ್ ಸಿಂಗ್ ಚಮ್ಕೀಲಾ ಹಾಗೂ ಆತನ ಪತ್ನಿ ಅಮರ್‌ಜೋತ್ ಕೌರ್ ಜೊತೆ ಅವರ ಮ್ಯೂಸಿಕ್ ಬ್ಯಾಂಡ್‌ನ ಇಬ್ಬರು 1988ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿದ್ದರು. ಅನಾಮಿಕ ಗುಂಪು ಇವರ ಕೊಲೆ ಮಾಡಿತ್ತು. ತನ್ನ ಸಂಗೀತಗಳಲ್ಲಿ ಅತಿಯಾದ ಡ್ರಗ್ ಬಳಕೆ ಹಾಗೂ ಪ್ರೀತಿಯಿಂದಾಗುವ ಹಾನಿ ಬಗ್ಗೆ ಹೇಳುತ್ತಿದ್ದ ಅಮರ್ ಸಿಂಗ್ ಚಮ್ಕೀಲಾ ಯುವ ಜನಾಂಗದ ಆಕ್ರೋಶಕ್ಕೂ ತುತ್ತಾಗಿದ್ದರು. ಇದೇ ಇವರ ಸಾವಿಗೆ ಕಾರಣವಾಗಿತ್ತು ಎನ್ನಲಾಗಿದೆ. ಪಂಜಾಬ್‌ನ ಮೆಹ್ಸಾಂಪುರದಲ್ಲಿ ಬೈಕ್‌ನಲ್ಲಿ ಬಂದ ಕೆಲ ವ್ಯಕ್ತಿಗಳು ಶೂಟ್ ಮಾಡಿ ಇವರನ್ನು ಸಾಯಿಸಿದ್ದರು. ಆದರೆ, ಇಂದಿಗೂ ಕೊಲೆಗಡುಕರು ಸಿಕ್ಕಿಲ್ಲ.
6. ಶೀನಾ ಬೋರಾ ಕೊಲೆ ಪ್ರಕರಣ: ಮುಂಬೈನ ಮೆಟ್ರೋ ಒನ್‌ನಲ್ಲಿ ಕೆಲಸಕ್ಕಿದ್ದ ಶೀನಾ ಬೋರಾ 2012ರ ಏಪ್ರಿಲ್ 24ರಂದು ನಾಪತ್ತೆಯಾಗಿದ್ದರು. 2015ರಲ್ಲಿ ಮುಂಬೈ ಪೊಲೀಸ್ ಈಕೆಯ ತಾಯಿ ಇಂದ್ರಾಣಿ ಮುಖರ್ಜಿ, ಈಕೆಯ ಮಲತಂದೆ ಪೀಟರ್ ಮುಖರ್ಜಿ ಹಾಗೂ ಕಾರಿನ ಚಾಲಕನನ್ನು ಬಂಧಿಸಿದ್ದರು. ಶೀನಾ ಬೋರಾರನ್ನು ಅಪಹರಿಸಿ, ಕೊಂದು ಆಕೆಯ ದೇಹವನ್ನು ಸುಟ್ಟ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು. ತನಿಖೆಯ ಮೇಳೆ ಸಾಕಷ್ಟು ವಿಚಾರಗಳು ಬಂದರೂ, ಈ ಕೊಲೆಯನ್ನು ಹೇಗೆ ಮಾಡಲಾಯ್ತು, ಅನ್ನೋದರ ಸಂಪೂರ್ಣ ವಿವರ ಗೊತ್ತಾಗಿಲ್ಲ.
ಮನಸ್ಸು ಸರಿಯಾಗಿಲ್ಲವೆಂದು 10 ತಿಂಗಳ ಮಗುವನ್ನು ಬಿಟ್ಟು ನೇಣಿಗೆ ಶರಣಾದ ತಾಯಿ
ಭಾರತದ ಹೈ ಪ್ರೊಫೈಲ್ ಹನಿಟ್ರ್ಯಾಪ್ ರಾಣಿ ಆರತಿ ದಯಾಳ್ ಬೆಂಗಳೂರಿನಲ್ಲಿ ಅರೆಸ್ಟ್