ಚಾಕು ಇರಿತದಿಂದ ಕುಸಿದು ಬಿದ್ದ ಏಳಲ್‌ ಅರಸಿ ಅವರನ್ನು ಕೂಡಲೇ ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಏಳಲ್‌ ಅರಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು. 

ಬೆಂಗಳೂರು(ಫೆ.26): ಮೊಮ್ಮಗಳನ್ನು ಜತೆಯಲ್ಲಿ ಕಳುಹಿಸುವಂತೆ ಕೇಳಿದ ಅತ್ತೆಯನ್ನೇ ಅಳಿಯ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಜಿಎಫ್‌ ಮೂಲದ ಮಾರಿಕೊಪ್ಪಂ ನಿವಾಸಿ ಏಳಲ್‌ ಅರಸಿ (48) ಕೊಲೆಯಾದ ದುರ್ದೈವಿ. ಈಕೆಯ ಕಿರಿಯ ಮಗಳು ಸಿಂಧೂ ಅರಸಿ(29) ಗಾಯಗೊಂಡವರು. ಕೆಜಿಎಫ್‌ನ ಬೆಮೆಲ್‌ ನಗರ ಮೂಲದ ಆರೋಪಿ ದಿವಾಕರ್‌(38) ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಶುಕ್ರವಾರ ರಾತ್ರಿ 7.30ರ ಸುಮಾರಿಗೆ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಏಳಲ್‌ ಅರಸಿ ಅವರ ಪುತ್ರಿ ತಮಿಳ್‌ ಅರಸಿ ಮತ್ತು ಆರೋಪಿ ದಿವಾಕರ್‌ ಪರಸ್ಪರ ಪ್ರೀತಿ 9 ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಎಂಟು ವರ್ಷದ ಹೆಣ್ಣು ಮಗುವಿತ್ತು. ಇತ್ತೀಚೆಗೆ ದಂಪತಿ ನಡುವೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇತ್ತೀಚೆಗೆ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ದಿವಾಕರ್‌ ಮಗಳನ್ನು ಕರೆದುಕೊಂಡು ಕೆಂಗೇರಿ ಸಮೀಪದ ನಾಗದೇವನಹಳ್ಳಿಯ ಬೃಂದಾವನ ಲೇಔಟ್‌ನಲ್ಲಿರುವ ತಂಗಿ ಆಶಾ ಮನೆಗೆ ಬಂದಿದ್ದ. ಆಗಾಗ ಪತ್ನಿಗೆ ಕರೆ ಮಾಡಿ ಮಗಳನ್ನು ಸಾಯಿಸುವುದಾಗಿ ಬೆದರಿಸುತ್ತಿದ್ದ.

ಭಟ್ಕಳ: ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

ಈ ವಿಚಾರವನ್ನು ತಮಿಳ್‌ ಅರಸಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಹೀಗಾಗಿ ಮೊಮ್ಮಗಳನ್ನು ಕರೆದೊಯ್ಯಲು ಶುಕ್ರವಾರ ಏಳಲ್‌ ಅರಸಿ ಅವರು ತಮ್ಮ ಕಿರಿಯ ಮಗಳು ಸಿಂಧೂ ಅರಸಿ, ತಂಗಿ ಸುಷ್ಮಾ ಹಾಗೂ ಆಕೆಯ ಗಂಡ ಕಾರ್ತಿಕ್‌ ಜತೆಗೆ ಆರೋಪಿ ದಿವಾಕರನ ತಂಗಿ ಆಶಾ ಮನೆಗೆ ಬಂದಿದ್ದಾರೆ. ಈ ವೇಳೆ ಮೊಮ್ಮಗಳನ್ನು ಕಳುಹಿಸುವಂತೆ ಕೇಳಿದಾಗ, ಆರೋಪಿ ದಿವಾಕರ್‌ ಜಗಳ ತೆಗೆದಿದ್ದಾನೆ. ಹೀಗೆ ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ದಿವಾಕರ್‌, ಚಾಕು ತೆಗೆದು ಅತ್ತೆ ಏಳಲ್‌ ಅರಸಿ ಕುತ್ತಿಗೆಗೆ ಇರಿದಿದ್ದಾನೆ. ವೇಳೆ ತಡೆಯಲು ಬಂದ ನಾದಿನಿ ಸಿಂಧೂ ಅರಸಿ ಕೈಗೂ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ಚಾಕು ಇರಿತದಿಂದ ಕುಸಿದು ಬಿದ್ದ ಏಳಲ್‌ ಅರಸಿ ಅವರನ್ನು ಕೂಡಲೇ ಸ್ಥಳೀಯರ ನೆರವಿನಿಂದ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಏಳಲ್‌ ಅರಸಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಸಿಂಧೂ ಅರಸಿ ನೀಡಿದ ದೂರಿನ ಮೇರೆಗೆ ಕೆಂಗೇರಿ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.