ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಡಬ್ಯಾಕೊಡ ಗ್ರಾಮದಲ್ಲಿ ನಡೆದ ಘಟನೆ. ಹಾರೂಗೇರಿ ಪಟ್ಟಣದ ಅಕ್ಬರ್‌ ಶಬ್ಬಿರ್‌ ಜಮಾದಾರ ಹತ್ಯೆಗೀಡಾದ ಯುವಕ. 

ಬೆಳಗಾವಿ(ಆ.19): ಹಣ ಹಾಗೂ ಮೊಬೈಲ್‌ ಮರಳಿ ಕೊಡಲಿಲ್ಲ ಎಂದು ಸ್ನೇಹಿತನ ರುಂಡವನ್ನೇ ದೇಹದಿಂದ ಬೇರ್ಪಡಿಸಿರುವ ದುರ್ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬಡಬ್ಯಾಕೊಡ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಅಕ್ಬರ್‌ ಶಬ್ಬಿರ್‌ ಜಮಾದಾರ (22) ಹತ್ಯೆಗೀಡಾದ ಯುವಕ. ರಾಯಬಾಗ ತಾಲೂಕಿನ ಬಡಬ್ಯಾಕೋಡ ಗ್ರಾಮದ ಮಹಾಂತೇಶ ಸೋಮನಿಂಗ ಪೂಜಾರಿ (24) ಕೊಲೆ ಮಾಡಿದ ಹಂತಕ. ವಿಷಯ ತಿಳಿಯುತ್ತಿದ್ದಂತೆ ಹಾರೂಗೇರಿ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಹಾರೂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ: ಉಪ್ಪಿಟ್ಟನಲ್ಲಿ ವಿಷಹಾಕಿ ಪತಿಯನ್ನೇ ಹತ್ಯೆಗೈಯಲು ಯತ್ನಿಸಿದ ಹೆಂಡ್ತಿ, ಇಬ್ಬರ ಬಂಧನ

ಆಗಿದ್ದೇನು?

ಹತ್ಯೆಗೀಡಾದ ಅಕ್ಬರ್‌ ಜಮಾದಾರ ಹಾಗೂ ಆರೋಪಿ ಮಹಾಂತೇಶ ಪೂಜೇರಿ ಸ್ನೇಹಿತರಾಗಿದ್ದರು. ಡ್ರೈವರ್‌ ಉದ್ಯೋಗ ಮಾಡಿಕೊಂಡಿದ್ದ ಅಕ್ಬರಿಗೆ ಆರೋಪಿ ಮಹಾಂತೇಶ ಹಣ ಹಾಗೂ ಮೊಬೈಲ್‌ನ್ನು ನೀಡಿದ್ದನು. ಕೊಟ್ಟಿರುವ ಹಣ ಹಾಗೂ ಮೊಬೈಲ್‌ನನ್ನು ಮರಳಿ ಕೊಡುವಂತೆ ಅಕ್ಬರನನ್ನು ಕೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದು ವಿಕೋಪಕ್ಕೆ ಹೋಗಿ ಇಬ್ಬರ ಮನಸ್ತಾಪಕ್ಕೂ ಕಾರಣವಾಗಿದೆ. ಇದರಿಂದಾಗಿ ಆಕ್ರೋಶಗೊಂಡ ಮಹಾಂತೇಶ ಪೂಜಾರಿ ತಮ್ಮ ಸ್ನೇಹತರೊಂದಿಗೆ ಸಂಚ ರೂಪಿಸಿ ಅಕ್ಬರ್‌ ಜಮಾದಾರನ್ನು ಬಸ್ತವಾಡ ಗ್ರಾಮದ ವ್ಯಾಪ್ತಿಯ ಬಸ್ತವಾಡ​ ಹಾಗೂ ಬರನಾಳ ರಸ್ತೆಯ ಪಕ್ಕದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹರಿತವಾದ ಆಯುಧದಿಂದ ಕುತ್ತಿಗೆ ಕಡೆದು ರುಂಡ ಬೇರ್ಪಡಿಸಿ ಕೊಲೆ ಮಾಡಿದ್ದಾರೆ. ಅಲ್ಲದೇ ಆತನ ಶವದ ಗುರುತು ಸಿಗದ ಹಾಗೆ ಮತ್ತು ಸಾಕ್ಷಿ ಪುರಾವೆ ನಾಶ ಮಾಡುವ ಉದ್ದೇಶದಿಂದ ಮೃತನ ರುಂಡವನ್ನು ನಿರ್ಜನ ಪ್ರದೇಶದಲ್ಲಿ ಒಗೆದು ಸಾಕ್ಷಿ ನಾಶಪಡಿಸಿದ್ದಾನೆ. ರುಂಡವಿಲ್ಲದ ಮೃತ ದೇಹ ಕಂಡ ಬಸ್ತವಾಡ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ.

ಹಾರೂಗೇರಿ ಠಾಣೆಯ ಪೊಲೀಸ್‌ ಇನಸ್ಪೆಕ್ಟರ್‌ ರವಿಚಂದ್ರ ಬಡ ಪಕಿರಪ್ಪನ್ನವರ, ಅಥಣಿ ಡಿಎಸ್ಪಿ ಶ್ರೀಪಾದ ಜಲ್ದೆ, ಪಿಎಸೈ ಗಿರಮಲ್ಲಪ್ಪ ಉಪ್ಪಾರ, ಅಪರಾಧ ವಿಭಾಗದ ಪಿಎಸೈ ಆರ್‌.ಆರ್‌.ಕೊಗನ್ನಳಿ, ಪಿಎಸೈ ಚಾಂದಬಿ ಗಂಗಾವತಿ ಹಾಗೂ ಸಿಬ್ಬಂದಿ ಎಚ್‌.ಎಚ್‌.ಚೌಗಲಾ, ಆರ್‌.ಪಿ.ಕಟೆಕಾರ, ಎಚ್‌.ಆರ್‌ ಅಂಬಿ, ಪಿ.ಎಂ.ಸಪ್ತಸಾಗರೆ, ಎ.ಎ.ಶಾಂಡಗಿ ಸೇರಿದಂತೆ ಬೆರಳಚ್ಚು ವಿಭಾಗದ ಹಾಗೂ ಶ್ವಾನ ದಳದ ಸಿಬ್ಬಂದಿ ಸ್ಥಳದಲ್ಲಿ ಬಿಡು ಬಿಟ್ಟು ಪ್ರಕರಣ ಬೇಧಿಸಿದ್ದಾರೆ.