Asianet Suvarna News Asianet Suvarna News

ಕಾಂಬೋಡಿಯಾದಲ್ಲಿ 5000 ಭಾರತೀಯರ ಕೂಡಿಹಾಕಿ ಸೈಬರ್‌ ವಂಚನೆ..!

ಕಳೆದ ಆರು ತಿಂಗಳಲ್ಲಿ ಹೀಗೆ ಕಾಂಬೋಡಿಯಾಕ್ಕೆ ತೆರಳಿದ ಭಾರತೀಯರು, ಅಲ್ಲಿ ಅನಿವಾರ್ಯವಾಗಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ಅಥವಾ ನಕಲಿ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ತೆರೆದು ಭಾರತೀಯರಿಗೆ 500 ಕೋಟಿ ರು.ಗಿಂತ ಹೆಚ್ಚು ವಂಚನೆ ಎಸಗಿರುವುದಾಗಿಯೂ ತಿಳಿದುಬಂದಿದೆ.

5000 Indians Hacked and Cyber Crime in Cambodia grg
Author
First Published Mar 30, 2024, 11:40 AM IST

ನವದೆಹಲಿ(ಮಾ.30):  ಡೇಟಾ ಎಂಟ್ರಿ ಕೆಲಸದ ಆಸೆಯಿಂದ ಕಾಂಬೋಡಿಯಾಕ್ಕೆ ತೆರಳಿದ 5000ಕ್ಕೂ ಹೆಚ್ಚು ಭಾರತೀಯರು ಅಲ್ಲಿ ದುಷ್ಕರ್ಮಿಗಳ ಕೈಗೆ ಸಿಲುಕಿ ಸೈಬರ್‌ ಅಪರಾಧ ಎಸಗುವ ಜಾಲದಲ್ಲಿ ಸೇರಿಕೊಂಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಕಳೆದ ಆರು ತಿಂಗಳಲ್ಲಿ ಹೀಗೆ ಕಾಂಬೋಡಿಯಾಕ್ಕೆ ತೆರಳಿದ ಭಾರತೀಯರು, ಅಲ್ಲಿ ಅನಿವಾರ್ಯವಾಗಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ಅಥವಾ ನಕಲಿ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ತೆರೆದು ಭಾರತೀಯರಿಗೆ 500 ಕೋಟಿ ರು.ಗಿಂತ ಹೆಚ್ಚು ವಂಚನೆ ಎಸಗಿರುವುದಾಗಿಯೂ ತಿಳಿದುಬಂದಿದೆ. ಹೀಗೆ ಕಾಂಬೋಡಿಯಾದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಿ ಕರೆತರಲು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಸೈಬರ್‌ ಅಪರಾಧಗಳ ಸಮನ್ವಯ ಕೇಂದ್ರದ ಜೊತೆಗೂಡಿ ಪ್ರಯತ್ನಿಸುತ್ತಿವೆ ಎಂದು ಮೂಲಗಳು ಹೇಳಿವೆ.

ಪಾರ್ಟ್ ಟೈಮ್ ಉದ್ಯೋಗ ನೆಪದಲ್ಲಿ ವಂಚಿಸಿ 15 ಕೋಟಿ ರೂ ಚೀನಾಗೆ ಕಳುಹಿಸಿದ ನಾಲ್ವರು ಅರೆಸ್ಟ್!

ಕರ್ನಾಟಕದ ಮೂವರಿಂದ ಸಿಕ್ಕ ಸುಳಿವು: 

ಕಳೆದ ವರ್ಷದ ನವೆಂಬರ್‌ನಲ್ಲಿ ಕರ್ನಾಟಕದ ಮೂವರನ್ನು ಇಲ್ಲಿನ ಎನ್‌ಆರ್‌ಐ ಫೋರಂ ಕಾಂಬೋಡಿಯಾದಿಂದ ರಕ್ಷಿಸಿ ಕರೆತಂದಿತ್ತು. ಬಳಿಕ ಒಡಿಶಾದ ರೂರ್ಕೆಲಾ ಪೊಲೀಸರು ಕೂಡ ಸೈಬರ್‌ ವಂಚನೆ ಪ್ರಕರಣವೊಂದರ ಜಾಡು ಹಿಡಿದು ಹೋದಾಗ ಕಾಂಬೋಡಿಯಾದ ವಂಚನೆ ಜಾಲ ಬೆಳಕಿಗೆ ಬಂದಿತ್ತು. ಈ ಪ್ರಕರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಿದಾಗ ಕಾಂಬೋಡಿಯಾದಲ್ಲಿ 5000ಕ್ಕೂ ಹೆಚ್ಚು ಭಾರತೀಯರು ಈ ಜಾಲದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ವರ್ಕ್‌ ಫ್ರಂ ಹೋಮ್ ಕೆಲಸದ ಆಮಿಷ; ಮಹಿಳಾ ಟೆಕ್ಕಿಗೆ ಬರೋಬ್ಬರಿ 18ಲಕ್ಷ ರೂ. ವಂಚಿಸಿದ ಸೈಬರ್ ಕಳ್ಳರು!

ದಕ್ಷಿಣ ಭಾರತೀಯರೇ ಸಂತ್ರಸ್ತರು: 

ವಿಶೇಷವಾಗಿ ದಕ್ಷಿಣ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಜಾಲದಲ್ಲಿ ಸಿಲುಕಿದ್ದಾರೆ. ಭಾರತದ ಬೇರೆ ಬೇರೆ ಕಡೆ ಕಾರ್ಯಾಚರಣೆ ನಡೆಸುತ್ತಿರುವ ನಕಲಿ ಏಜೆಂಟ್‌ಗಳು ಕಾಂಬೋಡಿಯಾದಲ್ಲಿ ಡೇಟಾ ಎಂಟ್ರಿ ಕೆಲಸವಿದೆ ಎಂದು ಜನರಿಗೆ ಆಮಿಷವೊಡ್ಡಿ ಅಲ್ಲಿಗೆ ಕಳುಹಿಸುತ್ತಿದ್ದಾರೆ. ಕಾಂಬೋಡಿಯಾಕ್ಕೆ ಹೋದ ಮೇಲೆ ಭಾರತೀಯರಿಗೆ ತಾವು ಮೋಸಹೋಗಿರುವುದು ತಿಳಿಯುತ್ತದೆ. ಅಲ್ಲಿನ ಆನ್‌ಲೈನ್‌ ವಂಚನೆ ಮಾಫಿಯಾವು ಭಾರತೀಯರನ್ನು ಹಿಡಿದಿಟ್ಟುಕೊಂಡು, ಅವರ ಮೂಲಕ ಭಾರತದಲ್ಲಿ ಆನ್‌ಲೈನ್‌ ವಂಚನೆಗಳನ್ನು ಎಸಗುತ್ತಿದೆ ಎಂದು ತಿಳಿದುಬಂದಿದೆ.

ನಾನಾ ರೀತಿಯಲ್ಲಿ ಸೈಬರ್‌ ವಂಚನೆ:

ಕಾಂಬೋಡಿಯಾದಿಂದ ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ಭಾರತೀಯರಿಗೆ ಕರೆ ಮಾಡಿ ಹಣ ಕೀಳುವುದು, ಸೋಷಿಯಲ್‌ ಮೀಡಿಯಾಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಹಣ ಕೀಳುವುದು, ಕಡಿಮೆ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುವುದು, ಕ್ರಿಪ್ಟೋಕರೆನ್ಸಿ ವ್ಯಾಪಾರದ ಹೆಸರಿನಲ್ಲಿ ವಂಚಿಸುವುದು ಹಾಗೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವುದಾಗಿ ಹೇಳಿ ವಂಚಿಸುವುದು ಹೀಗೆ ನಾನಾ ರೀತಿಯಲ್ಲಿ ಈ ಜಾಲವು ಭಾರತೀಯರಿಗೆ ವಂಚಿಸುತ್ತಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios