Chamarajanagar: ರಸ್ತೆ ಮಧ್ಯೆ ಜೋತಾಡುತ್ತಿದ್ದ ವಿದ್ಯುತ್ ವೈರ್ ತಗುಲಿ ಇಬ್ಬರು ರೈತರು ಸ್ಥಳದಲ್ಲೇ ಸಾವು!
ಆ ಇಬ್ಬರು ರೈತರು ಜಮೀನಿಗೆ ಹೋಗಿ ಬರುವುದಾಗಿ ಹೇಳಿ ಬೈಕ್ನಲ್ಲಿ ರಾತ್ರಿ ಹೋದವರು ಮತ್ತೆ ಬರಲೇ ಇಲ್ಲ. ಬೆಳಿಗ್ಗೆ ರಸ್ತೆ ಮದ್ಯೆ ಅವರ ಹೆಣಗಳು ಉರುಳಿ ಬಿದ್ದಿದ್ದವು. ಜೋತು ಬಿದ್ದ ವಿದ್ಯುತ್ ವೈರ್‌ಗೆ ಸಿಲುಕಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ವರದಿ: ಪುಟ್ಟರಾಜು. ಆರ್. ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಅ.24): ಆ ಇಬ್ಬರು ರೈತರು ಜಮೀನಿಗೆ ಹೋಗಿ ಬರುವುದಾಗಿ ಹೇಳಿ ಬೈಕ್ನಲ್ಲಿ ರಾತ್ರಿ ಹೋದವರು ಮತ್ತೆ ಬರಲೇ ಇಲ್ಲ. ಬೆಳಿಗ್ಗೆ ರಸ್ತೆ ಮದ್ಯೆ ಅವರ ಹೆಣಗಳು ಉರುಳಿ ಬಿದ್ದಿದ್ದವು. ಜೋತು ಬಿದ್ದ ವಿದ್ಯುತ್ ವೈರ್‌ಗೆ ಸಿಲುಕಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಚಾಮರಾಜನಗರ ತಾಲೋಕಿನ ಅಯ್ಯನಪುರ ಗ್ರಾಮದ ನಾಗೇಂದ್ರ ಹಾಗು ಮಲ್ಲೇಶ್ ಎಂಬ ರೈತರು ರಾತ್ರಿ ಊಟ ಮಾಡಿ ಒಂದೇ ಬೈಕ್ನಲ್ಲಿ ಜಮೀನಿಗೆ ತೆರಳಿದ್ದರು. ಮತ್ತೆ ವಾಪಸ್ ಬರುವುದಾಗಿ ಹೇಳಿ ಹೋದವರು ಎಷ್ಟು ಹೊತ್ತಾದರೂ ಬರಲೇ ಇಲ್ಲ. ಫೋನ್ ಸ್ವಿಚ್ ಆಫ್ ಆಗಿತ್ತು.
ಈಗ ಬರುತ್ತಾರೆ, ಆಗ ಬರುತ್ತಾರೆ ಎಂದು ಮನೆಯ ಬಾಗಿಲು ತೆಗೆದು ರಾತ್ರಿಯಿಡೀ ಕಾದ ಕುಟುಂಬಸ್ಥರಿಗೆ ಬೆಳ್ಳಂಬೆಳಿಗ್ಗೆ ಕೆಟ್ಟ ಸುದ್ದಿಯೊಂದು ಬರಸಿಡಿಲಿನಂತೆ ಅಪ್ಪಳಿಸಿತು. ನಾಗೇಂದ್ರ ಹಾಗು ಮಲ್ಲೇಶ್ ಜಮೀನಿನಿಂದ ಬೈಕ್ನಲ್ಲಿ ವಾಪಸ್ ಬರುವಾಗ ರಸ್ತೆ ಮದ್ಯೆ ಜೋತು ಬಿದ್ದಿದ್ದ ಹೈಟೆನ್ಷನ್ ವೈರ್ಗೆ ಅವರ ಕುತ್ತಿಗೆ ಸಿಲುಕಿ ಧಾರುಣವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಾತ್ರಿಯೇ ಈ ಘಟನೆ ನಡೆದಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಎಂದಿನಂತೆ ಬೆಳ್ಳಂಬೆಳಿಗ್ಗೆ ಹೊಲಗದ್ದೆಗಳಿಗೆ ತೆರಳಲು ಬಂದ ಗ್ರಾಮದ ರೈತರಿಗೆ ರಸ್ತೆ ಮಧ್ಯೆ ವಿದ್ಯುತ್ ತಂತಿಗೆ ಸಿಲುಕಿ ನಾಗೇಂದ್ರ ಹಾಗು ಮಲ್ಲೇಶ್ ಸತ್ತುಬಿದ್ದಿರುವುದನ್ನು ನೋಡಿ ಶಾಕ್ ಆಗಿದೆ.
ಹೊಲಗದ್ದೆಗಳಿಗೆ ತೆರಳುವ ಈ ರಸ್ತೆಯ ಎರಡು ಬದಿಗಳಲ್ಲಿ ವಿದ್ಯುತ್ ಕಂಬಗಳಿದ್ದು ವಿದ್ಯುತ್ ತಂತಿಗಳು ಸಡಿಲಗೊಂಡಿದ್ದವು. ನಿನ್ನೆ ರಾತ್ರಿ ಗಾಳಿ ಮಳೆಯ ಪರಿಣಾಮ ವಿದ್ಯುತ್ ತಂತಿ ರಸ್ತೆ ಮದ್ಯದಲ್ಲಿಯೇ ಜೋತು ಬಿದ್ದಿತ್ತು. ಜಮೀನಿನಿಂದ ಬೈಕ್ನಲ್ಲಿ ವಾಪಸ್ ಬರುತ್ತಿದ್ದಾಗ ಜೋತು ಬಿದ್ದ ವಿದ್ಯುತ್ ತಂತಿಗೆ ರೈತರ ಕುತ್ತಿಗೆ ಈ ಧಾರುಣ ಘಟನೆ ನಡೆದಿದೆ. ವಿಷಯ ತಿಳಿದ ಅಕ್ಕಪಕ್ಕದ ಗ್ರಾಮಗಳ ರೈತರು, ರೈತ ಸಂಘದ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಚೆಸ್ಕಾಂ ವಿರುದ್ದ ಪ್ರತಿಭಟನೆ ನಡೆಸಿದರು. ಸರಿಯಾಗಿ ವಿದ್ಯುತ್ ತಂತಿಗಳನ್ನು ಮಾಡದ ಚೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.
ಒಳ ಮೀಸಲಾತಿ ಜಾರಿಗೆ ಆಗ್ರಹ: ಚಾಮರಾಜನಗರದಲ್ಲಿ ಬೃಹತ್ ಪಾದಯಾತ್ರೆ
ಇದು ಚೆಸ್ಕಾಂ ನಡೆಸಿರುವ ಕೊಲೆ ಎಂದು ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರಲೇಬೇಕು ಅಲ್ಲಿಯವರೆಗು ಮೃತ ರೈತರ ಶವಗಳನ್ನು ಮುಟ್ಟಲು ಬಿಡುವು ಎಂದು ಪಟ್ಟು ಹಿಡಿದರು. ಎಸ್ಪಿ ಕವಿತಾ ಹಾಗು ಉಪವಿಭಾಗಾಧಿಕಾರಿ ಮಹೇಶ್ ಎಷ್ಟೇ ಮನವೊಲಿಸಿದರು ರೈತರ ಜಗ್ಗಲಿಲ್ಲ. ಅನ್ನಧಾತರ ಆಗ್ರಹಕ್ಕೆ ಮಣಿದು ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮೃತ ರೈತ ಕುಟುಂಬಗಳಿಗೆ ಸಾಂತ್ವಾನ ಹೇಳಿದರು, ಎರಡೂ ಕುಟುಂಬದ ತಲಾ ಒಬ್ಬರಿಗೆ ಚೆಸ್ಕಾಂನಲ್ಲೇ ಉದ್ಯೋಗ ಹಾಗು ತಲಾ 5 ಲಕ್ಷ ರೂಪಾಯಿ ಪರಿಹಾರ ಕೊಡಿಸುವ ಭರವಸೆ ನೀಡಿದರು. ಕೊನೆಗೂ ಜಿಲ್ಲಾಧಿಕಾರಿ ಮಾತಿಗೆ ಮಣಿದ ಗ್ರಾಮಸ್ಥರು, ಮೃತ ರೈತರ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಅವಕಾಶ ನೀಡಿದರು.