Asianet Suvarna News Asianet Suvarna News

ವಾಲ್ಮೀಕಿ ನಿಗಮದ ಮಾಜಿ ಎಂಡಿ ಬಳಿ 3.6 ಕೋಟಿ ಜಪ್ತಿ: ಮತ್ತೊಬ್ಬನ ಬಂಧನ

ಎಸ್‌ಐಟಿ ಅಧಿಕಾರಿಗಳು ಹೈದರಾಬಾದ್‌ ಗ್ಯಾಂಗ್‌ನಿಂದ 8.21 ಕೋಟಿ ರು. ನಗದು ಹಣ ಜಪ್ತಿ ಮಾಡಿದ ಬೆನ್ನಲ್ಲೇ ಇದೀಗ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನ ಬಳಿ 3.62 ಕೋಟಿ ರು. ನಗದು ಹಣ ಜಪ್ತಿ ಮಾಡಿದ್ದಾರೆ.

3 6 crore seized from former MD of Valmiki Corporation Another arrested gvd
Author
First Published Jun 14, 2024, 6:25 AM IST | Last Updated Jun 14, 2024, 6:25 AM IST

ಬೆಂಗಳೂರು (ಜೂ.14): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಖಾತೆಯಿಂದ ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಹೈದರಾಬಾದ್‌ ಗ್ಯಾಂಗ್‌ನಿಂದ 8.21 ಕೋಟಿ ರು. ನಗದು ಹಣ ಜಪ್ತಿ ಮಾಡಿದ ಬೆನ್ನಲ್ಲೇ ಇದೀಗ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನ ಬಳಿ 3.62 ಕೋಟಿ ರು. ನಗದು ಹಣ ಜಪ್ತಿ ಮಾಡಿದ್ದಾರೆ.

ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಸಂಬಂಧ ಎಸ್ಐಟಿ ಅಧಿಕಾರಿಗಳು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ 3.62 ಕೋಟಿ ರು. ಹಣ ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಎಸ್ಐಟಿ ಅಧಿಕಾರಿಗಳು ಒಟ್ಟು ಸುಮಾರು 11.83 ಕೋಟಿ ರು. ನಗದು ಜಪ್ತಿ ಮಾಡಿದಂತಾಗಿದೆ.

ವಾಲ್ಮೀಕಿ ಕೇಸ್‌: ಮೊದಲ ಬಾರಿ 8.2 ಕೋಟಿ ರು. ನಗದು ವಶಕ್ಕೆ, ಇಬ್ಬರು ಕಿಂಗ್‌ಪಿನ್ ಬಂಧನ!

ಮತ್ತೊಬ್ಬ ಆರೋಪಿ ಬಂಧನ: ಈ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹೈದರಾಬಾದ್‌ ಗ್ಯಾಂಗ್‌ನ ಮತ್ತೊಬ್ಬ ಸದಸ್ಯ ಎಸ್‌ಐಟಿ ಬಲೆಗೆ ಬಿದ್ದಿದ್ದಾನೆ. ಉಡುಪಿಯ ಜಗದೀಶ್‌ ಬಂಧಿತ. ಈತ ಹೈದರಾಬಾದ್‌ ಗ್ಯಾಂಗ್‌ನ ಚಂದ್ರಮೋಹನ್‌ ಸಹಚರನಾಗಿದ್ದಾನೆ. ಈತ ಹಣ ಅಕ್ರಮ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಕ್ರಮ ಕೈಗೊಳ್ಳಿ: ವಾಲ್ಮೀಕಿ ನಿಗಮದಲ್ಲಿ ಕೋಟ್ಯಂತರ ಹಣ ಲೂಟಿಯಾಗಿದ್ದು, ಇಂತಹ ಪ್ರಕರಣವನ್ನು ಬೇರು ಸಮೇತ ಕಿತ್ತುಹಾಕಬೇಕು. ಈ ರೀತಿಯ ಮೊಕದ್ದಮೆಯನ್ನು ಶೀಘ್ರ ವಿಲೇವಾರಿ ಮಾಡಲು ಕ್ರಮ ಕೈಗೊಂಡರೆ ಬೆಳೆಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಸಲಹೆ ನೀಡಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ವಾಲ್ಮೀಕಿ ನಿಗಮದ ಕೋಟ್ಯಂತರ ಹಣ ಲೂಟಿಕೋರರ ಪಾಲಾಗಿದೆ. ಎಂಬುದನ್ನು ನಾವು ಖಂಡಿಸುತ್ತೇವೆ. ಇದು ಒಂದು ನಿಗಮದ ನಿದರ್ಶನ ಅಷ್ಟೆ! ಭ್ರಷ್ಟಾಚಾರ ಕಡಿಮೆ ಆಗುತ್ತಿಲ್ಲ, ಬೆಳೆಯುತ್ತಿದೆ. ಆಡಳಿತ ನಡೆಸುವವರು ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ ಎಂದು ಬಾಯಿಯಲ್ಲಿ ಮಾತ್ರ ಹೇಳುತ್ತಾರೆ. ಅವರಿಂದ ಸಾಧ್ಯವಾಗುತ್ತಿಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ. ಇದನ್ನು ಹಾಗೇ ಬಿಡದೇ ಬೇರು ಸಮೇತ ಕಿತ್ತು ಹಾಕಬೇಕು ಎಂದರೆ ಸಾಧ್ಯವೇ? 

ವಾಲ್ಮೀಕಿ ಹಗರಣ ಕೇಸ್‌: 18 ನಕಲಿ ಖಾತೆ ರೂವಾರಿ ಹೈದ್ರಾಬಾದ್‌ನಲ್ಲಿ ಬಂಧನ

ಒಳ್ಳೆಯ ಬೆಳೆ ಬರಬೇಕಾದರೆ ಕಳೆ ಕೀಳಲೇಬೇಕು. ಒಳ್ಳೆಯ ಸಮಾಜ ನಿರ್ಮಾಣವಾಗಬೇಕಾದರೆ ಕಳೆ ಕೀಳದಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವೇ ಆಗುವುದಿಲ್ಲ’ ಎಂದು ಹೇಳಿದರು. ‘ಇದನ್ನು ಸಣ್ಣ ಹಗರಣ ಎಂದು ನಾವು ಭಾವಿಸಿಲ್ಲ. ಇದು ಬಹಳ ದೊಡ್ಡ ಹಗರಣ. ಫೇಕ್ ಖಾತೆ ತೆರೆದು ಇಲ್ಲಿಂದ ಹಣ ವರ್ಗಾಯಿಸಿ ಅಲ್ಲಿಂದ ಹಣ ಡ್ರಾ ಮಾಡಿಕೊಳ್ಳುತ್ತಾರೆ ಎಂದರೆ ಈ ಕೃತ್ಯ ಸಣ್ಣವರಿಂದ ಆಗಿಲ್ಲ. ದೊಡ್ಡವರಿಂದಲೇ ನಡೆದಿರುವ ಹೇಯ ಕೃತ್ಯ. ಇಂತಹ ಹಲವು ಪ್ರಕರಣ ನಡೆದರೂ ಯಾವ ಶಿಕ್ಷೆ ಆಗಿಲ್ಲ. ದುಡ್ಡು ಕೊಟ್ಟು ಮುಚ್ಚಿ ಹಾಕುವ ಸಂದರ್ಭಗಳೇ ಸಾಕ್ಷಿ. ಸಾರ್ವಜನಿಕ ಆಸ್ತಿ ಮತ್ತು ಹಣವನ್ನು ಯಾರು ಕಾಯಬೇಕು? ಆದರೆ ಕಾಯುವವರೇ ಮೇಯುವವರು ಆಗಿದ್ದಾರೆ. ಮಂದಗತಿಯಲ್ಲಿ ಇಂತಹ ಪ್ರಕರಣ ತನಿಖೆ ಮಾಡದೆ ಶೀಘ್ರಗತಿಯಲ್ಲಿ ನಡೆಸಬೇಕು’ ಎಂದು ಒತ್ತಾಯಿಸಿದರು.

Latest Videos
Follow Us:
Download App:
  • android
  • ios