ಬಿಜೆಪಿ ಮುಖಂಡರೋರ್ವರಿಗೆ ಬರೀಬ್ಬರಿ 4.25 ಕೋಟಿ ಹಣ ಪಂಗನಾಮ ಹಾಕಲಾಗಿದೆ. 150 ಕೋಟಿ ರು. ಸಾಲ ಕೊಡಿಸುವುದಾಗಿ ಹೇಳಿ ಹಣ ವಂಚನೆ ಮಾಡಲಾಗಿದೆ. 

ಬೆಂಗಳೂರು [ಜ.13]: ಬಿಜೆಪಿ ಮುಖಂಡ, ಮಾಜಿ ಪಾಲಿಕೆ ಸದಸ್ಯರೊಬ್ಬರಿಗೆ 150 ಕೋಟಿ ರು. ಸಾಲ ಕೊಡಿಸುವ ಆಮಿಷವೊಡ್ಡಿ ಶುಲ್ಕದ ಹೆಸರಿನಲ್ಲಿ ಬರೋಬ್ಬರಿ 4.25 ಕೋಟಿ ರು. ಹಣ ಪಡೆದು ಟೋಕಿ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಪರಾಜಿತ ಅಭ್ಯರ್ಥಿ ಎಚ್‌.ರವೀಂದ್ರ ವಂಚನೆಗೊಳಗಾದ ಬಿಜೆಪಿ ಮುಖಂಡ.

ಈ ಸಂಬಂಧ ಆರೋಪಿಗಳಾದ ಚೆನ್ನೈನ ಹರಿಗೋಪಾಲ್‌ ಕೃಷ್ಣನ್‌ ನಾಡರ್‌, ರಂಜನ್‌, ಮುಬಾರಕ್‌, ರಂಜಿತ್‌ ಫಣಿಕರ್‌ ಹಾಗೂ ಅಭಿಷೇಕ್‌ ಗುಪ್ತಾ ಎಂಬುವರ ವಿರುದ್ಧ ರವೀಂದ್ರ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೆಂಪಾಪುರ ಅಗ್ರಹಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ಮುಖಂಡರಾಗಿರುವ ಎಚ್‌.ರವೀಂದ್ರ ಅವರು ಉದ್ಯಮಿ ಕೂಡ ಆಗಿದ್ದು, ಸ್ವಂತ ವ್ಯವಹಾರ ಹೊಂದಿದ್ದಾರೆ. ಲೇಔಟ್‌ ನಿರ್ಮಾಣ ವಿಚಾರದಲ್ಲಿ ಹಣದ ಅವಶ್ಯಕತೆ ಇತ್ತು. ಹಣದ ಅವಶ್ಯಕತೆ ಇದ್ದ ವಿಚಾರವನ್ನು ರವೀಂದ್ರ ಅವರು ಪರಿಚಯಸ್ಥ ಧೃವಕುಮಾರ್‌ ಎಂಬಾತನಿಗೆ ತಿಳಿಸಿದ್ದರು. ಧೃವಕುಮಾರ್‌ ಅವರು ಸಂತೋಷ್‌ ಮತ್ತು ಕುಪ್ಪಸ್ವಾಮಿ ಎಂಬುವರನ್ನು ರವೀಂದ್ರ ಅವರಿಗೆ ಪರಿಚಯಿಸಿದ್ದರು. ಇವರಿಬ್ಬರ ಮೂಲಕ ರವೀಂದ್ರಗೆ ಆರೋಪಿಗಳಾದ ಹರಿಗೋಪಾಲ ಕೃಷ್ಣಣ್‌ ನಾಡರ್‌ ಸಂಪರ್ಕಕ್ಕೆ ಬಂದಿದ್ದರು. ಹರಿಗೋಪಾಲ 150 ಕೋಟಿಯನ್ನು ಕಡಿಮೆ ಬಡ್ಡಿದರದಲ್ಲಿ ಸಾಲವಾಗಿ ನೀಡುತ್ತೇವೆಂದು ಹೇಳಿ ರವೀಂದ್ರ ಅವರಿಗೆ ನಂಬಿಸಿದ್ದರು.

ಅಪರಾದದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕರಾರು ಪತ್ರ ಮಾಡಿಸಿದ್ದ ಆರೋಪಿಗಳು, ಅದರ ಶುಲ್ಕವೆಂದು ರವೀಂದ್ರ ಅವರಿಂದ .3.25 ಕೋಟಿ ಪಡೆದುಕೊಂಡಿದ್ದರು. ಇದಾದ ಬಳಿಕ ಸುಳ್ಳು ಮಾಹಿತಿ ನೀಡಿ ಇನ್ನು ಮೂರು ಕೋಟಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದು, ಮುಬಾರಕ್‌ ಎಂಬಾತ ಒಂದು ಕೋಟಿ ಪಡೆದಿದ್ದಾನೆ. ಎರಡು ಕೋಟಿಗೆ ಎರಡು ಚೆಕನ್ನು ಅಭಿಷೇಕ್‌ ಗುಪ್ತಾ ಎಂಬಾತನಿಗೆ ಕೊಟ್ಟಿದ್ದೇನೆ. ಈ ರೀತಿ ಆರೋಪಿಗಳು ಹಂತ-ಹಂತವಾಗಿ 4.25 ಕೋಟಿ ರು. ಹಣ ಪಡೆದು ವಂಚನೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ರವೀಂದ್ರ ವಿವರಿಸಿದ್ದಾರೆ.

ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ. ರವೀಂದ್ರ ಅವರಿಗೆ ಆರೋಪಿಗಳನ್ನು ಪರಿಚಯ ಮಾಡಿದ ಧೃವಕುಮಾರ್‌ ಅವರನ್ನು ವಿಚಾರಣೆ ನಡೆಸಲಾಗುವುದು. ಬಳಿಕ ಉಳಿದ ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಬ್ಯಾಂಕ್‌ನವರು ಎಂದು ಪರಿಚಯಿಸಿಕೊಂಡು ಕೃತ್ಯ ಎಸಗಿದ್ದಾರೆ ಎಂದ ತನಿಖಾಧಿಕಾರಿಗಳು ತಿಳಿಸಿದರು.

ರವೀಂದ್ರ ಅವರ ಪುತ್ರಿ ಹಾಲಿ ಪಾಲಿಕೆ ಸದಸ್ಯರಾಗಿದ್ದಾರೆ. ಸಚಿವರಾದ ವಿ.ಸೋಮಣ್ಣ ಮತ್ತು ಆರ್‌.ಅಶೋಕ್‌ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ರವೀಂದ್ರ ಕಳೆದ ಬಾರಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರ ವಿರುದ್ಧ ಪರಭಾವಗೊಂಡಿದ್ದರು.