ತಂಬಲಗೇರಿ ಗ್ರಾಮದ ನವೀನ್‌, ದಯಾನಂದ, ಪದ್ಮನಾಭ, ರಾಜಾಚಾರಿ ಮೀನು ಹಿಡಿಯಲು ಗ್ರಾಮದ ಸಮೀಪವೇ ಹರಿಯುವ ಹಳ್ಳಕ್ಕೆ ತೆರಳಿದ್ದರು. ಹಳ್ಳದ ದಡದಲ್ಲಿ ಮೀನು ಹಿಡಿಯಲು ಬೆಂಕಿ ಹಾಕಿಕೊಂಡು ಹಳ್ಳಕ್ಕೆ ಬಲೆ ಹಾಕಿ ಕಾಯುತ್ತಿದ್ದರು. ಈ ವೇಳೆ ಏಕಾಏಕಿ ಗುಂಡಿನ ದಾಳಿ ನಡೆದಿದೆ. 

ಸಕಲೇಶಪುರ(ಜ.11): ಮೀನು ಹಿಡಿಯಲು ಹೋಗಿದ್ದವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯ ತಂಬಲಗೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ತಂಬಲಗೇರಿ ಗ್ರಾಮದ ನವೀನ್‌ ಅಲಿಯಾಸ್‌ ಪಚ್ಚಿ (39) ಸ್ಥಳದಲ್ಲೇ ಮೃತಪಟ್ಟಿದ್ದು, ದಯಾನಂದ ಮತ್ತು ಪದ್ಮನಾಭ ಎಂಬುವವರು ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಾಚಾರಿ ಎಂಬುವವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಸ್ಥಳಕ್ಕೆ ಐಜಿ ಪ್ರವೀಣ್‌ ಮಧುಕರ್‌ ಸೂದ್‌, ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಹರಿರಾಂ ಶಂಕರ್‌, ಶ್ವಾನದಳ, ವಿ​ಧಿ ವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾಸನ: ಲಿಫ್ಟ್ ಅಳವಡಿಕೆಗೆ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕ ಸಾವು

ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದಿರುವ ಯಸಳೂರು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸೋಮವಾರ ಸಂಜೆ ಏಳು ಗಂಟೆ ಸಂದರ್ಭದಲ್ಲಿ ತಂಬಲಗೇರಿ ಗ್ರಾಮದ ನವೀನ್‌, ದಯಾನಂದ, ಪದ್ಮನಾಭ, ರಾಜಾಚಾರಿ ಮೀನು ಹಿಡಿಯಲು ಗ್ರಾಮದ ಸಮೀಪವೇ ಹರಿಯುವ ಹಳ್ಳಕ್ಕೆ ತೆರಳಿದ್ದರು. ಹಳ್ಳದ ದಡದಲ್ಲಿ ಮೀನು ಹಿಡಿಯಲು ಬೆಂಕಿ ಹಾಕಿಕೊಂಡು ಹಳ್ಳಕ್ಕೆ ಬಲೆ ಹಾಕಿ ಕಾಯುತ್ತಿದ್ದರು. ಈ ವೇಳೆ ಏಕಾಏಕಿ ಗುಂಡಿನ ದಾಳಿ ನಡೆದಿದೆ. ಸ್ಥಳದಲ್ಲೇ ನವೀನ್‌ ಸಾವನ್ನಪ್ಪಿದ್ದಾನೆ. ದಯಾನಂದ ಹಾಗೂ ಪದ್ಮನಾಭ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅದೃಷ್ಟವಶಾತ್‌ ರಾಜಾಚಾರಿ ಗುಂಡಿನ ದಾಳಿಯಿಂದ ಪಾರಾಗಿದ್ದಾನೆ.

ಗುಂಡಿನ ಶಬ್ಧ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ನವೀನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಹರಿರಾಂ ಶಂಕರ್‌, ಶ್ವಾನದಳ, ಎಫ್‌ಎಸ್‌ಎಲ್‌ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಐಜಿ ಪ್ರವೀಣ್‌ ಮಧುಕರ್‌ ಸೂದ್‌ ಕೂಡ ಸ್ಥಳಕ್ಕೆ ಭೇಟಿ ನೀಡಿ ಅಧಿ​ಕಾರಿಗಳಿಂದ ಮಾಹಿತಿ ಪಡೆದರು.

ಮೇಲ್ನೋಟಕ್ಕೆ ಇದು ಶಿಕಾರಿಗೆ ಬಂದವರು ಮಿಸ್‌ ಫೈರ್‌ ಮಾಡಿರುವುದು ಕಂಡು ಬಂದಿದೆ. ಇದಲ್ಲದೇ ಉದ್ದೇಶಪೂರ್ವಕವಾಗಿ ಅಥವಾ ಬೇರೆ ಕಾರಣಕ್ಕೆ ಶೂಟ್‌ ಮಾಡಿದ್ದಾರಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಘಟನೆ ಸಂಬಂಧ ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದೆ. ಬಂ​ಧಿತರಲ್ಲಿ ಓರ್ವನ ಮೇಲೆ ಈ ಹಿಂದೆ ಇದೇ ರೀತಿಯ ಒಂದು ಪ್ರಕರಣದಲ್ಲಿ ಕೇಸ್‌ ದಾಖಲಾಗಿದೆ. ಬೆಳೆ ರಕ್ಷಣೆಗೆ ನೀಡಿರುವ ಲೈಸನ್ಸ್‌ ಗನ್‌ನ್ನು ದುರ್ಬಳಕೆ ಮಾಡಿಕೊಂಡು ಶಿಕಾರಿ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನವೀನ್‌ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿಯೂ ಗುರುತಿಸಿಕೊಂಡಿದ್ದು, ಈ ಘಟನೆಗೂ ಪಕ್ಷಕ್ಕೂ, ಸಂಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಹರಿರಾಂ ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ನವೀನ್‌ ಆಗಾಗ್ಗೆ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗುತ್ತಿದ್ದ. ನಿನ್ನೆ ಸಂಜೆ ಮೀನು ಹಿಡಿಯಲು ನಾಲ್ವರು ತೆರಳಿದ್ದು, ಅದರಲ್ಲಿ ರಾಜಾಚಾರಿ ಬೆಂಕಿ ಕಾಯಿಸಿಕೊಂಡು ಕುಳಿತಿದ್ದಾನೆ. ನವೀನ್‌, ದಯಾನಂದ, ಪದ್ಮನಾಭ ಬಲೆ ಬಿಟ್ಟು ದಡದಲ್ಲಿ ನಿಂತಿದ್ದಾರೆ. ಇದೇ ಸಂದರ್ಭದಲ್ಲಿ ನವೀನ್‌ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಗುಂಡು ಹಾರಿಸಲಾಗಿದೆ. ಘಟನೆ ನಂತರ ಪೊಲೀಸರು ರಾಜಾಚಾರಿಯನ್ನು ವಿಚಾರಣೆ ನಡೆಸಿದ್ದಾರೆ. ಗ್ರಾಮದ ನಾಗರಾಜ್‌ ಅವರ ಗನ್‌ನನ್ನು ಇದೇ ಗ್ರಾಮದ ಅನಿಲ್‌, ಕುಮಾರ್‌ ಎಂಬುವವರ ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದು, ಘಟನೆ ನಂತರ ಅದೇ ಕಾರಿನಲ್ಲಿ ನಾಗರಾಜ್‌ ಮನೆಗೆ ಹೋಗಿ ಗನ್‌ ವಾಪಾಸ್‌ ಇಟ್ಟು ಬಂದಿರುವ ವಿಷಯ ತಿಳಿದಿದೆ.

ಹಾಸನ: ಕಾಡಾನೆಗಳಿಗೆ ಖೆಡ್ಡಾ ತೋಡಿ ಸರ್ಕಾರಕ್ಕೆ ಸವಾಲ್‌ ಎಸೆದ ಗ್ರಾಮಸ್ಥರು..!

ಮೃತ ನವೀನ್‌ ಇತ್ತೀಚಿಗೆ ತಂದೆಯನ್ನು ಕಳೆದುಕೊಂಡಿದ್ದರು. ಇಬ್ಬರು ಪುಟ್ಟಮಕ್ಕಳಿದ್ದು, ಕಾಫಿ ತೋಟವಿತ್ತು. ಟ್ರ್ಯಾಕ್ಟರ್‌ ಇಟ್ಟುಕೊಂಡಿದ್ದ ನವೀನ್‌ ಯಾರೊಂದಿಗೂ ಜಗಳವಾಡಿದವರಲ್ಲ. ಅವರ ಮೇಲೆ ಯಾರಿಗೂ ಕಿಂಚಿತ್ತು ದ್ವೇಷವಿರಲಿಲ್ಲ. ಟ್ರಾಕ್ಟರ್‌ ಬಾಡಿಗೆಗೆ ಕರೆದರೆ ಕೊಟ್ಟಷ್ಟುಹಣ ಪಡೆಯುತ್ತಿದ್ದರು. ಅಂತಹ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ತಂದೆ, ತಾಯಿ ಸಾವನ್ನಪ್ಪಿದಾಗಲೂ ನಾನು ಕಣ್ಣೀರು ಇಟ್ಟಿರಲಿಲ್ಲ. ಈಗ ನವೀನ್‌ ಸಾವಿನಿಂದ ಅಳುತ್ತಿದ್ದೇನೆ ಎಂದು ಗ್ರಾಮದ ತಮ್ಮೇಗೌಡ ಕಣ್ಣೀರಿಟ್ಟರು.

ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಪದ್ಮನಾಭ ಕೂಡ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಶಿಕಾರಿಗೆ ತೆರಳಿದ್ದವರಿಂದ ಮಿಸ್‌ ಫೈರ್‌ ಆಯಿತೋ ಅಥವಾ ಹತ್ಯೆ ಮಾಡುವ ಉದ್ದೇಶದಿಂದಲೇ ದಾಳಿ ನಡೆದಿದೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿಯಬೇಕಿದೆ. ಯಸಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.