ನೈಟ್ ಕ್ಲಬ್‌ಗೆ ಬಂದ ಅತಿಥಿಗಳ ಮೇಲೆ ಹಲ್ಲೆ: 6 ಬೌನ್ಸರ್‌ಗಳು, ಮ್ಯಾನೇಜರ್ ಅರೆಸ್ಟ್
ನೈಟ್ ಕ್ಲಬ್‌ಗೆ ಆಗಮಿಸಿದ ಅತಿಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರ್ಗಾಂವ್‌ನ ನೈಟ್‌ಕ್ಲಬ್‌ವೊಂದರ ಮ್ಯಾನೇಜರ್ ಹಾಗೂ ಆರು ಬೌನ್ಸರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
ನೈಟ್ ಕ್ಲಬ್‌ಗೆ ಆಗಮಿಸಿದ ಅತಿಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗುರ್ಗಾಂವ್‌ನ ನೈಟ್‌ಕ್ಲಬ್‌ವೊಂದರ ಮ್ಯಾನೇಜರ್ ಹಾಗೂ ಆರು ಬೌನ್ಸರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ. ಬಹುರಾಷ್ಟ್ರೀಯ ಕಂಪನಿಯೊಂದರ ಮ್ಯಾನೇಜರ್ ಒಬ್ಬರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಗುರುಗ್ರಾಮ್‌ನ ನೈಟ್ ಕ್ಲಬೊಂದರ ಬೌನ್ಸರ್‌ಗಳು ಹಾಗೂ ಮ್ಯಾನೇಜರ್‌ಗಳು ನನ್ನ ಹಾಗೂ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಗುಂಪಿನಲ್ಲಿದ್ದ ಮಹಿಳೆಯೊಂದಿಗೆ ಕ್ಲಬ್‌ನ ಬೌನ್ಸರ್ ಒಬ್ಬರು ಅನುಚಿತವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕ್ಲಬ್‌ನ ಮ್ಯಾನೇಜರ್ ಹಾಗೂ ಪೊಲೀಸರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೋನು, ಮಂದೀಪ್, ಸುಮಿತ್, ನಿತಿನ್, ರಾಮ್ ಸಿಂಗ್ ಹಾಗೂ ರಾಕೇಶ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಗುರುಗ್ರಾಮ್ ಪೊಲೀಸ್ ಮುಖ್ಯಸ್ಥ, ಕಲಾ ರಾಮಚಂದ್ರನ್ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗಿದೆ.ಉದ್ಯೋಗ್ ವಿಹಾರ್ ಬಳಿ ಇರುವ ಕಾಸಾ ಡಂಝಾ ಕ್ಲಬ್‌ನ ಹೊರಭಾಗದಲ್ಲಿ ಕೆಲವು ಬೌನ್ಸರ್‌ಗಳು ಕೆಲವು ಪುರುಷರನ್ನು ಥಳಿಸುತ್ತಿರುವುದು ಆ ವಿಡಿಯೋದಲ್ಲಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿದೆ. ದೈಹಿಕ ಹಲ್ಲೆ, ದೂರುದಾರರ ಸಂಬಂಧಿ ಮಹಿಳೆಯನ್ನು ಕೆಟ್ಟ ಉದ್ದೇಶದಿಂದ ಸ್ಪರ್ಶಿಸಿರುವುದು ಹಾಗೂ ಅವರ ಬಳಿ ಇದ್ದ ವಸ್ತು ಹಾಗೂ ನಗದನ್ನು ಕಿತ್ತುಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ ಎಂದು ಕಲಾ ರಾಮಚಂದ್ರನ್ ಹೇಳಿದ್ದಾರೆ. ಪೊಲೀಸರ ಪ್ರಕಾರ ಈ ಘಟನೆ ಭಾನುವಾರ (ಆಗಸ್ಟ್7) ತಡರಾತ್ರಿ ಎರಡು ಗಂಟೆ ಸುಮಾರಿಗೆ ನಡೆದಿದೆ.
ದೂರುದಾರರು ತಮ್ಮ ಮೂವರು ಸ್ನೇಹಿತರೊಂದಿಗೆ ಈ ಕ್ಲಬ್‌ಗೆ ಹೋಗಿದ್ದಾರೆ. ಅಲ್ಲಿ ಅವರು ಇನ್ನಿಬ್ಬರು ಸ್ನೇಹಿತರನ್ನು ಹೊರಭಾಗದಲ್ಲಿ ಭೇಟಿ ಮಾಡಿದ್ದಾರೆ. ಕ್ಲಬ್‌ಗೆ ಪ್ರವೇಶದ ವೇಳೆ ಓರ್ವ ಭದ್ರತಾ ಬೌನ್ಸರ್ ನನ್ನ ಮಹಿಳಾ ಸ್ನೇಹಿತರನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾರೆ. ಇದನ್ನು ಆಕೆ ವಿರೋಧಿಸಿದ್ದಾರೆ. ಅದಕ್ಕೆ ಆತನೂ ಏನೇನೋ ಹೇಳಿದ್ದಾನೆ. ಈ ವೇಳೆ ದೂರುದಾರರು ಮಧ್ಯಪ್ರವೇಶಿಸಿದಾಗ ಅಲ್ಲಿಗೆ ಎಲ್ಲಾ ಬೌನ್ಸರ್‌ಗಳು ಬಂದಿದ್ದು, ತಮ್ಮ ಮ್ಯಾನೇಜರ್‌ಗಳನ್ನು ಕೂಡ ಕರೆಸಿದ್ದಾರೆ. ಈ ವೇಳೆ ನಮ್ಮ ಸ್ನೇಹಿತೆ ಮ್ಯಾನೇಜರ್ ಬಳಿ ದೂರು ನೀಡಿದಾಗ ಅವರು ಬೌನ್ಸರ್‌ಗಳಿಗೆ, ನಮಗೆ ಹೊಡೆಯುವಂತೆ ನಿರ್ದೇಶನ ನೀಡಿದ್ದಾರೆ. ಇದಾದ ಬಳಿಕ ಬೌನ್ಸರ್‌ಗಳು ನಮಗೆ ಥಳಿಸಲು ಶುರು ಮಾಡಿದ್ದಾರೆ. ಮ್ಯಾನೇಜರ್‌ಗಳನ್ನು ಹೊರತುಪಡಿಸಿ ಕಪ್ಪು ಬಟ್ಟಯನ್ನು ಧರಿಸಿದ ಏಳೆಂಟು ಜನ ಬೌನ್ಸರ್‌ಗಳು ನಮ್ಮನ್ನು ನಡುರಸ್ತೆಗೆ ಎಳೆದುಕೊಂಡು ಬಂದು ನನಗೂ ನಮ್ಮ ಸ್ನೇಹಿತರಿಗೂ ಥಳಿಸಿದ್ದಾರೆ. ರಸ್ತೆಯಲ್ಲಿ ಎಳೆದು ಹಾಕಿ ಕೋಲು ದೊಣ್ಣೆಗಳಿಂದ ಥಳಿಸಿದ್ದಾರೆ. ಅವರು ನನಗೆ ಮುಖ ಹಾಗೂ ತಲೆಗೆ ಕೋಲಿನಿಂದ ಹೊಡೆದಿದ್ದಾರೆ ಎಂದು ದೂರುದಾರರು ಎಫ್ಐಆರ್‌ನಲ್ಲಿ ದಾಖಲಿಸಿದ್ದಾರೆ.
Mangaluru: ಪಬ್ ಪಾರ್ಟಿಯಲ್ಲಿದ್ದ 8 ಮಂದಿ 21 ವರ್ಷದೊಳಗಿನವರು!
ಅಲ್ಲದೇ ಓರ್ವ ಬೌನ್ಸರ್ ನಮ್ಮ ಸ್ನೇಹಿತನ ಆಪಲ್ ವಾಚ್ ಕಸಿದುಕೊಂಡಿದ್ದಾನೆ ಹಾಗೂ ಮತ್ತಿಬ್ಬರು ಬೌನ್ಸರ್‌ಗಳು 10 ರಿಂದ 12 ಸಾವಿರ ನಗದು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ರಸ್ತೆಯಲ್ಲಿ ಉಂಟಾದ ಟ್ರಾಫಿಕ್‌ನಿಂದಾಗಿ ಅವರು ನಮ್ಮನ್ನು ನಡುರಸ್ತೆಯಲ್ಲಿ ಬಿಟ್ಟು ಕ್ಲಬ್‌ಗೆ ವಾಪಸ್ ಹೋಗಿದ್ದಾರೆ. ಅವರ ಹಲ್ಲೆಯಿಂದ ನನ್ನ ಮೂಗಿನಲ್ಲಿ ರಕ್ತ ಸೋರಲು ಶುರುವಾಗಿದ್ದು, ನನಗೆ ಉಸಿರಾಡಲು ಕಷ್ಟವಾಗುತ್ತಿದೆ. ನನ್ನ ಸ್ನೇಹಿತರು ಕೂಡ ಹಲ್ಲೆಯಿಂದ ಗಾಯಗೊಂಡಿದ್ದಾರೆ. ಈ ರಸ್ತೆಯಲ್ಲಿ ಸಾಗುತ್ತಿದ್ದವರು ಯಾರೋ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದೂರುದಾರರು ದಾಖಲಿಸಿದ್ದಾರೆ.
ದೂರುದಾರರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮೆಡಿಕಲ್ ರಿಪೋರ್ಟ್ ಪ್ರಕಾರ, ಅವರ ದೇಹದ ಹಲವು ಭಾಗಗಳಲ್ಲಿ ಊತ ಹಾಗೂ ತರಚು ಗಾಯಗಳಾಗಿವೆ. ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉದ್ಯೋಗ್ ವಿಹಾರ್ ಎಸಿಪಿ ಪ್ರತಿಕ್ರಿಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕ್ಲಬ್‌ನ ಮ್ಯಾನೇಜರ್ ಹಾಗೂ ಬೌನ್ಸರ್‌ಗಳ ವಿರುದ್ಧ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಐಪಿಸಿ ಸೆಕ್ಷನ್ 147 (ಗಲಭೆ) 149 (ಕಾನೂನು ಬಾಹಿರ ಸಭೆ), 323 (ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು) 354ಎ (1)(ಐ) (ಲೈಂಗಿಕ ಕಿರುಕುಳ) 379( ದೋಚುವುದು) ಸೆಕ್ಷನ್ 506 (ಅಪರಾಧದ ಉದ್ದೇಶ) ಅಡಿ ಪ್ರಕರಣ ದಾಖಲಾಗಿದೆ.
Mangaluru: ಕುಡಿದು ಮೋಜು-ಮಸ್ತಿ: ಭಜರಂಗದಳದಿಂದ ವಿದ್ಯಾರ್ಥಿಗಳ ಪಬ್ ಪಾರ್ಟಿಗೆ ಅಡ್ಡಿ
ಇತ್ತ ಘಟನೆಗೆ ಸಂಬಂಧಿಸಿದಂತೆ ನೈಟ್ ಕ್ಲಬ್ ಹೇಳಿಕೆ ಬಿಡುಗಡೆ ಮಾಡಿದ್ದು, ಆರೋಪವನ್ನು ತಳ್ಳಿ ಹಾಕಿದೆ. ನಮ್ಮ ಕ್ಲಬ್ ಮುಂದೆ ಆದ ಘಟನೆಯನ್ನು ನಾವು ಖಂಡಿಸುತ್ತೇವೆ. ಬಾಡಿಗಾರ್ಡ್‌ಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಕೇಸನ್ನು ನಾವು ಅಲ್ಲಗಳೆಯುತ್ತೇವೆ. ಮಹಿಳಾ ಅತಿಥಿಯ ವಿರುದ್ಧ ನಮ್ಮ ಯಾವುದೇ ಸೆಕ್ಯೂರಿಟಿ ಗಾರ್ಡ್‌ಗಳು ಅಸಭ್ಯವಾಗಿ ವರ್ತಿಸಿಲ್ಲ. ಸ್ಥಳೀಯ ಸಿಸಿಟಿವಿ ವಿಡಿಯೋದಲ್ಲಿ ನಾವಿದನ್ನು ಗಮನಿಸಿದ್ದೇವೆ. ಆದಾಗ್ಯೂ ಸಂತ್ರಸ್ತರ ವಿರುದ್ಧ ಕಾಸಾ ಡಂಝಾ ಕ್ಲಬ್‌ಗೆ ಅನುಕಂಪವಿದೆ ಎಂದು ಕ್ಲಬ್ ಹೇಳಿದೆ.