ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲವನ್ನು ಬಯಲಿಗೆಳೆದಿರುವ ದೆಹಲಿ ಪೊಲೀಸ್ ವಿಶೇಷ ತಂಡದಿಂದ ಭರ್ಜರಿ 2500 ಕೋಟಿ ರು. ಮೌಲ್ಯದ 354 ಕೇಜಿಯಷ್ಟು ಡ್ರಗ್ಸ್ ವಶ ಉತ್ತಮ ಗುಣಮುಟ್ಟದ ಹೆರಾಯಿನ್ ಜಪ್ತಿ
ನವದೆಹಲಿ (ಜು.11): ಅಂತಾರಾಷ್ಟ್ರೀಯ ಮಾದಕ ದ್ರವ್ಯ ಜಾಲವನ್ನು ಬಯಲಿಗೆಳೆದಿರುವ ದೆಹಲಿ ಪೊಲೀಸ್ ಪಡೆಯ ವಿಶೇಷ ತಂಡವು ಭರ್ಜರಿ 2500 ಕೋಟಿ ರು. ಮೌಲ್ಯದ 354 ಕೇಜಿಯಷ್ಟುಉತ್ತಮ ಗುಣಮುಟ್ಟದ ಹೆರಾಯಿನ್ ಅನ್ನು ಜಪ್ತಿ ಮಾಡಿಕೊಂಡಿದೆ. ಅಲ್ಲದೆ ಈ ಪ್ರಕರಣದಲ್ಲಿ ದೆಹಲಿ ಮೂಲದ ಒಬ್ಬ ಮತ್ತು ಹರಾರಯಣ ಮೂಲದ ಮೂವರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ದೆಹಲಿ ಪೊಲೀಸರ ವಿಶೇಷ ದಳ ಬಯಲು ಮಾಡಿದ ಅತಿದೊಡ್ಡ ಅಂತಾರಾಷ್ಟ್ರೀಯ ಡ್ರಗ್ ಜಾಲಗಳಲ್ಲಿ ಇದು ಒಂದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಾದಕ ದ್ರವ್ಯದ ಭಯೋತ್ಪಾದನೆ ಆಯಾಮದಲ್ಲಿ ಈ ಪ್ರಕರಣವನ್ನು ತನಿಖೆಗೊಳಪಡಿಸಲಾಗಿದ್ದು, ಈ ಪ್ರಕರಣದಲ್ಲಿ ಬಂಧಿತರಾದ ಮತ್ತು ಶಂಕಿತರನ್ನು ವಿಚಾರಣೆಗೊಳಪಡಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಶಾಕ್: ಅಷ್ಘಾನಿಸ್ತಾನದಿಂದ ಬಂದ 879 ರೂ. ಕೋಟಿ ಮೌಲ್ಯದ ಹೆರಾಯಿನ್ ವಶ! ...
ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶೇಷ ದಳದ ಅಧಿಕಾರಿ ನೀರಜ್ ಠಾಕೂರ್, ‘ಈ ಮಾದಕ ದ್ರವ್ಯದ ಜಾಲ ಭೇದಿಸಲು ಕಳೆದೊಂದು ತಿಂಗಳಿಂದಲೂ ಕಾರ್ಯಾಚರಣೆ ನಡೆಸಲಾಗಿತ್ತು. ಈ ಮಾದಕ ದ್ರವ್ಯವು ಆಷ್ಘಾನಿಸ್ತಾನದಿಂದ ಬಂದಿದ್ದು, ಇವುಗಳನ್ನು ಮುಚ್ಚಿಡಲಾಗಿದ್ದ ಸಮುದ್ರದ ಕಂಟೇನರ್ ಮೂಲಕ ಮುಂಬೈನಿಂದ ದೆಹಲಿಗೆ ರವಾನಿಸಲಾಗಿದೆ. ಅಲ್ಲದೆ ಈ ಡ್ರಗ್ಸ್ ಅನ್ನು ಮಧ್ಯಪ್ರದೇಶದ ಶಿವಪುರಿ ಎಂಬಲ್ಲಿರುವ ಕಾರ್ಖಾನೆಯೊಂದರಲ್ಲಿ ಸಂಸ್ಕರಣೆ ಮಾಡಲಾಗುತ್ತಿತ್ತು. ಸಂಸ್ಕರಿಸಿದ ಮತ್ತು ಶುದ್ಧ ಡ್ರಗ್ ಅನ್ನು ಸುರಕ್ಷಿತವಾಗಿ ಮುಚ್ಚಿಡಲು ಫರೀದಾಬಾದ್‌ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆಯಲಾಗಿತ್ತು. ಅಷ್ಘಾನಿಸ್ತಾನದಲ್ಲಿ ಕುಳಿತಿರುವ ಡ್ರಗ್ಸ್ ದಂಧೆಕೋರ ಈ ಮಾದಕ ವಸ್ತುವನ್ನು ಪಂಜಾಬ್‌ಗೆ ಸಾಗಿಸಲು ಬಯಸಿದ್ದ’ ಎಂದಿದ್ದಾರೆ.
ಈ ಮಾದಕ ವಸ್ತುವಿನ ಅಂತಾರಾಷ್ಟ್ರೀಯ ಜಾಲಕ್ಕೆ ಪಾಕಿಸ್ತಾನದಿಂದಲೂ ಹಣ ಸಂದಾಯವಾಗಿರಬಹುದು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಭಯೋತ್ಪಾದನೆ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
