* ಪಂಜಾಬ್‌ಗೆ ಸಾಗಿಸಲು ತಂದಿದ್ದ ಮಾದಕ ದ್ರವ್ಯ ಮಹಾರಾಷ್ಟ್ರ ಬಂದರಲ್ಲಿ ಜಪ್ತಿ* ಡ್ರಗ್ಸ್‌ ಶಾಕ್‌: ಅಷ್ಘಾನಿಸ್ತಾನದಿಂದ ಬಂದ 879 ಕೋಟಿ ಮೌಲ್ಯದ ಹೆರಾಯಿನ್‌ ವಶ* ಜಿಪ್ಸಂ, ಟಾಲ್ಕಂ ಪೌಡರ್‌ ಹೆಸರಲ್ಲಿ ಭಾರಿ ಪ್ರಮಾಣದ ಹೆರಾಯಿನ್‌ ಸಾಗಣೆ ಪತ್ತೆ

ಮುಂಬೈ(ಜು.05): ಕೊರೋನಾ ಅವಧಿಯಲ್ಲಿ ದೇಶದಲ್ಲಿ ಡ್ರಗ್ಸ್‌ ಹಾವಳಿ ಕಡಿಮೆಯಾಗಿರಬಹುದು ಎಂದೇನಾದರೂ ನೀವು ಅಂದುಕೊಂಡಿದ್ದರೆ ಅದು ತಪ್ಪು. ಕೋವಿಡ್‌ ಅಲೆಯ ಹೊರತಾಗಿಯೂ ದೇಶಕ್ಕೆ ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಹೆರಾಯಿನ್‌ ಸೇರಿದಂತೆ ಮಾದಕ ವಸ್ತುಗಳು ಅಕ್ರಮವಾಗಿ ಆಮದಾಗುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ. ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮಾದಕ ವಸ್ತು ಬಳಕೆಯ ಕುಖ್ಯಾತಿ ಹೊಂದಿರುವ ಪಂಜಾಬ್‌ಗೆ ಸಾಗಿಸಲೆಂದು ತರಲಾಗಿದ್ದ ಭರ್ಜರಿ 300 ಕೆ.ಜಿ.ಯಷ್ಟುಹೆರಾಯಿನ್‌ ಅನ್ನು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಮಹಾರಾಷ್ಟ್ರದಲ್ಲಿ ವಶಪಡಿಸಿಕೊಂಡಿದ್ದಾರೆ.

ಇದರೊಂದಿಗೆ ಪಾಕಿಸ್ತಾನ ಮತ್ತು ಆಷ್ಘಾನಿಸ್ತಾನದಿಂದ ಭಾರತಕ್ಕೆ ನಿರಂತರವಾಗಿ ಮಾದಕ ವಸ್ತುಗಳ ಸಾಗಣೆ ಮುಂದುವರೆದಿರುವುದಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ.

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಜವಾಹರಲಾಲ್‌ ನೆಹರೂ ಪೋರ್ಟ್‌ ಟ್ರಸ್ಟ್‌ಗೆ ಆಷ್ಘಾನಿಸ್ತಾನದಿಂದ ತರಲಾಗಿದ್ದ ಸರಕೊಂದನ್ನು ಕಳೆದ ಗುರುವಾರ ಪರಿಶೀಲಿಸಿದ ವೇಳೆ ಅದು ‘ಉಡ್ತಾ ಪಂಜಾಬ್‌’ಗೆ ಸಾಗಿಸಲೆಂದು ಆಮದು ಮಾಡಿಕೊಳ್ಳಲಾಗಿದ್ದ 300 ಕೆ.ಜಿ. ಹೆರಾಯಿನ್‌ ಎಂದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 879 ಕೋಟಿ ರು. ಎಂದು ಅಧಿಕಾರಿಗಳು ಹೇಳಿದ್ದಾರೆ. ಒಮ್ಮೆಗೇ ಇಷ್ಟುಪ್ರಮಾಣದ ಡ್ರಗ್ಸ್‌ ಕಂಡು ಸ್ವತಃ ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್‌ ಸಿಕ್ಕಿದ್ದು ಇದೇ ಮೊದಲು. ಪ್ರಕರಣ ಸಂಬಂಧ ಪ್ರಭ್‌ಜೋತ್‌ಸಿಂಗ್‌ ಎಂಬಾತನನ್ನು ಬಂಧಿಸಲಾಗಿದೆ.

ಟಾಲ್ಕಂ ಪೌಡರ್‌:

ಪಂಜಾಬ್‌ ಮೂಲದ ಪ್ರಭ್‌ಜೋತ್‌ಸಿಂಗ್‌ ಎಂಬಾತ ಕಳೆದೊಂದು ವರ್ಷದಿಂದ ಅಷ್ಘಾನಿಸ್ತಾನದಿಂದ ಜಿಪ್ಸಂ ಸ್ಟೋನ್‌ ಮತ್ತು ಟಾಲ್ಕಂ ಪೌಡರ್‌ ಹೆಸರಿನಲ್ಲಿ ಸರಕು ಆಮದು ಮಾಡಿಕೊಳ್ಳುತ್ತಿದ್ದ. ಕಳೆದ ಗುರುವಾರ ಕೂಡಾ ಹೀಗೆ ಹಡಗೊಂದರಲ್ಲಿ ಇರಾನ್‌ ಮೂಲಕ ಸರಕು ಆಗಮಿಸಿತ್ತು. ಅನುಮಾನ ಬಂದು ಅದನ್ನು ಪರಿಶೀಲನೆ ಮಾಡಿದಾಗ ಅದರೊಳಗೆ ಜಿಪ್ಸಂ ಸ್ಟೋನ್‌, ಟಾಲ್ಕಂ ಪೌಡರ್‌ ಬದಲಾಗಿ ಹೆರಾಯಿನ್‌ ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಪ್ರಭ್‌ಜೋತ್‌ ತರಿಸಿರುವ ಸರಕಿನಲ್ಲಿ ಒಂದೇ ದಿನದಲ್ಲಿ ಇಷ್ಟುದೊಡ್ಡ ಪ್ರಮಾಣದ ಡ್ರಗ್ಸ್‌ ಪತ್ತೆಯಾಗಿದೆ ಎಂದಾದಲ್ಲಿ ಕಳೆದ ಒಂದು ವರ್ಷದಲ್ಲಿ ಆತ ಎಷ್ಟುಪ್ರಮಾಣದಲ್ಲಿ ಆಮದು ಮಾಡಿಕೊಂಡು ಪಂಜಾಬ್‌ನಲ್ಲಿ ಮಾದಕ ವಸ್ತು ಮಾರಾಟ ಮಾಡಿರಬಹುದು ಎಂಬ ಲೆಕ್ಕಾಚಾರವೇ ಅಧಿಕಾರಿಗಳನ್ನು ಕಂಗಾಲಾಗಿಸಿದೆ.

ಕೊರೋನಾ ವೇಳೆಯೂ ಭರ್ಜರಿ ಡ್ರಗ್ಸ್‌ ದಂಧೆ!

ಕೊರೋನಾ ಸಮಯದಲ್ಲಿ ಎಲ್ಲದಕ್ಕೂ ನಿರ್ಬಂಧವಿದ್ದರೂ ಡ್ರಗ್ಸ್‌ ಸಾಗಣೆ ಮಾತ್ರ ಕಡಿಮೆಯಾಗಿಲ್ಲ. ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಆರ್ಯುವೇದ ಔಷಧದ ಹೆಸರಿನಲ್ಲಿ ತರಿಸಲಾಗಿದ್ದ ಸರಕೊಂದನ್ನು ಪರಿಶೀಲಿಸಿದ ವೇಳೆ ಅದರಲ್ಲಿ 1000 ಕೋಟಿ ರು. ಮೌಲ್ಯದ ಡ್ರಗ್ಸ್‌ ಪತ್ತೆಯಾಗಿತ್ತು.

ದಿಲ್ಲಿಯಲ್ಲಿ ಬಳೆಯೊಳಗೆ ಭಾರಿ ಪ್ರಮಾಣದ ಡ್ರಗ್ಸ್‌

78 ಬಳೆಗಳಲ್ಲಿ ಅಡಗಿಸಿ ಸಾಗಿಸಲು ಯತ್ನಿಸಲಾಗುತ್ತಿದ್ದ ಸುಮಾರು 7.5 ಕೋಟಿ ರು.ಮೌಲ್ಯದ 1.2 ಕೆ.ಜಿ. ಹೆರಾಯಿನ್‌ ಅನ್ನು ದೆಹಲಿ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗದಲ್ಲಿ ವಶಪಡಿಸಿಕೊಳ್ಳಲಾಗಿದೆ. ಆಫ್ರಿಕಾದಿಂದ ಬಂದಿದ್ದ ಈ ಸರಕನ್ನು ಗುರುಗ್ರಾಮಕ್ಕೆ ಕಳುಹಿಸಲಾಗುತ್ತಿತ್ತು.

ಪತ್ತೆಯಾಗಿದ್ದು ಹೇಗೆ?

- ಪಂಜಾಬ್‌ನ ಪ್ರಭ್‌ಜೋತ್‌ ಸಿಂಗ್‌ ಎಂಬಾತನಿಂದ ನಿಯಮಿತವಾಗಿ ಸರಕು ಆಮದು

- ಅಷ್ಘಾನಿಸ್ತಾನದಿಂದ ಟಾಲ್ಕಂ ಪೌಡರ್‌, ಜಿಪ್ಸಂ ಸ್ಟೋನ್‌ ಹೆಸರಿನಲ್ಲಿ ಸರಕು ಸಾಗಣೆ

- ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಜವಾಹರಲಾಲ್‌ ನೆಹರು ಬಂದರಿಗೆ ಸರಕು ಬರುತ್ತಿತ್ತು

- ಈ ಬಾರಿ ಅನುಮಾನಗೊಂಡು ಅಧಿಕಾರಿಗಳು ಪರಿಶೀಲಿಸಿದಾಗ 300 ಕೆ.ಜಿ. ಹೆರಾಯಿನ್‌ ಪತ್ತೆ