ಕೌಟುಂಬಿಕ ಕಲಹ ಹಾಗೂ ನಿರುದ್ಯೋಗದ ಕಾರಣದಿಂದಾಗಿ ಮನನೊಂದ ಯುವಕನೊಬ್ಬ ತನ್ನ ತಾಯಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಗುರುಗ್ರಾಮದಲ್ಲಿ ನಡೆದಿದೆ. 

ಗುರುಗ್ರಾಮ (ಏ.9): ಕೌಟುಂಬಿಕ ಕಲಹ (domestic discord) ಹಾಗೂ ನಿರುದ್ಯೋಗದಿಂದಾಗಿ (Unemployment) ಮನನೊಂದ ಯುವಕನೊಬ್ಬ ತನ್ನ ತಾಯಿಯನ್ನು ಚಾಕುವಿನಿಂದ ಇರಿದು (Stab) ಕೊಂದಿದ್ದಾನೆ. ಎಂದಿನಂತೆ ಇಂಜಿನಿಯರ್ ಆಗಿದ್ದ ಮಗನ ಮನೆಗೆ ಊಟ ಕೊಡಲು ತಾಯಿ ಹೋಗಿದ್ದಳು. ನಂತರ ಇಬ್ಬರೂ ದಾರಿಯಲ್ಲಿ ಪಾರ್ಕ್ ಬಳಿ ನಿಂತು ಮಾತನಾಡುತ್ತಿದ್ದ ವೇಳೆ ಯುವಕ ತನ್ನ ತಾಯಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತನ್ನ ಪತ್ನಿಯನ್ನು ಭೇಟಿ ಮಾಡಲು ತಾಯಿ ಅವಕಾಶ ನೀಡದ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ತಾಯಿಯನ್ನು ಚಾಕುವಿನಿಂದ ಇರಿದು ಕೊಂದ 32 ವರ್ಷದ ಇಂಜಿನಿಯರ್‌ನನ್ನು (Engineer ) ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು (Police) ಶುಕ್ರವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ ಶಿವಪುರಿ (Shivapuri) ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿ ಮನೀಶ್ ಭಂಡಾರಿ (Manish Bhandari) ಟಿಸಿಎಸ್‌ನಲ್ಲಿ ಉದ್ಯೋಗಿಯಾಗಿದ್ದು, ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

2018ರ ಡಿಸೆಂಬರ್ ನಲ್ಲಿ ಪತ್ನಿ ಮತ್ತು ಮಗನಿಂದ ಬೇರ್ಪಟ್ಟಿದ್ದರು ಮತ್ತು ಅಂದಿನಿಂದ ಮಾನೇಸರ್ (Manesar) ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಹಾಗೂ ಮಗನನ್ನು ಭೇಟಿ ಮಾಡಲು ತಾಯಿ ವಿರೋಧಿಸುತ್ತಿದ್ದ ಕಾರಣಕ್ಕಾಗಿ ಸಿಟ್ಟಿನಿಂದ ತಾಯಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಹೇಳಲಾಗಿದೆ. 

ಇಡೀ ಕೃತ್ಯವು ಸಿಸಿಟಿವಿಯಲ್ಲಿ (CCTV) ಸೆರೆಯಾಗಿದ್ದು, ಆರೋಪಿಯು ಮಹಿಳೆಯ ಮೇಲೆ ಹಲ್ಲೆ ನಡೆಸುವುದು, ನೆಲಕ್ಕೆ ತಳ್ಳುವುದು ಮತ್ತು ಹಲವು ಬಾರಿ ಚಾಕುವಿನಿಂದ ಇರಿದು ಪರಾರಿಯಾಗುವುದು ದಾಖಲಾಗಿದೆ ಎಂದು ತಿಳಿಸಿದ್ದಾರೆ. ಸದ್ಯ ವಿಚಾರಣೆ ನಡೆಸುತ್ತಿರುವ ಆರೋಪಿಯಿಂದ ಕೊಲೆಗೆ ಬಳಸಿದ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆತ ಪರಾರಿಯಾಗಲು ಬಳಸಿರುವ ಸ್ಕೂಟಿ ಇನ್ನೂ ಪತ್ತೆಯಾಗಿಲ್ಲ, ಅದಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. 'ಕೌಟುಂಬಿಕ ಕಲಹದಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ಪತ್ನಿ ಮತ್ತು ಮಗ ತನ್ನಿಂದ ಬೇರೆ ಬೇರೆಯಾಗಿ ವಾಸವಿದ್ದು, ಪತ್ನಿ ಮತ್ತು ಮಗನನ್ನು ವಾಪಸ್ ಕರೆತರುವುದಾಗಿ ಹೇಳಿಕೊಂಡಿದ್ದರೂ ತಾಯಿ ಒಪ್ಪದ ಕಾರಣ ಕೋಪದಿಂದ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ" ಎಂದು ಅಪರಾಧ ವಿಭಾಗದ ಡಿಸಿಪಿ ರಾಜೀವ್ ದೇಶ್ವಾಲ್ ಹೇಳಿದ್ದಾರೆ.

ಸಂತ್ರಸ್ತೆ ವೀಣಾ ಕುಮಾರಿ ಆರೋಗ್ಯ ಇಲಾಖೆಯಲ್ಲಿ ಉಪ ಅಧೀಕ್ಷಕರಾಗಿ ನಿವೃತ್ತರಾಗಿದ್ದು, ಶಿವಪುರಿ ಕಾಲೋನಿಯಲ್ಲಿ ಪತಿಯೊಂದಿಗೆ ವಾಸವಾಗಿದ್ದರು. ಭಂಡಾರಿ ಕೂಡ ಅದೇ ಕಾಲೋನಿಯಲ್ಲಿ ವಾಸಿಸುತ್ತಿದ್ದರು, ಆದರೆ ಅವರ ಪೋಷಕರಿಂದ ಬೇರೆಯಾಗಿದ್ದರು. ರಾತ್ರಿ 9:00 ಗಂಟೆ ಸುಮಾರಿಗೆ ಕುಮಾರಿ ತನ್ನ ಮಗನಿಗೆ ಊಟ ಕೊಡಲು ಹೋದಾಗ ಈ ಘಟನೆ ನಡೆದಿದೆ. ಭಾರತೀಯ ರೈಲ್ವೇಯ ನಿವೃತ್ತ ಉದ್ಯೋಗಿ ಸಂತ್ರಸ್ತೆಯ ಪತಿ ರಣವೀರ್ ಕುಮಾರ್ ಭಂಡಾರಿ ಅವರು ಸಲ್ಲಿಸಿದ ದೂರಿನ ಪ್ರಕಾರ, ಆತ ಹತ್ತಿರದಲ್ಲಿಯೇ ವಾಸವಿದ್ದ ಕಾರಣಕ್ಕೆ ತಾವಿಬ್ಬರೂ, ಮಗನಿಗೆ ಆಹಾರವನ್ನು ಕಳುಹಿಸುತ್ತಿದ್ದರು ಎಂದಿದ್ದಾರೆ.

ಡ್ರಗ್ಸ್ ಸೇವನೆ ಶಂಕೆ, ಲೇಟ್‌ನೈಟ್‌ ಪಾರ್ಟಿ ಮೇಲೆ ಸಿಸಿಬಿ ದಾಳಿ

"ನನ್ನ ಹೆಂಡತಿ ಮಗನಿಗೆ ಊಟವನ್ನು ಕೊಟ್ಟು ಮನೆಗೆ ಹಿಂತಿರುಗಬೇಕಿತ್ತು. ನಾನು ಅವಳನ್ನು ಉದ್ಯಾನವನದ ಬಳಿ ಹುಡುಕಲು ಹೋದೆ, ಮತ್ತು ಇಬ್ಬರು ಮಾತನಾಡುವುದನ್ನು ನೋಡಿದೆ. ಅವಳು ನನ್ನನ್ನು ಹೊರಡಲು ಹೇಳಿದಳು. ನಾನು ಹಿಂತಿರುಗಿ ಹೋಗಿ ಮನೆಯ ಹೊರಗೆ ಕುಳಿತಿದ್ದೆ ಎಂದು ಆರೋಪಿಸಿದ್ದಾರೆ. ಸ್ವಲ್ಪ ಸಮಯದ ನಂತರ, ಬೀದಿಯಲ್ಲಿ ಶಬ್ದವನ್ನು ಕೇಳಿದೆ.ಆ ಕಡೆಗೆ ಓಡಿದಾಗ, ನನ್ನ ಹೆಂಡತಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮಗ ಅಲ್ಲಿಂದ ಪರಾರಿಯಾಗಿದ್ದ ಎಂದು ಹೇಳಿದ್ದಾರೆ.

Bengaluru Crime: ತುಮಕೂರಿಂದ ಬೆಂಗ್ಳೂರಿಗೆ ಬಂದು ಬೈಕ್‌ ಕಳ್ಳತನ ಮಾಡಿದ್ದ ಖದೀಮ ಅರೆಸ್ಟ್‌

ಸ್ಥಳೀಯರ ನೆರವಿನಿಂದ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಅವರು ತಿಳಿಸಿದ್ದಾರೆ. ದೂರಿನ ಮೇರೆಗೆ ನ್ಯೂ ಕಾಲೋನಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಎಚ್‌ಒ ರಾಜೇಶ್‌ಕುಮಾರ್‌ ನೇತೃತ್ವದ ವಿಶೇಷ ತಂಡ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧನ ಮಾಡಿದೆ.