ಖಾಸಗಿ ಕಂಪನಿಯ ಲೋನ್‌ ಡಾಕ್ಯೂಮೆಂಟ್ಸ್‌ ವೆರಿಫಿಕೇಷನ್‌ ಉದ್ಯೋಗಿ ವಿರುದ್ಧ ದೂರು । ಠಾಣೆಗೆ ಕರೆಸಿ ಥಳಿಸಿದ್ದ ಇನ್ಸ್‌ಸ್ಪೆಕ್ಟರ್‌ । ಇದರಿಂದ ನೊಂದು ಆತ್ಮಹತ್ಯೆ

ಬೆಂಗಳೂರು(ಸೆ.21): ಸಾಲದ ವಿಚಾರವಾಗಿ ಠಾಣೆಗೆ ಕರೆಸಿ ವೈಯಾಲಿಕಾವಲ್ ಠಾಣೆ ಇನ್‌ಸ್ಪೆಕ್ಟರ್‌ ಥಳಿಸಿದರು ಎಂದು ಆರೋಪಿಸಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಘಟ್ಟಪುರ ಸಮೀಪ ಬುಧವಾರ ನಡೆದಿದೆ.

ರಘುವನಹಳ್ಳಿಯ ಬಿಸಿಎಂ ಲೇಔಟ್‌ ನಿವಾಸಿ ವಿ.ನಾಗರಾಜ್‌ (47) ಮೃತ ದುರ್ದೈವಿ. ಕೆಲಸಕ್ಕೆ ತೆರಳಿದ್ದ ಪತ್ನಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆಲ ಹೊತ್ತಿನ ಬಳಿಕ ಮೃತನ ಪತ್ನಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ತುಮಕೂರು: ಹೆಂಡ್ತಿ ಕಾಟಕ್ಕೆ ತಾಳಲಾರದ ನಮ್ಮ ಮೆಟ್ರೋ ಎಂಜಿನಿಯರ್ ಸಾವಿಗೆ ಶರಣು

ಸ್ನೇಹಿತ ಮಧ್ಯಪ್ರವೇಶದ ಬಳಿಕ ಠಾಣೆಯಿಂದ ಮುಕ್ತಿ:

ನಾಗರಾಜು ಹಾಗೂ ವಿನುತಾ ದಂಪತಿಗೆ 14 ವರ್ಷದ ಮಗನಿದ್ದಾನೆ. ರಘುವನಹಳ್ಳಿಯ ಬಿಸಿಎಂ ಲೇಔಟ್‌ನಲ್ಲಿ ಕುಟುಂಬ ನೆಲೆಸಿತ್ತು. ಈ ಹಿಂದೆ ಬಾಷ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ನಾಗರಾಜ್‌, ಎರಡು ವರ್ಷಗಳ ಹಿಂದೆ ಆ ಕಂಪನಿಯಲ್ಲಿ ಸ್ವಯಂ ನಿವೃತ್ತಿ ಪಡೆದರು. ನಂತರ ಪೀಣ್ಯದಲ್ಲಿ ಸನಾವುಲ್ಲಾ ಎಂಬುವರ ಬಳಿ ನಾಗರಾಜ್‌ ಲೋನ್‌ ಡಾಕ್ಯುಮೆಂಟ್‌ ವೆರಿಫಿಕೇಷನ್ ಕೆಲಸಗಾರನಾಗಿದ್ದರು. ಸಾಲದ ವಿಚಾರವಾಗಿ ವೈಯಾಲಿಕಾವಲ್ ಠಾಣೆಗೆ ನಾಗರಾಜ್ ವಿರುದ್ಧ ನಟರಾಜ್ ಎಂಬಾತ ದೂರು ನೀಡಿದ್ದರು. ಅದರನ್ವಯ ಮಂಗಳವಾರ ಆತನನ್ನು ಠಾಣೆಗೆ ಕರೆಸಿದ ಇನ್‌ಸ್ಪೆಕ್ಟರ್‌ ಬಳಿಕ ನಾಗರಾಜ್‌ಗೆ ಬಾಯಿಗೆ ಬಂದಂತೆ ಬೈದು ಥಳಿಸಿದ್ದರು ಎಂದು ಆರೋಪಿಸಲಾಗಿದೆ.

ಆಗ ಠಾಣೆಗೆ ತೆರಳಿ ನಾಗರಾಜ್ ಅವರನ್ನು ಸ್ನೇಹಿತ ಚಕ್ರಪಾಣಿ ಬಿಡಿಸಿಕೊಂಡು ಬಂದಿದ್ದರು. ವಿಚಾರಣೆಗೆ ಬುಧವಾರ ಕೂಡಾ ಬರುವಂತೆ ನಾಗರಾಜ್‌ಗೆ ಇನ್‌ಸ್ಪೆಕ್ಟರ್ ಸೂಚಿಸಿದ್ದರು. ಈ ಘಟನೆಯಿಂದ ತೀವ್ರ ನೊಂದಿದ್ದ ನಾಗರಾಜ್, ಮನೆಗೆ ಮರಳಿದ ಬಳಿ ಪತ್ನಿ ಬಳಿ ಅಳಲು ತೋಡಿಕೊಂಡಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಮೃತ ನಾಗರಾಜ್ ಪತ್ನಿ ವಿನುತಾ ಬುಧವಾರ ಪತಿಗೆ ಧೈರ್ಯವಾಗಿ ವಿಚಾರಣೆಗೆ ಹೋಗಿ ಹೆದರಬೇಡಿ ಎಂದು ಧೈರ್ಯ ತುಂಬಿ ಹೋಗಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಕ್ಷಮಿಸಿಬಿಡು ಎಂದು ಪತ್ನಿಗೆ ಸಂದೇಶ

ಕೆಲಸಕ್ಕೆ ಹೋಗಿದ್ದ ಪತ್ನಿಗೆ ಬೆಳಗ್ಗೆ 10.5ಕ್ಕೆ ''''ದಯವಿಟ್ಟು ನನ್ನ ಕ್ಷಮಿಸು. ಬೈ ಟೆಕ್ ಕೇರ್ ಜಗನ್ ನೋಡ್ಕೊ'''' ಎಂದು ವಾಟ್ಸಾಪ್‌ನಲ್ಲಿ ಮರಣ ಪತ್ರ ಕಳುಹಿಸಿ ನಾಗರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂದೇಶ ನೋಡಿದ ಕೂಡಲೇ ವಿನುತಾ ಅವರು, ತಕ್ಷಣವೇ ಮನೆಗೆ ದೌಡಾಯಿಸಿ ಬಂದಿದ್ದಾರೆ. ಆಗ ಮನೆ ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ನೇಣಿನ ಕುಣಿಕೆಯಲ್ಲಿ ನಾಗರಾಜ್ ಮೃತದೇಹ ಪತ್ತೆಯಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಹೆಣ್ಣೂರು ಠಾಣೆಗೆ ₹8 ಲಕ್ಷ

ಘಟನೆ ಸಂಬಂಧ ಮೃತ ನಾಗರಾಜ್ ಪತ್ನಿ ದೂರು ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಸನಾವುಲ್ಲಾ, ನಟರಾಜ್‌, ಎಂ.ಸಿ.ಈರೇಗೌಡ, ವೈಯಾಲಿಕಾವಲ್ ಠಾಣೆ ಇನ್‌ಸ್ಟೆಕ್ಟರ್ ಹಾಗೂ ಹೆಣ್ಣೂರು ಠಾಣೆಯ ಶಿವಕುಮಾರ್ ವಿರುದ್ಧ ತಲಘಟ್ಟಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನಸ್ಸು ಸರಿಯಾಗಿಲ್ಲವೆಂದು 10 ತಿಂಗಳ ಮಗುವನ್ನು ಬಿಟ್ಟು ನೇಣಿಗೆ ಶರಣಾದ ತಾಯಿ

ಇನ್ನು ಮರಣ ಪತ್ರದಲ್ಲಿ ದೇವರಾಜ್ ಎಂಬುವರಿಗೆ ₹9 ಲಕ್ಷ ನೀಡಬೇಕು ಹಾಗೂ ಹೆಣ್ಣೂರು ಠಾಣೆ ಶಿವಕುಮಾರ್‌ಗೆ ₹8 ಲಕ್ಷ ಕೊಟ್ಟಿದ್ದೇನೆ ಎಂದು ಮೃತರು ಉಲ್ಲೇಖಿಸಿದ್ದಾರೆ.

ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ನಾಗರಾಜ್ ಆತ್ಮಹತ್ಯೆ ಸಂಬಂಧ ದಾಖಲಾದ ಪ್ರಕರಣದಲ್ಲಿ ವೈಯಾಲಿಕಾವಲ್ ಠಾಣೆ ಇನ್‌ಸ್ಟೆಕ್ಟರ್‌ ಹೆಸರು ಉಲ್ಲೇಖವಾಗಿರುವುದು ಗೊತ್ತಾಗಿದೆ. ಯಾವ ಕಾರಣಕ್ಕೆ ನಾಗರಾಜ್‌ನನ್ನು ಠಾಣೆಗೆ ಪಿಐ ಕರೆಸಿದ್ದರು ಎಂದು ವಿಚಾರಣೆ ನಡೆಸಲಾಗುತ್ತದೆ. ವಿಚಾರಣೆ ಬಳಿಕ ಸೂಕ್ತ ಕ್ರಮ ಜರುಗಿಸುತ್ತೇನೆ ಎಂದು ಕೇಂದ್ರ ವಿಭಾಗ ಡಿಸಿಪಿ ಶೇಖರ್‌ ಟೆಕ್ಕಂಣ್ಣನವರ್‌ ತಿಳಿಸಿದ್ದಾರೆ.