*  ಇತ್ತೀಚೆಗೆ ಷೇರು ಏರಿಳಿತದಿಂದ ನಷ್ಟ*  ಲಾಡ್ಜಲ್ಲಿ ಸಾವಿಗೆ ಶರಣು*  ಅರ್ಜುನ್‌ ತಂಗಿದ್ದ ಲಾಡ್ಜ್‌ ಕೊಠಡಿಯಲ್ಲಿ ಮರಣ ಪತ್ರ ಪತ್ತೆ  

ಬೆಂಗಳೂರು(ಜೂ.18): ಆನ್‌ಲೈನ್‌ ಟ್ರೇಡಿಂಗ್‌ ಬ್ಯುಸಿನೆಸ್‌ನಲ್ಲಿ .2 ಕೋಟಿ ನಷ್ಟವಾಗಿದ್ದಕ್ಕೆ ಬೇಸರಗೊಂಡು ಲಾಡ್ಜ್‌ನಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸದ್ದುಗುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಕ್ಸ್‌ಟೌನ್‌ ನಿವಾಸಿ ಅರ್ಜುನ್‌ (33) ಮೃತ ದುರ್ದೈವಿ. ಬಿಟಿಎಂ ಲೇಔಟ್‌ನ ಹೊರ ವರ್ತುಲ ರಸ್ತೆಯ ಓಯೋ ಲಾಡ್ಜ್‌ನಲ್ಲಿ ವಿಷ ಸೇವಿಸಿ ಗುರುವಾರ ಮಧ್ಯಾಹ್ನ ಅರ್ಜುನ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ರಾತ್ರಿ ಮೃತನ ಕೊಠಡಿಗೆ ಲಾಡ್ಜ್‌ ಸಿಬ್ಬಂದಿ ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೃತ ಅರ್ಜುನ್‌, ತನ್ನ ಪೋಷಕರ ಜತೆ ಕಾಕ್ಸ್‌ಟೌನ್‌ನಲ್ಲಿ ನೆಲೆಸಿದ್ದ. 2014ರಿಂದ ಆನ್‌ಲೈನ್‌ನಲ್ಲಿ ಟ್ರೇಡಿಂಗ್‌ ಬ್ಯುಸಿನೆಸ್‌ನಲ್ಲಿ ತೊಡಗಿದ್ದ ಆತ, ಲಕ್ಷಾಂತರ ರುಪಾಯಿಯನ್ನು ಹೂಡಿಕೆ ಮಾಡಿದ್ದ. ಆದರೆ ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲೇ ಏರಿಳಿತದಿಂದ ಅರ್ಜುನ್‌ಗೆ ಸುಮಾರು .2 ಕೋಟಿ ನಷ್ಟವಾಗಿತ್ತು. ಈ ಹಣಕಾಸು ಸಮಸ್ಯೆಯಿಂದ ಬೇಸರಗೊಂಡ ಅರ್ಜುನ್‌, ಬುಧವಾರ ಮಧ್ಯಾಹ್ನ ಬಿಟಿಎಂ ಲೇಔಟ್‌ನ ರಿಂಗ್‌ ರೋಡ್‌ನಲ್ಲಿ ಓಯೋ ಲಾಡ್ಜ್‌ಗೆ ಬಂದು ಕೊಠಡಿ ಪಡೆದಿದ್ದಾನೆ.

ಸಾಲಪಾವತಿಗೆ ಬ್ಯಾಂಕ್‌ ನೋಟಿಸ್‌: ರೈತ ಆತ್ಮಹತ್ಯೆಗೆ ಶರಣು

ಮರುದಿನ ಮಧ್ಯಾಹ್ನ ಕೊಠಡಿಯಲ್ಲಿ ವಿಷ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ರಾತ್ರಿ 9 ಗಂಟೆಯಾದರೂ ಕೊಠಡಿಯಿಂದ ಅರ್ಜುನ್‌ ಹೊರಗೆ ಬಾರದೆ ಹೋದಾಗ ಲಾಡ್ಜ್‌ ಕೆಲಸಗಾರರಿಗೆ ಅನುಮಾನ ಮೂಡಿದೆ. ಆಗ ಕಿಟಕಿ ತೆಗೆದು ನೋಡಿದಾಗ ಪ್ರಜ್ಞಾಹೀನನಾಗಿ ಅರ್ಜುನ್‌ ಬಿದ್ದಿರುವುದನ್ನು ಕಂಡ ಸಿಬ್ಬಂದಿ, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಈ ಮಾಹಿತಿ ಮೇರೆಗೆ ಲಾಡ್ಜ್‌ಗೆ ತೆರಳಿದ ಪೊಲೀಸರು, ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡೆತ್‌ ನೋಟ್‌: 

ಅರ್ಜುನ್‌ ತಂಗಿದ್ದ ಲಾಡ್ಜ್‌ ಕೊಠಡಿಯಲ್ಲಿ ಮರಣ ಪತ್ರ ಪತ್ತೆಯಾಗಿದೆ. ತನ್ನ ಹಣಕಾಸು ವ್ಯವಹಾರಗಳ ಬಗ್ಗೆ ಪಾಲುದಾರರಿಗೆ ಮಾಹಿತಿ ನೀಡಿರುವ ಆತ, ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿದ್ದಾನೆ ಎನ್ನಲಾಗಿದೆ.