Asianet Suvarna News Asianet Suvarna News

ವಾಲ್ಮೀಕಿ ಕೇಸ್‌: ಮೊದಲ ಬಾರಿ 8.2 ಕೋಟಿ ರು. ನಗದು ವಶಕ್ಕೆ, ಇಬ್ಬರು ಕಿಂಗ್‌ಪಿನ್ ಬಂಧನ!

ಹೈದರಾಬಾದ್‌ ಮೂಲದ ಚಂದ್ರಮೋಹನ್‌ ಬಂಧಿತ. ಮಂಗಳವಾರವಷ್ಟೇ ಸತ್ಯನಾರಾಯಣ ವರ್ಮಾ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಬಂಧಿಸಿದ್ದರು. ಈತನ ಬಂಧನದ ಬೆನ್ನಲ್ಲೇ ಸಹಚರ ಚಂದ್ರಮೋಹನ್‌ ಎಂಬಾತ ಹೈದರಾಬಾದ್‌ನಲ್ಲೇ ಎಸ್ಐಟಿ ಬಲೆಗೆ ಬಿದ್ದಿದ್ದಾನೆ. 

Valmiki case 8 2 crore cash seized for the first time gvd
Author
First Published Jun 13, 2024, 6:06 AM IST | Last Updated Jun 13, 2024, 6:06 AM IST

ಬೆಂಗಳೂರು (ಜೂ.13): ಹೈದರಾಬಾದ್‌ ಮೂಲದ ಚಂದ್ರಮೋಹನ್‌ ಬಂಧಿತ. ಮಂಗಳವಾರವಷ್ಟೇ ಸತ್ಯನಾರಾಯಣ ವರ್ಮಾ ಎಂಬಾತನನ್ನು ಎಸ್‌ಐಟಿ ಅಧಿಕಾರಿಗಳು ಹೈದರಾಬಾದ್‌ನಲ್ಲಿ ಬಂಧಿಸಿದ್ದರು. ಈತನ ಬಂಧನದ ಬೆನ್ನಲ್ಲೇ ಸಹಚರ ಚಂದ್ರಮೋಹನ್‌ ಎಂಬಾತ ಹೈದರಾಬಾದ್‌ನಲ್ಲೇ ಎಸ್ಐಟಿ ಬಲೆಗೆ ಬಿದ್ದಿದ್ದಾನೆ. ಈ ಇಬ್ಬರ ಬಂಧನದ ವೇಳೆ ಪತ್ತೆಯಾದ ಬರೋಬ್ಬರಿ 8.21 ಕೋಟಿ ರು. ನಗದನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಐಟಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆರು ದಿನ ಎಸ್‌ಐಟಿ ಕಸ್ಟಡಿಗೆ: ಎಸ್ಐಟಿ ಅಧಿಕಾರಿಗಳು ಈ ಇಬ್ಬರೂ ಆರೋಪಿಗಳನ್ನು ಬುಧವಾರ ಹೈದರಾಬಾದ್‌ನಿಂದ ಬೆಂಗಳೂರು ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದರು. ವಿಚಾರಣೆ ಮಾಡಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳನ್ನು ಆರು ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.
ಫೇಕ್‌ ಅಕೌಂಟ್‌ ತೆರೆಯುವಲ್ಲಿ ಪ್ರಮುಖ ಪಾತ್ರ:

ವಾಲ್ಮೀಕಿ ಹಗರಣ ಕೇಸ್‌: 18 ನಕಲಿ ಖಾತೆ ರೂವಾರಿ ಹೈದ್ರಾಬಾದ್‌ನಲ್ಲಿ ಬಂಧನ

ಬಂಧಿತ ಆರೋಪಿಗಳಾದ ಸತ್ಯನಾರಾಯಣ ವರ್ಮಾ ಮತ್ತು ಚಂದ್ರಮೋಹನ್‌ ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ 18 ನಕಲಿ ಖಾತೆ ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆರೋಪ ಕೇಳಿ ಬಂದಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಬೆಂಗಳೂರಿನ ಎಂ.ಜಿ.ರಸ್ತೆಯ ಯೂನಿಯನ್‌ ಬ್ಯಾಂಕ್‌ ಇಂಡಿಯಾ ಶಾಖೆಯಲ್ಲಿ ಹೊಂದಿರುವ ಬ್ಯಾಂಕ್‌ ಖಾತೆಯಿಂದ 18 ಬ್ಯಾಂಕ್‌ ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರು. ಹಣ ಅಕ್ರಮವಾಗಿ ವರ್ಗಾವಣೆಯಾಗಿತ್ತು. ಈ ಪ್ರಕರಣದ ತನಿಖೆ ಸಂಬಂಧ ರಾಜ್ಯ ಸರ್ಕಾರ ಎಸ್ಐಟಿ ರಚಿಸಿತ್ತು. ಈ ಎಸ್ಐಟಿ ತನಿಖೆ ವೇಳೆ ನಿಗಮದ ಬ್ಯಾಂಕ್‌ ಖಾತೆಯಿಂದ 18 ನಕಲಿ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿತ್ತು.

ಸಂಘಟಿತ ವಂಚಕರ ಗ್ಯಾಂಗ್‌: ಈ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಘಟಿತವಾಗಿ ಆರೋಪಿಗಳ ಗ್ಯಾಂಗ್‌ ಕೆಲಸ ಮಾಡಿದೆ. ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ ನೆಕ್ಕುಂಟಿ ನಾಗರಾಜ್‌ ಮಧ್ಯಸ್ಥಿಕೆಯಲ್ಲಿ ಈ ಅಕ್ರಮ ಹಣ ವರ್ಗಾವಣೆ ನಡೆದಿದೆ. ಆರೋಪಿಗಳಾದ ಸತ್ಯನಾರಾಯಣ ವರ್ಮಾ ಮತ್ತು ಚಂದ್ರಮೋಹನ್‌ ಹೈದರಾಬಾದ್‌ನಲ್ಲಿ ಫಸ್ಟ್‌ ಫೈನಾನ್ಸ್‌ ಕೋ ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷ ಸತ್ಯನಾರಾಯಣನ ಸಹಕಾರ ಪಡೆದು ಬ್ಲೇಡ್‌ ಕಂಪನಿಗಳ ಹೆಸರಿನಲ್ಲಿ 18 ನಕಲಿ ಖಾತೆ ತೆರೆದಿದ್ದರು.

ಬಳಿಕ ಆರೋಪಿ ನೆಕ್ಕುಂಟಿ ನಾಗರಾಜ್‌ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನ ಮೇಲೆ ಒತ್ತಡ ಹಾಕಿಸಿ ನಿಗಮದ ಖಾತೆಯಿಂದ ಈ ನಕಲಿ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸಿದ್ದ. ಬಳಿಕ ಆರೋಪಿಗಳು ಈ ನಕಲಿ ಬ್ಯಾಂಕ್‌ ಖಾತೆಗಳಿಂದ ಹಣ ಡ್ರಾ ಮಾಡಿದ್ದಾರೆ ಎಂಬುದು ಎಸ್ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಿಜೆಪಿ ಅವಧಿಯಲ್ಲೂ ವಾಲ್ಮೀಕಿ ನಿಗಮದಲ್ಲಿ ಅಕ್ರಮ: ಸಚಿವ ರಾಮಲಿಂಗಾರೆಡ್ಡಿ

ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆ: ಈಗಾಗಲೇ ಎಸ್‌ಐಟಿ ಈ ಅಕ್ರಮ ಹಣ ವರ್ಗಾವಣೆ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್‌ ದುರ್ಗಣ್ಣನವರ್‌, ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್‌ ಮತ್ತು ಆತನ ಭಾವಮೈದುನ ನಾಗೇಶ್ವರ್‌ ರಾವ್‌ ಹಾಗೂ ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕೋ ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಸತ್ಯನಾರಾಯಣ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಇದೀಗ ಈ ಇಬ್ಬರ ಬಂಧನದೊಂದಿಗೆ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣದಲ್ಲಿ ಮತ್ತಷ್ಟು ಮಂದಿ ವಂಚಕರ ಬಂಧನವಾಗುವ ಸಾಧ್ಯತೆಯಿದೆ.

Latest Videos
Follow Us:
Download App:
  • android
  • ios