ಬೆಂಗಳೂರು(ಡಿ. 17) ಅಪಾರ ಪ್ರಮಾಣದ ಕಬ್ಬಿಣ ಕದ್ದ ಆರೋಪದ ಮೇಲೆ ಅಸ್ಸಾಂ ಮೂಲದ ಖರ್ತನಾಕ್ ಸೆಕ್ಯೂರಿಟಿ ಗಾರ್ಡ್ ಗಳನ್ನು ಎಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.  ಸಲ್ಮಾನ್, ಮಂಜಿತ್, ರಂಜಿತ್ ಹಾಗೂ ಪಪ್ಪು ಬಂಧಿತ ಆರೋಪಿಗಳು.

ಅಸ್ಸಾಂ ನಿಂದ ಸೆಕ್ಯೂರಿಟಿ ಕೆಲಸ ಅರಸಿ ಬಂದಿದ್ದವರು ನಿರ್ಮಾಣ ಹಂತದ ದೊಡ್ಡ ಕಟ್ಟಡಗಳಲ್ಲಿ ಸೆಕ್ಯೂರಿಟಿ ಗಳಾಗಿ ಕೆಲಸ ಮಾಡುತ್ತಿದ್ದರು. ಕೆಲಸದ ಅವಧಿ ಮುಗಿದರೂ ಮನೆಗೆ ತೆರಳದೇ ಓವರ್ ಡ್ಯೂಟಿ ಮಾಡುತ್ತಿದ್ದರು. 

ಓವರ್ ಡ್ಯೂಟಿ ಸಂಬಳವನ್ನು ಕೇಳದೇ ಕಂಪನಿಗೆ ನಂಬಿಕಸ್ಥರಂತೆ ವರ್ತಿಸುವ ಚಾಲಾಕಿತನ ರೂಢಿಸಿಕೊಂಡಿದ್ದರು. ನಂತರ ಕಟ್ಟಡದಲ್ಲಿನ ಕಬ್ಬಿಣವನ್ನ ರಾತ್ರೋರಾತ್ರಿ ಲಾರಿಯಲ್ಲಿ ಸಾಗಿಸುತ್ತಿದ್ದರು.  ಎಚ್‌ಎಎಲ್ ಬಳಿಯ ಹೊಂಬಾಳೆ ಕನ್ಸ್'ಟ್ರಕ್ಷನ್ ಹಾಗೂ ಕಷ್ಯಪ್ ಗ್ರೂಪ್ ಕಂಪನಿಯಲ್ಲಿ  18 ಟನ್ ಕಬ್ಬಿಣ ಎಗರಿಸಿ ತಲೆಮರೆಸಿಕೊಂಡಿದ್ದರು.

ಬಂಧಿತರಿಂದ 13 ಲಕ್ಷ 90 ಸಾವಿರ ಮೌಲ್ಯದ 14 ಟನ್ ಕಬ್ಬಿಣ ವಶಕ್ಕೆ ಪಡೆಯಲಾಗಿದೆ. ಇನ್ನು ಮುಂದೆ ಸೆಕ್ಯೂರಿಟಿ ಗಾರ್ಡ್ ಆಗಿ ನೇಮಕ ಮಾಡಿಕೊಳ್ಳುವವರಿಗೆ ಒಂದು ಎಚ್ಚರಿಕೆಯೂ ಇದರಿಂದ ಸಿಕ್ಕಿದೆ.