*  ಗ್ರಾಹಕರ ಸೋಗಲ್ಲಿ ಆರೋಪಿಗೆ ಬಲೆ*  ಚನ್ನಪಟ್ಟಣದಲ್ಲಿದ್ದ ಘಟಕದ ಮೇಲೆ ದಾಳಿ*  ಘಟಕಕ್ಕೆ ಬೀಗ 

ಬೆಂಗಳೂರು(ಏ.05):  ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಡೆಯುತ್ತಿದ್ದ ವಾಹನಗಳ ನಕಲಿ ಎಂಜಿನ್‌ ಆಯಿಲ್‌ ದಂಧೆಯನ್ನು(Duplicate Engine Oil) ಸಿನಿಮೀಯ ಶೈಲಿಯಲ್ಲಿ ಅಶೋಕನಗರ ಠಾಣೆ ಮಹಿಳಾ ಸಬ್‌ಇನ್ಸ್‌ಪೆಕ್ಟರ್‌(Women Sub-Inspector) ಬೇಧಿಸಿದ್ದು, ಈ ಸಂಬಂಧ ಟೇಲರ್‌ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಚನ್ನಪಟ್ಟಣ ತಾಲೂಕಿನ ಯಲಚಿಪಾಳ್ಯದಲ್ಲಿ ಆಯಿಲ್‌ ತಯಾರಿಕಾ ಘಟಕಕ್ಕೆ ಬೀಗ ಜಡಿದಿದ್ದಾರೆ.

ಚನ್ನಪಟ್ಟಣ ತಾಲೂಕಿನ ಯಲಚಿಪಾಳ್ಯದ ಸ್ವಾಮಿ ಹಾಗೂ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾವನೂರು ಗ್ರಾಮದ ಎಂ.ಆರ್‌.ನಾಗರಾಜ್‌ ಬಂಧಿತರು(Arrest). ಆರೋಪಿಗಳಿಂದ(Accused) 10 ಲಕ್ಷ ಮೌಲ್ಯದ ಕ್ಯಾಸ್ಟೊ್ರೕಲ್‌, ಟಿವಿಎಸ್‌, ಹೀರೋ ಹಾಗೂ ಶೆಲ್‌ ಆಡ್ವಾನ್ಸ್‌ ಸೇರಿದಂತೆ ಇತರೆ ಕಂಪನಿಗಳ ಆಯಿಲ್‌, ಕಾರು ಹಾಗೂ ಮೊಬೈಲ್‌ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಆಯಿಲ್‌ ಖರೀದಿಸುವ ಸೋಗಿನಲ್ಲಿ ಆಸ್ಟೀನ್‌ ಟೌನ್‌ಗೆ ನಾಗರಾಜ್‌ನನ್ನು ಕರೆಸಿ ಮಾಲೀನ ಸಮೇತ ಸಬ್‌ ಇನ್ಸ್‌ಪೆಕ್ಟರ್‌ ಜಿ.ಎ.ಅಶ್ವಿನಿ ನೇತೃತ್ವದ ತಂಡ ಸೆರೆ ಹಿಡಿದಿದೆ. ಬಳಿಕ ಆತನ ಮಾಹಿತಿ ಮೇರೆಗೆ ಚನ್ನಪಟ್ಟಣ ತಾಲೂಕಿನಲ್ಲಿ ದಾಳಿ ನಡೆಸಿ ಸ್ವಾಮಿಯನ್ನು ಬಂಧಿಸಿದಾಗ ಆಯಿಲ್‌ ದಂಧೆ ಬಯಲಾಗಿದೆ.

Bengaluru Crime: ಪತ್ನಿಯ ಸುಖವಾಗಿಡಲು ಕಳ್ಳತನಕ್ಕೆ ಇಳಿದ ಭೂಪ!

ಆಯಿಲ್‌ ಸ್ವಾಮಿ:

ಸ್ವಾಮಿ ಮೊದಲು ಟೇಲರ್‌ ಅಂಗಡಿ ಇಟ್ಟುಕೊಂಡಿದ್ದ. ಆಗ ಆತನಿಗೆ ದೆಹಲಿ ಮೂಲದ ಸ್ಥಳೀಯ ಎಂಜಿನ್‌ ಆಯಿಲ್‌ ತಯಾರಿಕಾ ಕಂಪನಿಯ ಕೆಲಸಗಾರನೊಬ್ಬನ ಸಂಪರ್ಕ ಬೆಳದಿದೆ. ಆತನಿಂದ ದೆಹಲಿ ‘ಬ್ರ್ಯಾಂಡ್‌’ ಆಯಿಲ್‌ನ ಮಾರಾಟ ಪರವಾನಿಗೆ ಪಡೆದು ಬೆಂಗಳೂರಿನಲ್ಲಿ(Bengaluru) ಆ ಆಯಿಲ್‌ ಪೂರೈಕೆಗೆ ಆತ ಮುಂದಾದ. ಕೆಲ ದಿನಗಳಲ್ಲೇ ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾ ವಸ್ತುಗಳನ್ನು ಬಳಸಿ ಆಯಿಲ್‌ ಉತ್ಪಾದಿಸುವುದನ್ನು ಕಲಿತ ಸ್ವಾಮಿ, ಬಳಿಕ ತನ್ನೂರಿನಲ್ಲೇ ಆಯಿಲ್‌ ತಯಾರಿಕಾ ಘಟಕ ಶುರು ಮಾಡಿದ್ದ. ಹೀಗೆ ತಾನು ತಯಾರಿಸಿದ ಎಂಜಿನ್‌ ಆಯಿಲ್‌ಗೆ ಪ್ರತಿಷ್ಠಿತ ಕಂಪನಿಗಳ ಲೇಬಲ್‌ ಅಂಟಿಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸುಳಿವು ಕೊಟ್ಟ ಮೆಕ್ಯಾನಿಕ್‌:

ಕೆಲ ದಿನಗಳ ಹಿಂದೆ ನಾಗರಾಜ್‌ನಿಂದ ಎಂಜಿನ್‌ ಆಯಿಲ್‌ ಖರೀದಿಸಿದ ಗ್ರಾಹಕರ ವಾಹನ ದುರಸ್ತಿಗೆ ಬಂದಿದೆ. ಆಗ ರಿಪೇರಿ ಮಾಡಿಸಿದಾಗ ನಕಲಿ ಆಯಿಲ್‌ ಬಳಕೆ ಬಗ್ಗೆ ಮೆಕ್ಯಾನಿಕ್‌ ತಿಳಿಸಿದ್ದಾನೆ. ಆ ಗ್ರಾಹಕನ ಮೂಲಕ ಪಿಎಸ್‌ಐ ಅಶ್ವಿನಿಗೆ ಆಯಿಲ್‌ ದಂಧೆ ಬಗ್ಗೆ ಸುಳಿವು ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪಿಎಸ್‌ಐ, ಮೊದಲು ನಾಗರಾಜ್‌ನನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಆಯಿಲ್‌ ಘಟಕದ ಮೇಲೆ ದಾಳಿ ನಡೆಸಿ ನಕಲಿ ಆಯಿಲ್‌ ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಲೀಟರ್‌ಗೆ 150ರಿಂದ 200 ಲಾಭ

ಪ್ರತಿಷ್ಠಿತ ಕಂಪನಿಗಳ ಎಂಜಿನ್‌ ಆಯಿಲ್‌ ಮಾರುಕಟ್ಟೆದರದಲ್ಲೇ ಅಂಗಡಿಗಳಿಗೆ ತನ್ನ ಲೋಕಲ್‌ ಬ್ರ್ಯಾಂಡ್‌ ಅನ್ನು ಸ್ವಾಮಿ ಪೂರೈಸುತ್ತಿದ್ದ. ಹೀಗಾಗಿ ವ್ಯಾಪಾರಿಗಳಿಗೆ ಅನುಮಾನ ಬಂದಿಲ್ಲ. ಒಂದು ಲೀಟರ್‌ ಲೋಕಲ್‌ ಆಯಿಲ್‌ ಎಂಜಿನ್‌ ತಯಾರಿಕೆಗೆ 40 ರಿಂದ 50 ವೆಚ್ಚವಾಗಿದ್ದು, ಪ್ರತಿ ಲೀಟರ್‌ಗೆ ಆತನಿಗೆ .150 ರಿಂದ .200 ಲಾಭ ಸಿಕ್ಕಿದೆ. ಈ ದಂಧೆಯನ್ನು ಆತ ಐದಾರು ವರ್ಷಗಳಿಂದ ನಡೆಸಿರುವ ಬಗ್ಗೆ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Animal Cruelty : ಬೆಂಗಳೂರು, ಸಾಕಿದ ನಾಯಿಗೆ ಪ್ರತಿದಿನ ಟಾರ್ಚರ್ ಕೊಡ್ತಿದ್ದ ವಿಕೃತ ಸೆರೆ

ದೆಹಲಿಯಲ್ಲೂ ಕಾರ್ಯಾಚರಣೆ

ಈ ಆಯಿಲ್‌ ದಂಧೆ ಜಾಲದ ಬೆನ್ನತ್ತಿ ಪಿಎಸ್‌ಐ ಅಶ್ವಿನಿ ಅವರು, ದೆಹಲಿಯಲ್ಲಿ ಆರು ದಿನಗಳು ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದ್ದರು. ಸ್ವಾಮಿಗೆ ಕಚ್ಚಾ ಆಯಿಲ್‌ ಪೂರೈಕೆದಾರರ ಪತ್ತೆಗೆ ದೆಹಲಿಗೆ ತೆರಳಿದ್ದರು. ಅಲ್ಲಿ ಪರಿಶೀಲಿಸಿದ ಬಳಿಕವೇ ಸ್ವಾಮಿಯ ಆಯಿಲ್‌ ದಂಧೆ ಮತ್ತಷ್ಟು ಮಾಹಿತಿ ಸಿಕ್ಕಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಯಿಲ್‌ ಖರೀದಿ ನೆಪದಲ್ಲಿ ಸೆರೆ

ನಕಲಿ ಆಯಿಲ್‌ ದಂಧೆ ವಿಚಾರ ತಿಳಿದ ಕೂಡಲೇ ಎಚ್ಚೆತ್ತ ಪಿಎಸ್‌ಐ ಅಶ್ವಿನಿ(PSI Ashwini) ಅವರು .60 ಸಾವಿರ ಮೌಲ್ಯದ ಆಯಿಲ್‌ ಖರೀದಿಸುವ ನೆಪದಲ್ಲಿ ನಾಗರಾಜ್‌ನನ್ನು ಸಂಪರ್ಕಿಸಿದ್ದರು. ಈ ವ್ಯವಹಾರಕ್ಕೊಪ್ಪಿ ಆಸ್ಟಿನ್‌ ಟೌನ್‌ಗೆ ಆಯಿಲ್‌ ಪೂರೈಕೆಗೆ ಆತ ಬಂದಾಗ ಮಾರುವೇಷದಲ್ಲಿ ಪಿಎಸ್‌ಐ ತಂಡ ಬಂಧಿಸಿದೆ.