ರಾಮನಗರ: ವರ್ಕ್ ಫ್ರಂ ಹೋಮ್ ಹೆಸರಲ್ಲಿ ಮಹಿಳೆಯರಿಗೆ 20 ಲಕ್ಷ ವಂಚನೆ
ಕನಕಪುರ ತಾಲೂಕು ದೊಡ್ಡ ಆನಮಾನಹಳ್ಳಿ ವಾಸಿ ಎಸ್.ಶಾಲಿನಿ 16,55,556 ರು., ಹಾಗೂ ಚನ್ನಪಟ್ಟಣ ಟೌನ್ ಮದೀನ ಚೌಕ್ ವಾಸಿ ಶಾಹಿದಾ ಬಾನು 3,46,000 ರು. ಹಣ ಕಳೆದುಕೊಂಡವರು.
ರಾಮನಗರ(ಡಿ.27): ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ವಂಚಕರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮಹಿಳೆಯರಿಗೆ ಸುಮಾರು 20 ಲಕ್ಷ ರುಪಾಯಿ ವಂಚಿಸಿರುವ ಘಟನೆ ನಡೆದಿದೆ. ಕನಕಪುರ ತಾಲೂಕು ದೊಡ್ಡ ಆನಮಾನಹಳ್ಳಿ ವಾಸಿ ಎಸ್.ಶಾಲಿನಿ 16,55,556 ರು., ಹಾಗೂ ಚನ್ನಪಟ್ಟಣ ಟೌನ್ ಮದೀನ ಚೌಕ್ ವಾಸಿ ಶಾಹಿದಾ ಬಾನು 3,46,000 ರು. ಹಣ ಕಳೆದುಕೊಂಡವರು.
ಡಿ.10ರಂದು ಶಾಲಿನಿರವರು ಮೊಬೈಲ್ ನಂಬರ್ ಗೆ ಕರೆ ಮಾಡಿರುವ ವಂಚಕರು ವರ್ಕ್ ಫ್ರಂ ಹೋಮ್ ಕೆಲಸ ಇದೆ ಮಾಡುತ್ತೀರಾ ಎಂದು ಕೇಳಿದ್ದಾರೆ. ಕೆಲಸ ಮಾಡಲು ಒಪ್ಪಿದ ಶಾಲಿನಿ ಮೊಬೈಲ್ ವಾಟ್ಸ್ ಆಪ್ ನಲ್ಲಿ ಲಿಂಕ್ ಕಳುಹಿಸಿ ಟೆಲಿಗ್ರಾಮ್ ಗ್ರೂಪ್ ಗೆ ಆಡ್ ಆಗಿದ್ದಾರೆ. ಒಂದು ರೀವಿವ್ಯೂಗೆ 40 ರು.ನಂತೆ 1 ರಿಂದ 6 ಟಾಸ್ಕ್ 5 ಗೂಗಲ್ ರಿವ್ಯೂಗಳು ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 500 ರು. ಹಣ ನೀಡುವುದಾಗಿ ವಂಚಕರು ಹೇಳಿದ್ದಾರೆ.
ಒಂದು ಡಾಟಾ ಟಾಸ್ಕ್ ಮಾಡುವುದಕ್ಕೆ 1010 ರು. ಹಣ ಕಟ್ಟಿದರೆ ಒಟ್ಟು 1500 ರು. ಬರುತ್ತದೆ ಎಂದು ವಂಚಕರು ಹೇಳಿದಾಗ ಶಾಲಿನಿರವರಿಗೆ ಆ ಹಣ ಬಂದಿದೆ. ನಂತರ 7 ರಿಂದ 12 ಟಾಸ್ಕ್ 5 ಗೂಗಲ್ ರಿವಿವ್ಯೂಗಳು ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 900 ರು. ಹಣ ನೀಡುವುದಾಗಿ ಹೇಳಿದ ವಂಚಕರು, ಒಂದು ಡಾಟಾ ಟಾಸ್ಕ್ ಗೆ 3010 ರು. ಪಾವತಿಸಬೇಕೆಂದಾಗ ಆ ಹಣ ಪಾವತಿಸಿದಾಗಲು ವಾಪಸ್ ಬಂದಿದೆ.
ಆನಂತರ 13 ರಿಂದ 15 ಟಾಸ್ಕ್ 5 ಗೂಗಲ್ ರಿವಿವ್ಯೂಗಳು ಮತ್ತು 1 ಡಾಟಾ ಟಾಸ್ಕ್ ಮಾಡಿದರೆ 1200 ರು. ನೀಡುವುದಾಗಿ ಹೇಳಿ ವಂಚಕರು 7010 ರು. ಹಣ ಕಟ್ಟಿಸಿಕೊಂಡ ಮೇಲೆ ಶಾಲಿನಿರವರಿಗೆ ಯಾವುದೇ ಹಣ ವಾಪಸ್ ಬಂದಿಲ್ಲ. ಹಣ ಬಂದಿಲ್ಲವೆಂದು ಕೇಳಿದಾಗ ನೀವು ತಪ್ಪಾಗಿ ಹಣ ಹಾಕಿದ್ದೀರಿ ಎಂದು ಹೇಳಿ 28,960 ರು. ಹಾಕಿಸಿಕೊಂಡಿದ್ದಾರೆ. ಅದೇ ರೀತಿ ಪದೆ ಪದೇ ನೀವು ತಪ್ಪಾಗಿ ಹಣ ಹಾಕಿದ್ದೀರಿ ಎಂದು ವಂಚಕರು ಹೇಳಿ ಶಾಲಿನಿ ಅವರಿಂದ ಒಟ್ಟು 16,55,556 ರು.ಗಳನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.
ಗೃಹಿಣಿಗೆ 3.46 ಲಕ್ಷ ರು.ವಂಚನೆ :
ಮತ್ತೊಂದು ಪ್ರಕರಣದಲ್ಲಿ ಶಾಹಿದಾ ಬಾನುರವರ ಮೊಬೈಲ್ ನಂಬರ್ ಗೆ ಕರೆ ಮಾಡಿರುವ ವಂಚಕರು, ವರ್ಕ್ ಫ್ರಂ ಹೋಮ್ ಕೆಲಸದ ಆಫರ್ ನೀಡಿದ್ದಾರೆ. ಅದರಂತೆ ಶಾಹಿದಾರವರು ವಾಟ್ಸ್ ಆಪ್ ನಲ್ಲಿ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ರಿವಿವ್ಯೂಗಳನ್ನು ಕಳುಹಿಸಿ ನಿಮಗೆ ಹಣ ಬೇಕಾದರೆ ಟೆಲಿಗ್ರಾಮ್ ಗ್ರೂಪ್ ಗೆ ಆಡ್ ಆಗುವಂತೆ ಹೇಳಿದಾಗ ಆಡ್ ಆಗಿದ್ದಾರೆ. ನಂತರ 3 ರಿವಿವ್ಯೂಗಳನ್ನು ಕಳುಹಿಸಿದಾಗ 150 ರು. ಬಂದಿದೆ. ನಂತರ ಪ್ರತಿಯೊಂದು ರಿವಿವ್ಯೂಗೆ 100 ರು. ಹಣ ಕೊಡುತ್ತೇವೆ. ಅದಕ್ಕೆ ನೀವು 2 ಸಾವಿರ ರು. ಡೆಪಾಸಿಟ್ ಮಾಡಬೇಕೆಂದು ವಂಚಕರು ಹೇಳಿದಾಗ ಶಾಹಿದಾರವರು ಹಣ ಕಳುಹಿಸಿದ್ದಾರೆ.
6 ರಿವ್ಯೂಗೆ 600 ರು. ಕೊಟ್ಟಿದ್ದಾರೆ. 30 ಸಾವಿರ ರು. ಹಾಕಿದರೆ ಒಂದು ರಿವಿವ್ಯೂಗೆ 600 ರು. ಸಿಗುತ್ತದೆ ಎಂದು ವಂಚಕರು ಹೇಳಿದಾಗ ಆ ಹಣವನ್ನು ಕಳುಹಿಸಿದ್ದಾರೆ. ಇದೇ ರೀತಿ 3,46,000 ರು.ಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಶಾಲಿನಿ ಮತ್ತು ಶಾಹಿದಾ ಬಾನು ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.
ಡೆಬಿಟ್ ಕಾರ್ಡ್ ರಿನಿವಲ್: ಶಿಕ್ಷಕನಿಗೆ 5.21 ಲಕ್ಷ ವಂಚನೆ
ರಾಮನಗರ: ಡೆಬಿಟ್ ಕಾರ್ಡ್ ರಿನಿವಲ್ ಮಾಡಿಕೊಳ್ಳಲು ಹೋಗಿ ಶಿಕ್ಷಕರೊಬ್ಬರು 5.21 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ನಗರದ ಕಾಯಿಸೊಪ್ಪಿನ ಬೀದಿ ವಾಸಿಯಾದ ಶಿಕ್ಷಕ ವೆಂಕಟರಮಣಸ್ವಾಮಿ ಹಣ ಕಳೆದುಕೊಂಡವರು. ಕೆನರಾ ಬ್ಯಾಂಕಿನ ಡೆಬಿಟ್ ಕಾರ್ಡ್ ನ ವ್ಯಾಲಿಟಿಡಿ ಮುಗಿದು ಹೋಗಿದ್ದರಿಂದ ಅದನ್ನು ರಿನಿವಲ್ ಮಾಡಿಕೊಳ್ಳಲು ವೆಂಕಟರಮಣಸ್ವಾಮಿ ಗೂಗಲ್ ನಲ್ಲಿ ಸರ್ಚ್ ಮಾಡಿ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿದ್ದಾರೆ. ಅಲ್ಲಿ ಫೋನ್ ರಿಸೀವ್ ಮಾಡಿದ ವಂಚಕ ತನ್ನನ್ನು ಬಿನೋದ್ ಅಗರ್ ವಾಲ್, ಕೆನರಾ ಬ್ಯಾಂಕಿನ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ.
ಆ ವಂಚಕನನ್ನು ನಂಬಿದ ಶಿಕ್ಷಕ, ತನ್ನ ಡೆಬಿಟ್ ಕಾರ್ಡ್ ನಂಬರ್, ಕೆನರಾ ಬ್ಯಾಂಕಿನ ಖಾತೆ ನಂಬರ್, ಐಎಫ್ ಎಸ್ಸಿ ಕೋಡ್ ಎಲ್ಲವನ್ನು ಹೇಳಿದ್ದಾರೆ. ವಂಚಕ ಮಾತನಾಡುತ್ತಲೇ ಶಿಕ್ಷಕನ ಕೆನರಾ ಬ್ಯಾಂಕಿನ ಖಾತೆಯಿಂದ 90 ಸಾವಿರ, 10 ಸಾವಿರ, 97,380 ರು., 43 ಸಾವಿರ, 10 ಸಾವಿರ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಖಾತೆಯಿಂದ 29 ಸಾವಿರ, 50 ಸಾವಿರ ಸೇರಿದಂತೆ ಒಟ್ಟು 5,21,680 ರು. ವರ್ಗಾವಣೆ ಮಾಡಿಕೊಂಡಿದ್ದಾನೆ. ವೆಂಕಟರಮಣಸ್ವಾಮಿ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವಿವಾಹಿತ ಯುವಕರೇ ಟಾರ್ಗೆಟ್: 6 ಮದ್ವೆಯಾಗಿ 7ನೇ ಮದ್ವೆಗೆ ಸಿದ್ಧಗೊಳ್ತಿದ್ದ ಮಹಿಳೆಯ ಬಂಧನ
ಲೋನ್ ಹೆಸರಿನಲ್ಲಿ ವ್ಯಕ್ತಿಗೆ 6.09 ಲಕ್ಷ ರು.ವಂಚನೆ
ರಾಮನಗರ: ಬಜಾಜ್ ಫೈನಾನ್ಸ್ ಹೆಸರಿನಲ್ಲಿ ವಂಚಕರು ವ್ಯಕ್ತಿಯೊಬ್ಬರಿಗೆ ಸಾಲ ಕೊಡುವುದಾಗಿ ಹೇಳಿ 6.09 ಲಕ್ಷ ರುಪಾಯಿ ವಂಚಿಸಿರುವ ಘಟನೆ ನಡೆದಿದೆ. ಹಾರೋಹಳ್ಳಿ ತಾಲೂಕು ಹೆಬ್ಬಿದರಮೆಟ್ಲು ಗ್ರಾಮದ ಎಚ್.ಎಂ.ಭರತ್ ಮೋಸ ಹೋದವರು.
ಭರತ್ ಅವರ ಮೊಬೈಲ್‌ಗೆ ಫೋನ್ ಮಾಡಿರುವ ವಂಚಕರು, ನಾನು ಬಜಾಜ್ ಫೈನಾನ್ಸ್ ನಿಮಗೆ ಲೋನ್ ಬೇಕಾದರೆ ಮಾಡಿಸಿಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಭರತ್ 2 ಲಕ್ಷ ಲೋನ್ ಬೇಕು ಅಂತ ಹೇಳಿ ವಂಚಕರ ಮೊಬೈಲ್ ನಂಬರ್ ಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ ಮತ್ತು ಫೋಟೋವನ್ನು ವಾಟ್ಸ್ ಆಪ್ ಮಾಡಿದ್ದಾರೆ. ಆನಂತರ ವಂಚಕರು ಪ್ರೋಸೆಸಿಂಗ್ ಫೀಸ್ ಎಂದು 5 ಸಾವಿರ, 1550 ರು., ಲೋನ್ ಇನ್ಸೂರೆನ್ಸ್ ಗೆಂದು 7625 ರು., ಆರ್‌ಬಿಐ ಚಾರ್ಜ್ ಗೆಂದು ಎರಡು ಬಾರಿ 999,9 ರು., ಲೋನ್ ಆಕ್ಟಿವೇಟ್ ಮಾಡಬೇಕೆಂದು 16,800 ರು., 29,988 ರು. ಹಾಗೂ ವಿವಿಧ ರೀತಿಯ ಚಾರ್ಜ್ ಗೆಂದು 1,64,976 ರು.ಗಳನ್ನು ಡಿ.16 ರಿಂದ 19ರವರೆಗೆ ಒಟ್ಟು 6,09,681 ರು.ಗಳನ್ನು ಹಾಕಿಸಿಕೊಂಡಿದ್ದಾರೆ. ಭರತ್ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.