ತನ್ನ ತಂಗಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನಲೆಯಲ್ಲಿ ತರಕಾರಿ ವ್ಯಾಪಾರಿಯೊಬ್ಬ ತನ್ನ ಬಾಮೈದನನ್ನು ಬರ್ಬರವಾಗಿ ಕೊಂದು ಕೆಂಗೇರಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿರುವ ಘಟನೆ ನಡೆದಿದೆ.

ಬೆಂಗಳೂರು(ಜ.19): ತನ್ನ ತಂಗಿ ಜತೆ ಅಕ್ರಮ ಸಂಬಂಧ ಶಂಕೆ ಹಿನ್ನಲೆಯಲ್ಲಿ ತರಕಾರಿ ವ್ಯಾಪಾರಿಯೊಬ್ಬ ತನ್ನ ಬಾಮೈದನನ್ನು ಬರ್ಬರವಾಗಿ ಕೊಂದು ಕೆಂಗೇರಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿರುವ ಘಟನೆ ಮಂಗಳವಾರ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಸತೀಶ್‌ ಕುಮಾರ್‌ (25) ಕೊಲೆಯಾದ ದುರ್ದೈವಿ. ಈ ಘಟನೆ ಸಂಬಂಧ ಪೊಲೀಸರಿಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ವೆಂಕಟೇಶ್‌ ಶರಣಾಗಿದ್ದಾನೆ. ಕೌಟುಂಬಿಕ ವಿಚಾರವಾಗಿ ಸೋಮವಾರ ಮಧ್ಯಾಹ್ನ ಕೆಂಗೇರಿ ಸಮೀಪದ ಚಿಕ್ಕನಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಬಾವ-ಬಾಮೈದನ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ವೆಂಕಟೇಶ್‌, ತರಕಾರಿ ಕತ್ತರಿಸಲು ಇಟ್ಟುಕೊಂಡಿದ್ದ ಚಾಕುವಿನಿಂದ ಸತೀಶ್‌ನ ಕುತ್ತಿಗೆ, ತೊಡೆ ಹಾಗೂ ಹೊಟ್ಟೆಗೆ ಇರಿದಿದ್ದಾನೆ. ಬಳಿಕ ಚರಂಡಿಗೆ ಬಿದ್ದ ಆತನ ಕತ್ತು ಕುಯ್ದು ಭೀಕರವಾಗಿ ಆತ ಕೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Chitradurga: ಪೋಟೋ ಸ್ಟುಡಿಯೋ ಮಾಲೀಕ ಬಸವರಾಜ್ ಕೊಲೆಗೆ ಕಾರಣವೇ ಸ್ವಂತ ಅಕ್ಕ!

ಅನೈತಿಕ ಸಂಬಂಧಕ್ಕೆ ಬಾಮೈದ ಬಲಿ: 

ಚಿಕ್ಕಮಗಳೂರಿನ ಸತೀಶನ ತಂಗಿಯನ್ನು ವೆಂಕಟೇಶ್‌ ವಿವಾಹವಾಗಿದ್ದು, ಕೆಂಗೇರಿ ಸಮೀಪ ದಂಪತಿ ನೆಲೆಸಿದೆ. ನಗರದಲ್ಲಿ ಫುಡ್‌ಡೆಲವರಿ ಬಾಯ್‌ ಆಗಿ ಕೆಲಸ ಮಾಡಿಕೊಂಡಿದ್ದ ಸತೀಶ್‌ಗೆ ವೆಂಕಟೇಶ್‌ನ ವಿವಾಹಿತ ಸೋದರಿ ಜತೆ ಸಲುಗೆ ಬೆಳದಿದೆ. ಬಳಿಕ ಅದು ಅಕ್ರಮ ಸಂಬಂಧಕ್ಕೂ ತಿರುಗಿದೆ. ಕೊನೆಗೆ ತನ್ನ ಪತಿ ಹಾಗೂ ಮಗುವಿನಿಂದ ಪ್ರತ್ಯೇಕಳಾದ ಆಕೆ, ಕೆಂಗೇರಿ ಉಪ ನಗರದಲ್ಲಿ ಸತೀಶ್‌ ಜತೆ ಲಿವಿಂಗ್‌ ಟುಗೆದರ್‌ನಲ್ಲಿ ನೆಲೆಸಿದ್ದಳು.

ಇತ್ತೀಚೆಗೆ ಈ ಇಬ್ಬರ ಮಧ್ಯೆ ಮನಸ್ತಾಪ ಬೆಳೆದು ಸತೀಶ್‌ ದೂರವಾಗಿದ್ದ. ಆದರೆ ತನ್ನ ತಂಗಿ ಜತೆ ಅಕ್ರಮ ಸಂಬಂಧ ಮಾಡಿ ಬದುಕು ನಾಶ ಮಾಡಿದ ಎಂದು ಬಾಮೈದ ಸತೀಶ್‌ ಮೇಲೆ ವೆಂಕಟೇಶ್‌ ಸಿಟ್ಟುಗೊಂಡಿದ್ದ. ಇದೇ ಹೊತ್ತಿಗೆ ಸತೀಶ್‌ ಜತೆ ತಂಗಿ ಗಲಾಟೆ ವಿಚಾರ ತಿಳಿದು ಮತ್ತಷ್ಟು ಆತ ಕೆರಳಿದ್ದ. ಇದೇ ಹಿನ್ನಲೆಯಲ್ಲಿ ಮಾತುಕತೆ ಸಲುವಾಗಿ ಆತನನ್ನು ಚಿಕ್ಕನಹಳ್ಳಿ ಬಳಿಗೆ ಸೋಮವಾರ ಮಧ್ಯಾಹ್ನ ವೆಂಕಟೇಶ್‌ ಕರೆಸಿಕೊಂಡಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.

ಬಾಮೈದನ ಹತ್ಯೆ ಮಾಡಿದ ಬಳಿಕ ಶ್ರೀರಂಗಪಟ್ಟಣಕ್ಕೆ ತೆರಳಿದ ವೆಂಕಟೇಶ್‌, ಅಲ್ಲಿ ತನ್ನ ರಕ್ತಸಿಕ್ತ ಬಟ್ಟೆಗಳನ್ನು ಬದಲಾಯಿಸಿ ರಾತ್ರಿಯೀಡಿ ಏಕಾಂಗಿಯಾಗಿ ನದಿ ದಡೆಯಲ್ಲಿ ಕುಳಿತಿದ್ದಾನೆ. ಕೊನೆಗೆ ಬಂಧನ ಭೀತಿಯಿಂದ ಕೆಂಗೇರಿ ಠಾಣೆಗೆ ಸ್ವಯಂ ಬಂದು ವೆಂಕಟೇಶ್‌ ಶರಣಾಗಿದ್ದಾನೆ.