ಮಂಡ್ಯ: ಕುಡಿದ ಅಮಲಿನಲ್ಲಿ ಜಗಳ, ಯುವಕನ ಕತ್ತು ಕೊಯ್ದು ಹತ್ಯೆಗೈದ ದುಷ್ಕರ್ಮಿಗಳು
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರು ವಿಲಾಸ್ ಕೊಲೆಯಾದ ವ್ಯಕ್ತಿ. ನಗರದ ಮೈಷುಗರ್ ಕಾರ್ಖಾನೆ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಹತ್ಯೆಗೈದ ದುಷ್ಕರ್ಮಿಗಳು.
ಮಂಡ್ಯ(ಡಿ.16): ಕುಡಿದ ಅಮಲಿನಲ್ಲಿ ಉಂಟಾದ ಜಗಳ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ದುಷ್ಕರ್ಮಿಗಳು ಯುವಕನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರು ವಿಲಾಸ್ (೩೫) ಕೊಲೆಯಾದ ವ್ಯಕ್ತಿ. ನಗರದ ಮೈಷುಗರ್ ಕಾರ್ಖಾನೆ ವೃತ್ತದ ಬಾರ್ ಅಂಡ್ ರೆಸ್ಟೋರೆಂಟ್ ಎದುರು ಗುರುವಾರ ರಾತ್ರಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.
ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಗುರುಮೂರ್ತಿ -ಜಯಮ್ಮ ದಂಪತಿ ಪುತ್ರ ಗುರು ವಿಲಾಸ್ ಟಾಟಾ ಎಸಿ ಚಾಲಕನಾಗಿದ್ದು, ಗೆಜ್ಜಲಗೆರೆಯ ಗಾರ್ಮೆಂಟ್ಸ್‌ಗೆ ನೌಕರರನ್ನು ಕರೆದುಕೊಂಡು ಹೋಗುತ್ತಿದ್ದನು. ಈ ಸಮಯದಲ್ಲಿ ಮಂಡ್ಯ ಸ್ವರ್ಣಸಂದ್ರದ ಮಾನಸ ಎಂಬಾಕೆಯನ್ನು ಪ್ರೀತಿಸಿ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದನು. ದಂಪತಿಗೆ ಹೆಣ್ಣು ಮಗು ಇತ್ತು.
ಗದಗ: ಜಮೀನಲ್ಲಿ ಮಲಗಿದ್ದ ರೈತ ಕಾರ್ಮಿಕನ ಬರ್ಬರ ಹತ್ಯೆ ಪ್ರಕರಣ, ರುಂಡ ಪತ್ತೆ ಹಚ್ಚಿದ ಪೊಲೀಸರು
ಮದುವೆ ನಂತರ ಬೆಂಗಳೂರಿನಲ್ಲಿ ಸ್ವಂತ ಕಾರು ಚಾಲನೆ ಮಾಡಿಕೊಂಡು ಗುರು ವಿಲಾಸ್ ಜೀವನ ನಿರ್ವಹಣೆ ಮಾಡುತ್ತಿದ್ದನು. ಆದರೆ, ಗಂಡ- ಹೆಂಡತಿ ನಡುವೆ ಹೊಂದಾಣಿಕೆ ಇರಲಿಲ್ಲ. ಗುರುವಿಲಾಸ್ ತನ್ನ ಪತ್ನಿ ನಡವಳಿಕೆ ಮೇಲೆ ಅನುಮಾನಪಡುತ್ತಿದ್ದರಿಂದ ಆಗಾಗ ದಂಪತಿ ನಡುವೆ ಕಲಹ ನಡೆಯುತ್ತಿತ್ತು. ಗಂಡನ ವರ್ತನೆಯಿಂದ ಬೇಸತ್ತಿದ್ದ ಪತ್ನಿ ಮಾನಸ ಗಂಡನನ್ನು ತೊರೆದು ತವರು ಮನೆ ಸೇರಿಕೊಂಡಿದ್ದಳು. ನಂತರದಲ್ಲಿ ಗುರು ವಿಲಾಸ್ ಸಹ ಮಂಡ್ಯದ ಬಸವನಗುಡಿಯಲ್ಲಿದ್ದ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದನು.
ಗುರುವಾರ ಸಂಜೆ ಮೈಷುಗರ್ ವೃತ್ತದ ಸಿದ್ದಾರ್ಥ ಕೋಸ್ಟಲ್ ಬಾರ್ ಅಂಡ್ ರೆಸ್ಟೋರೆಂಟ್‌ಗೆ ತೆರಳಿದ್ದನು. ಆತನ ಜೊತೆಯಲ್ಲಿ ಪರಿಚಿತರೂ ಇದ್ದರು. ರಾತ್ರಿ ತನಕ ಎಲ್ಲರೂ ಕಂಠಪೂರ್ತಿ ಮದ್ಯಸೇವನೆ ಮಾಡಿದ್ದಾರೆ. ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಜೊತೆಯಲ್ಲಿದ್ದವರ ನಡುವೆ ಯಾವುದೋ ವಿಚಾರಕ್ಕೆ ಜಗಳ ಶುರುವಾಗಿದೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ ಜೊತೆಯಲ್ಲಿದ್ದವರು ಗುರುವಿಲಾಸ್‌ನನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಈ ಸಮಯದಲ್ಲಿ ಆತ ತಪ್ಪಿಸಿಕೊಳ್ಳಲು ಬಾರ್‌ನಿಂದ ಹೊರಗೆ ಓಡಿಬಂದಿದ್ದಾನೆ. ಆದರೂ ಆತನನ್ನು ಬಿಡದೆ ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಐಸಿಐಸಿಐ ಬ್ಯಾಂಕ್ ಬಳಿ ದೇಹದ ಬೆನ್ನಿನ ಭಾಗಕ್ಕೆ ಇರಿದಿದ್ದು ನಂತರ ಕತ್ತು ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಪತ್ನಿಯ ವಿಚಾರವಾಗಿ ಸ್ವಗ್ರಾಮ ಕಡಿಲುವಾಗಿಲು ಗ್ರಾಮದಲ್ಲಿ ಇತ್ತೀಚೆಗೆ ಯುವಕನೊಬ್ಬನ ಮೇಲೆ ಗುರು ವಿಲಾಸ್ ಹಲ್ಲೆ ನಡೆಸಿದ್ದನು. ಅಷ್ಟೇ ಅಲ್ಲದೇ, ಇತ್ತೀಚಿನ ದಿನಗಳಲ್ಲಿ ರೌಡಿಗಳೊಂದಿಗೂ ಒಡನಾಟ ಹೊಂದಿದ್ದನು ಎನ್ನಲಾಗಿದೆ. ಯಾವ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಿದ್ದಾರೆ ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.