ಬೆಂಗಳೂರಿನ ಹೆಗಡೆ ನಗರ ನಿವಾಸಿ ಫಾರೂಕ್ ಖಾನ್ ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಗರುಡಾಚಾರ್ ಪಾಳ್ಯದ ಸುಹೇಲ್ ಖಾನ್, ಹೆಗಡೆ ನಗರದ ಮುಬಾರಕ್ ಹಾಗೂ ಬಿಲ್ವಾರದಹಳ್ಳಿಯ ಟಿಪ್ಪು ಸರ್ಕಲ್ ಅಲಿ ಅಕ್ರಂ ಬಂಧಿತರಾಗಿದ್ದಾರೆ.
ಬೆಂಗಳೂರು(ಸೆ.20): ಸುಳ್ಳು ಪೊಲೀಸ್ ಕೇಸ್ ಹಾಕಿಸುವುದಾಗಿ ಬೆದರಿಸಿ 10 ಸಾವಿರ ರು. ಸುಲಿಗೆ ಮಾಡಿದ ಹಿನ್ನಲೆಯಲ್ಲಿ ಕೋಪಗೊಂಡು ತಮ್ಮ ಸ್ನೇಹಿತನನ್ನು ಚಾಕುವಿನಿಂದ ಕತ್ತು ಕುಯ್ದು ಹತ್ಯೆಗೈದ ಬಳಿಕ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ಮೃತನ ಮೂವರು ಸ್ನೇಹಿತರು ಶರಣಾಗಿದ್ದಾರೆ.
ಹೆಗಡೆ ನಗರ ನಿವಾಸಿ ಫಾರೂಕ್ ಖಾನ್ (24) ಮೃತ ದುರ್ದೈವಿ. ಈ ಹತ್ಯೆ ಸಂಬಂಧ ಗರುಡಾಚಾರ್ ಪಾಳ್ಯದ ಸುಹೇಲ್ ಖಾನ್, ಹೆಗಡೆ ನಗರದ ಮುಬಾರಕ್ ಹಾಗೂ ಬಿಲ್ವಾರದಹಳ್ಳಿಯ ಟಿಪ್ಪು ಸರ್ಕಲ್ ಅಲಿ ಅಕ್ರಂ ಬಂಧಿತರಾಗಿದ್ದಾರೆ. ಸಂಪಿಗೆಹಳ್ಳಿ ಸಮೀಪದ ಅರ್ಕಾವತಿ ಬಡಾವಣೆಯಿಂದ ಭಾನುವಾರ ಮಧ್ಯಾಹ್ನ 2 ಗಂಟೆಗೆ ಫಾರೂಕ್‌ನನ್ನು ಆತನ ಸ್ನೇಹಿತರು ಆಟೋದಲ್ಲಿ ಬಲವಂತವಾಗಿ ಕೂರಿಸಿಕೊಂಡು ಅಪಹರಿಸಿದ್ದರು. ಬಳಿಕ ಆತನ ಕುತ್ತಿಗೆ ಚಾಕುವಿನಿಂದ ಇರಿದು ಕೊಂದು ರಸ್ತೆ ಬದಿ ಮೃತದೇಹ ಎಸೆದಿದ್ದಾರೆ. ಈ ಹತ್ಯೆ ಸಂಬಂಧ ಮೃತನ ಸೋದರ ಶಬ್ಬೀರ್ ಅಹಮದ್ ದೂರು ನೀಡಿದ್ದರು. ಅಷ್ಟರಲ್ಲಿ ಠಾಣೆಗೆ ತೆರಳಿ ಆರೋಪಿಗಳು ಸ್ವಯಂ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಿರುಕುಳ ತಾಳದೇ ತವರುಮನೆ ಸೇರಿದ್ದ ಪತ್ನಿಯನ್ನ ಗುಂಡು ಹಾರಿಸಿ ಕೊಂದ ಪತಿ!
ಹಾಫ್ ಮರ್ಡರ್ ಬೇಡ ಎಂದು ಫುಲ್ ಮಾಡಿದ್ರು
ಮೃತ ಫಾರೂಕ್ ಹಾಗೂ ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದು, ವೆಲ್ಡಿಂಗ್ ಹಾಗೂ ಆಟೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದರು. ಕೆಲ ದಿನಗಳ ಹಿಂದೆ ಸುಹೇಲ್ ಖಾನ್‌ಗೆ ನೀನು ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದೀಯಾ ಎಂದು ಪೊಲೀಸರಿಗೆ ಸುಳ್ಳು ಹೇಳಿ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ ₹10 ಸಾವಿರವನ್ನು ಫಾರೂಕ್ ಖಾನ್ ಹಾಗೂ ಆತನ ಗೆಳೆಯ ಸದ್ದಾಂ ಸುಲಿಗೆ ಮಾಡಿದ್ದರು.
ಅಲ್ಲದೆ ಆತನ ಮೊಬೈಲ್‌ನನ್ನು ಕಸಿದುಕೊಂಡು ಫಾರೂಕ್ ಒಡೆದು ಹಾಕಿದ್ದ. ಇದಕ್ಕೆ ಪ್ರತೀಕಾರ ತೀರಿಸಲು ಸುಹೇಲ್ ನಿರ್ಧರಿಸಿದ್ದ. ಆಗ ಆತನಿಗೆ ಮುಬಾರಕ್ ಹಾಗೂ ಅಕ್ರಂ ಸಾಥ್ ಕೊಟ್ಟಿದ್ದಾರೆ. ಅಂತೆಯೇ ಅರ್ಕಾವತಿ ಬಡಾವಣೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಸುಮಾರಿಗೆ ಫಾರೂಕ್‌ನನ್ನು ಮಾತನಾಡುವ ನೆಪದಲ್ಲಿ ಆರೋಪಿಗಳು ಕರೆಸಿದ್ದರು. ಆಗ ಅಲ್ಲಿಗೆ ಬಂದ ಫಾರೂಕ್‌ನನ್ನು ಸುಹೇಲ್ ತಂಡವು ಆಟೋಗೆ ಹತ್ತಿಸಿಕೊಂಡಿದೆ.
ನಂತರ ಆಟೋದಲ್ಲಿ ಫಾರೂಕ್‌ಗೆ ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ಚರಂಡಿಗೆ ಮೃತದೇಹ ಎಸೆದು ಆರೋಪಿಗಳು ತೆರಳಿದ್ದರು. ತಾವು ಫಾರೂಕ್‌ಗೆ ವಾರ್ನಿಂಗ್ ಕೊಡಲು ಕರೆಸಿದ್ದೆವು. ಆಗ ಆತ ಪ್ರತಿರೋಧ ತೋರಿದಾಗ ಎರಡು ಬಾರಿ ಚಾಕುವಿನಿಂದ ಇರಿಯಲಾಯಿತು. ಹೀಗೆ ಬಿಟ್ಟರೆ ಕೊಲೆ ಯತ್ನ ಪ್ರಕರಣ ದಾಖಲಾಗುತ್ತದೆ ಎಂದು ಹೆದರಿ ಕೊನೆಗೆ ಫಾರೂಕ್‌ನನ್ನು ಕೊಲೆ ಮಾಡಿದ್ದೇವೆ ಎಂದು ವಿಚಾರಣೆ ವೇಳೆ ಆರೋಪಿ ಸುಹೇಲ್ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ಹೇಳಿವೆ.
