ಸರ್ಕಾರದ 21 ಕೋಟಿ ಹಣ ದೋಚಿದ ಗುತ್ತಿಗೆ ನೌಕರ, ಈ ದುಡ್ಡಲ್ಲಿ ಗರ್ಲ್‌ಫ್ರೆಂಡ್‌ಗೆ BMW ಕಾರ್, 4BHK ಫ್ಲ್ಯಾಟ್ ಗಿಫ್ಟ್!
ಮಹಾರಾಷ್ಟ್ರದ ಕ್ರೀಡಾ ಸಂಕೀರ್ಣದ ಗುತ್ತಿಗೆ ಕಂಪ್ಯೂಟರ್ ಆಪರೇಟರ್ 21 ಕೋಟಿ ರೂ. ವಂಚಿಸಿ ಗೆಳತಿಗೆ ಐಷಾರಾಮಿ ಕಾರು, ಫ್ಲ್ಯಾಟ್ ಉಡುಗೊರೆ ನೀಡಿ ಪರಾರಿಯಾಗಿದ್ದಾನೆ. ಪೊಲೀಸರು ಆತನ ಸಹೋದ್ಯೋಗಿ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದಾರೆ.
ಮುಂಬೈ (ಡಿ.26): ಮಹಾರಾಷ್ಟ್ರದ ಸರ್ಕಾರಿ ಸ್ವಾಮ್ಯದ ಕ್ರೀಡಾ ಸಂಕೀರ್ಣದಲ್ಲಿ 13,000 ರೂಪಾಯಿ ಮಾಸಿಕ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ 21 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ದೋಚಿದ್ದಾನೆ. ಈ ಹಣದಲ್ಲಿ ತನ್ನ ಗೆಳತಿಗೆ ಐಷಾರಾಮಿ ಕಾರು ಹಾಗೂ 4 ಬಿಎಚ್‌ಕೆ ಫ್ಲ್ಯಾಟ್ ಖರೀದಿ ಮಾಡಲು ಬಳಸಿದ್ದಾನೆ. ಛತ್ರಪತಿ ಸಂಭಾಜಿನಗರದಲ್ಲಿರುವ ವಿಭಾಗೀಯ ಕ್ರೀಡಾ ಸಂಕೀರ್ಣದ ಗುತ್ತಿಗೆ ಸಿಬ್ಬಂದಿ ಹರ್ಷಲ್ ಕುಮಾರ್ ಕ್ಷೀರಸಾಗರ್ ಈಗ ಪರಾರಿಯಾಗಿದ್ದು, ಹರ್ಷಲ್ ಗೆ ಬೆಂಬಲ ನೀಡಿದ ಆರೋಪದ ಮೇಲೆ ಆತನ ಸಹೋದ್ಯೋಗಿ ಯಶೋಧಾ ಶೆಟ್ಟಿ ಮತ್ತು ಆಕೆಯ ಪತಿ ಬಿಕೆ ಜೀವನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
23 ವರ್ಷದ ಯುವಕ ಹಣವನ್ನು ಕಬಳಿಸಲು ಮಾಡಿದ್ದ ಪ್ಲ್ಯಾನ್ ಪೊಲೀಸ್ ತನಿಖೆಯಿಂದ ಬಹಿರಂಗವಾಗಿದ್ದು, ಸ್ವತಃ ಪೊಲೀಸರೇ ಇದ್ದನ್ನು ಕಂಡು ಅಚ್ಚರಿ ಪಟ್ಟಿದ್ದರೆ. ಕ್ರೀಡಾ ಸಂಕೀರ್ಣದ ಹಳೆಯ ಲೆಟರ್‌ಹೆಡ್‌ಅನ್ನು ಬಳಸಿ, ಕ್ರೀಡಾ ಸಂಕೀರ್ಣದ ಖಾತೆಗೆ ಲಿಂಕ್ ಮಾಡಲಾದ ಇಮೇಲ್ ವಿಳಾಸದಲ್ಲಿ ಬದಲಾವಣೆ ಆಗಬೇಕಿದೆ ಎಂದು ಬ್ಯಾಂಕ್‌ಗೆ ಈ ಮೇಲ್ ಮಾಡಿದ್ದರು.ಕ್ರೀಡಾ ಸಂಕೀರ್ಣದ ಖಾತೆಯನ್ನು ಹೋಲುವ ವಿಳಾಸದೊಂದಿಗೆ ಅವರು ಹೊಸ ಇಮೇಲ್ ಖಾತೆಯನ್ನು ತೆರೆದಿದ್ದು, ಕೇವಲ ಒಂದು ಅಕ್ಷರವನ್ನು ಮಾತ್ರವೇ ಆತ ಬದಲಾವಣೆ ಮಾಡಿದ್ದಾನೆ. ಈ ಇಮೇಲ್ ವಿಳಾಸವನ್ನು ಈಗ ಕ್ರೀಡಾ ಸಂಕೀರ್ಣದ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿತ್ತು. ಇದರಿಂದಾಗಿ ಈ ಖಾತೆಗೆ ಸಂಬಂಧಿಸಿದ್ದ ಒಟಿಪಿ ಹಾಗೂ ಇತರ ವಹಿವಾಟುಗಳಿಗೆ ಆತನಿಗೆ ಸುಲಭವಾಗಿ ಪ್ರವೇಶಿಸುವ ಮಾರ್ಗ ಸಿಕ್ಕಂತಾಗಿತ್ತು.
ಮುಂದಿನ ಹೆಜ್ಜೆ ಎನ್ನುವ ರೀತಿಯಲ್ಲಿ ಹರ್ಷಲ್ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಭಾಗೀಯ ಕ್ರೀಡಾ ಸಂಕೀರ್ಣ ಸಮಿತಿಯ ಬ್ಯಾಂಕ್ ಅಕೌಂಟ್‌ಗೆ ಪಡೆದುಕೊಂಡಿದ್ದರು. ಜುಲೈ 1 ರಿಂದ ಡಿಸೆಂಬರ್ 7ರವರೆಗಿನ ಅವಧಿಯಲ್ಲಿ ಈ ಅಕೌಂಟ್‌ನಲ್ಲಿ 21.6 ಕೋಟಿ ರೂಪಾಯಿ ಹಣವನ್ನು ವಿವಿಧ 13 ಬ್ಯಾಂಕ್ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿದ್ದಾರೆ.
ಪೊಲೀಸರ ಪ್ರಕಾರ ಈ ಹಣದಲ್ಲಿ ಈತ 1.2 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಕಾರ್, 1.3 ಕೋಟಿ ರೂಪಾಯಿ ಮೊತ್ತದ ಎಸ್‌ಯುವಿ, 32 ಲಕ್ಷ ರೂಪಾಯಿಯ ಬಿಎಂಡಬ್ಲ್ಯು ಬೈಕ್ ಕೂಡ ಖರೀದಿ ಮಾಡಿದ್ದಾನೆ. ಅದರೊಂದಿಗೆ ಹರ್ಷಲ್ ತನ್ನ ಗೆಳತಿಗೆ ಛತ್ರಪತಿ ಸಂಭಾಜಿನಗರ ವಿಮಾನ ನಿಲ್ದಾಣದ ಬಳಿ 4 BHK ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಆತ ತನ್ನ ಗೆಳತಿಗಾಗಿ ವಜ್ರಖಚಿತ ಕನ್ನಡಕವನ್ನು ಸಹ ಆರ್ಡರ್ ಮಾಡಿದ್ದು, ತನಿಖೆಯಲ್ಲಿ ಪತ್ತೆಯಾಗಿದೆ.
ಬಿಜೆಪಿಗೆ ಒಂದೇ ವರ್ಷದಲ್ಲಿ 2444 ಕೋಟಿ ರೂಪಾಯಿ ದೇಣಿಗೆ, ಕಳೆದ ವರ್ಷಕ್ಕಿಂತ 700 ಕೋಟಿ ಹೆಚ್ಚು!
ಈ ಭಾರಿ ವಂಚನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈಗ ಹಣ ದೋಚಲು ಬಳಸಿದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಹರ್ಷಲ್‌ನನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದು, ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ಹಣಕಾಸಿನ ಅವ್ಯವಹಾರವನ್ನು ಗಮನಿಸಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Union Budget 2025: ವಾರ್ಷಿಕ 15 ಲಕ್ಷ ವೇತನದ ಉದ್ಯೋಗಿಗಳಿಗೆ ಇರೋದಿಲ್ಲ ಆದಾಯ ತೆರಿಗೆ?
ಎಫ್‌ಐಆರ್‌ನಲ್ಲಿ ಈವರೆಗೆ ಮೂವರನ್ನು ಹೆಸರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಕದಂ ಹೇಳಿದ್ದಾರೆ. "ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ, ಒಬ್ಬ ಪರಾರಿಯಾಗಿದ್ದಾನೆ. ತನಿಖೆಯಲ್ಲಿ ಅವರು ಬಿಎಂಡಬ್ಲ್ಯು ಕಾರು ಮತ್ತು ಬೈಕ್ ಖರೀದಿಸಿದ್ದಾರೆ, ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ ಮತ್ತು ಕೆಲವು ಚಿನ್ನಾಭರಣಗಳನ್ನು ಆರ್ಡರ್ ಮಾಡಿದ್ದಾರೆ ಎನ್ನುವುದು ಗೊತ್ತಾಗಿದ್ದು, ನಮ್ಮ ತಂಡಗಳು ಪ್ರಮುಖ ಆರೋಪಿಗಾಗಿ ಹುಡುಕುತ್ತಿವೆ' ಎಂದು ತಿಳಿಸಿದ್ದಾರೆ.