ಲಾಭದಾಸೆ ತೋರಿಸಿ ₹20 ಲಕ್ಷ ಪಡೆದು ವಂಚನೆ: ನಾಲ್ವರ ವಿರುದ್ಧ ದೂರು ದಾಖಲು
ಅಧಿಕ ಲಾಭದ ಆಸೆ ತೋರಿಸಿ ಇಬ್ಬರು ವ್ಯಕ್ತಿಗಳಿಂದ ₹20 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಆರೋಪದಡಿ ‘ಫಾರ್ಚೂನ್ ವೆಲ್ಸ್ ಟ್ರೇಡಿಂಗ್ ಕಂಪನಿ’ಯ ಡೈರೆಕ್ಟರ್ ಸೇರಿ ನಾಲ್ವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು (ಮೇ.02): ಅಧಿಕ ಲಾಭದ ಆಸೆ ತೋರಿಸಿ ಇಬ್ಬರು ವ್ಯಕ್ತಿಗಳಿಂದ ₹20 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಆರೋಪದಡಿ ‘ಫಾರ್ಚೂನ್ ವೆಲ್ಸ್ ಟ್ರೇಡಿಂಗ್ ಕಂಪನಿ’ಯ ಡೈರೆಕ್ಟರ್ ಸೇರಿ ನಾಲ್ವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚಲ್ಲಘಟ್ಟ ನಿವಾಸಿ ಪಿಯೂಷ್ ಪಾಟ್ನಾಯಕ್ ನೀಡಿದ ದೂರಿನ ಮೇರೆಗೆ ಅಶೋಕನಗರದ ಲ್ಯಾವೆಲ್ಲೆ ರಸ್ತೆಯ ಫಾರ್ಚೂನ್ ವೆಲ್ಸ್ ಟ್ರೇಡಿಂಗ್ ಕಂಪನಿಯ ಡೈರೆಕ್ಟರ್ ಕಿಶೋರ್, ಮ್ಯಾನೇಜರ್ ರಾಜು, ಸೇಲ್ಸ್ ಎಕ್ಸಿಕ್ಯೂಟಿವ್ ಹಿತೈಶ್ರೀ, ಸಿಬ್ಬಂದಿ ಮಮತಾ ವಿರುದ್ಧ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ವಂಚನೆ?: ದೂರುದಾರ ಪಿಯೂಷ್ ಪಟ್ನಾಯಕ್ ಹಣಕಾಸು ನಿರ್ವಹಣೆ ಸಲಹೆಗಾರನಾಗಿ ಕೆಲಸ ಮಾಡಿಕೊಂಡಿದ್ದಾರೆ. ಪಿಯೂಷ್ ಮತ್ತು ಇವರ ಸ್ನೇಹಿತ ಸಂತೋಷ್ ನಾಗಲಿಂಗಸ್ವಾಮಿಗೆ ಮತೊಬ್ಬ ಸ್ನೇಹಿತ ಅಮಿತ್ ಸೋಮಾನಿ ಎಂಬಾತನ ಮೂಲಕ ಫಾರ್ಚೂನ್ ವೇಲ್ಸ್ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಹಿತೈಶ್ರೀ ಪರಿಚಯವಾಗಿದೆ. ಈ ವೇಳೆ ಹಿತೈಶ್ರೀ ‘ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ನಿಮಗೆ ಪ್ರತಿ ತಿಂಗಳು ಶೇ.5ರಿಂದ 6ರಷ್ಟು ಲಾಭ ಬರಲಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿದ ಪಿಯೂಷ್ ಮತ್ತು ಸ್ನೇಹಿತ ಸಂತೋಷ್ ಅವರನ್ನು ಹಿತೈಶ್ರೀ 2023ರ ಏ.3ರಂದು ಲ್ಯಾವೆಲ್ಲೆ ರಸ್ತೆಯಲ್ಲಿರುವ ಕಂಪನಿಯ ಕಚೇರಿಗೆ ಕರೆಸಿಕೊಂಡಿದ್ದಾರೆ.
ರಾಕ್ಷಸ ಪರಾರಿಯಾದ ಬಗ್ಗೆ ಪ್ರಧಾನಿ ಮೋದಿ ಹೇಳಲಿ: ರಾಹುಲ್ ಗಾಂಧಿ
ಸ್ನೇಹಿತರಿಬ್ಬರು ತಲಾ ₹10 ಲಕ್ಷ ಹೂಡಿಕೆ: ಈ ವೇಳೆ ಪಿಯೂಷ್ ಮತ್ತು ಸಂತೋಷ್‌ಗೆ ಕಂಪನಿ ಡೈರೆಕ್ಟರ್ ಕಿಶೋರ್ ಮತ್ತು ಮ್ಯಾನೇಜರ್ ರಾಜು, ಸಿಬ್ಬಂದಿ ಮಮತಾಳ ಪರಿಚಯವಾಗಿದೆ. ಈ ವೇಳೆ ಆರೋಪಿಗಳು ‘ನಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಅಧಿಕ ಲಾಭ ಬರಲಿದೆ’ ಎಂದು ವಿವರಿಸಿದ್ದಾರೆ. ಇವರ ಮಾತು ನಂಬಿದ ಪಿಯೂಷ್ ಮತ್ತು ಸಂತೋಷ್, ಕಂಪನಿಗೆ ತಲಾ ₹10 ಲಕ್ಷ ಹೂಡಿಕೆ ಮಾಡಿದ್ದಾರೆ. ಆಗ ಆರೋಪಿಗಳು, ‘ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ. ನಿಮಗೆ ಒಳ್ಳೆಯ ಲಾಭ ಬರಲಿದೆ’ ಎಂದು ಹೇಳಿದ್ದಾರೆ. ಆಗ ಪಿಯೂಷ್ ಮತ್ತು ಸಂತೋಷ್, ಸದ್ಯಕ್ಕೆ ಇಷ್ಟು ಹೂಡಿಕೆ ಸಾಕು. ಒಂದು ವರ್ಷ ನಮಗೆ ಬರುವ ಲಾಭವನ್ನು ನೋಡಿಕೊಂಡು ಹೆಚ್ಚಿನ ಹೂಡಿಕೆ ಮಾಡುವುದಾಗಿ ತಿಳಿಸಿದ್ದಾರೆ.ಮತ್ತಷ್ಟು ಹೂಡಿಕೆಗೆ ಆಮಿಷ
ಹಣ ಹೂಡಿಕೆ ಮಾಡಿದ 2-3 ತಿಂಗಳ ಬಳಿಕ ಕಂಪನಿ ಸಿಬ್ಬಂದಿ ಮಮತಾ ಪಿಯೂಷ್‌ಗೆ ಆಗಾಗ ಕರೆ ಮಾಡಿ, ‘ನಿಮ್ಮ ಹೂಡಿಕೆಗೆ ಒಳ್ಳೇಯ ಲಾಭ ಬರುತ್ತಿದೆ’ ಎಂದು ತಿಳಿಸಿದ್ದಾರೆ. 2023ನೇ ಸಾಲಿನ ಅಕ್ಟೋಬರ್‌ನಲ್ಲಿ ಕರೆ ಮಾಡಿದ್ದ ಮಮತಾ, ‘ಕಂಪನಿಗೆ ತುಂಬಾ ನಷ್ಟವಾಗುತ್ತಿದೆ. ನಿಮ್ಮ ಖಾತೆಯಲ್ಲಿ ಹಣ ಕಡಿಮೆಯಾಗುತ್ತಿದೆ. ನೀವು ಮತ್ತಷ್ಟು ಹಣ ಹೂಡಿಕೆ ಮಾಡಿ. ನಾವು ನಿಮ್ಮ ಹಣವನ್ನು ರಿಕವರಿ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ. ಆದರೆ, ಪಿಯೂಷ್ ಮತ್ತು ಸಂತೋಷ್ ಮತ್ತೆ ಹಣ ಹೂಡಿಕೆ ಮಾಡಲು ನಿರಾಕರಿಸಿದ್ದಾರೆ.
ನಿಮ್ಮ ಖಾತೆ ಜಿರೋ!: ಇದಾದ ಕೆಲವು ತಿಂಗಳ ಬಳಿಕ ಕರೆ ಮಾಡಿರುವ ಮಮತಾ, ‘ನಿಮ್ಮ ಖಾತೆಯಲ್ಲಿ ಹಣ ಜಿರೋ ಆಗಿದೆ. ನಮ್ಮ ಕಚೇರಿಯನ್ನು ಜಯನಗರಕ್ಕೆ ಸ್ಥಳಾಂತರಿಸಿದ್ದೇವೆ’ ಎಂದು ಹೇಳಿದ್ದಾರೆ. ಆಗ ಈಕೆ ನೀಡಿದ್ದ ಜಯನಗರದ ವಿಳಾಸಕ್ಕೆ ಪಿಯೂಷ್ ತೆರಳಿ ವಿಚಾರಿಸಿದಾಗ ಆ ಹೆಸರಿನ ಯಾವುದೇ ಕಂಪನಿ ಅಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಆಗ ಮಮತಾಗೆ ಕರೆ ಮಾಡಿ ಕೇಳಿದಾಗ. ‘ನಮ್ಮ ಕಂಪನಿಯ ಡೈರೆಕ್ಟರ್ ಕಿಶೋರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ’ ಎಂದು ಹೇಳಿದ್ದಾರೆ.
ದೇವೇಗೌಡ್ರು ಪ್ಲಾನ್ ಮಾಡಿಯೇ ಪ್ರಜ್ವಲ್‌ನ ವಿದೇಶಕ್ಕೆ ಕಳ್ಸಿದ್ದಾರೆ: ಸಿಎಂ ಸಿದ್ದರಾಮಯ್ಯ
ವಂಚಿಸಿ ಎಸ್ಕೇಪ್: ಬಳಿಕ ಹಲವು ಬಾರಿ ಕರೆ ಮಾಡಿದರೂ ಮಮತಾ ಕರೆ ಸ್ವೀಕರಿಸಿಲ್ಲ. ಅಷ್ಟರಲ್ಲಿ ಪಿಯೂಷ್ ಮತ್ತು ಸಂತೋಷ್‌ಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.