ತುಮಕೂರು ವಿದ್ಯಾರ್ಥಿನಿ ಆತ್ಮಹತ್ಯೆ, ಮದ್ವೆ ಎಂಬುದೇ ಈಕೆಯ ಜೀವಕ್ಕೆ ಬಿರುಗಾಳಿಯಾಯ್ತೆ?
* ಬೆಂಕಿಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
* ಮದುವೆ ಎಂಬುದೇ ಈಕೆಯ ಜೀವಕ್ಕೆ ಬಿರುಗಾಳಿಯಾಯ್ತೆ
* ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ನಡೆದ ಘಟನೆ
ತುಮಕೂರು, (ಮೇ.15): ವಿದ್ಯಾರ್ಥಿನಿಯೋರ್ವಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದಲ್ಲಿ ನಡೆದಿದೆ.
ತೇಜಾ (19) ಆತ್ಮಹತ್ಯೆ ಮಾಡಿಕೊಂಡು ವಿದ್ಯಾರ್ಥಿನಿ. ಈಕೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು(ಭಾಣುವಾರ) ಬೆಳಗಿನಜಾವ 4.30ರ ಸುಮಾರಿನಲ್ಲಿ ಘಟನೆ ಸಂಭವಿಸಿದೆ.
ತೇಜಾ, ಪಾವಗಡದಲ್ಲಿ ಮೊದಲನೇ ವರ್ಷದ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದೇ ಮೇ 24-25 ರಂದು ಮದುವೆ ನಿಶ್ಚಯವಾಗಿತ್ತು. ಪೋಷಕರು ಮದುವೆ ಆಮಂತ್ರಣ ಪತ್ರಿಕೆಯನ್ನು ಎಲ್ಲಾ ಕಡೆ ಕೊಟ್ಟಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈಕೆಗೆ ಮದುವೆ ಇಷ್ಟವಿರಲಿಲ್ಲವೋ ಅಥವಾ ಇನ್ನಾವ ಕಾರಣದಿಂದ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಈ ಬಗ್ಗೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾಗಿದ್ದ ಮಂಗಳಮುಖಿ ಸಾವು
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಚಿಕಿತ್ಸೆ ಫಲಿಸದೆ 25 ವರ್ಷದ ಅರ್ಚನಾ ಸಾವನ್ನಪ್ಪಿದ್ದಾರೆ. ಕಾಟನ್ಪೇಟೆಯ ಶಿವಾಸ್ ಲಾಡ್ಜ್ನಲ್ಲಿ ಅರ್ಚನಾ ಮೇಲೆ ಹಲ್ಲೆಯಾಗಿತ್ತು. ಹಲ್ಲೆ ನಡೆಸಿ ಐದಾರು ಕಡೆ ಚಾಕು ಇರಿಯಲಾಗಿತ್ತು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಮಂಗಳಮುಖಿ ಸಂಜನಾ(30)ಗೆ ಚಿಕಿತ್ಸೆ ಮುಂದುವರಿದಿದೆ. ಕಾಟನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತಂದೆಯ ಬರ್ಬರ ಹತ್ಯೆ
ಗದಗ: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗದಗ ತಾಲೂಕಿನ ಹಾತಲಗೇರಿಯಲ್ಲಿ ನಡೆದಿದೆ. ಭರಮಪ್ಪ ದೊಡ್ಡಮನಿ ಹತ್ಯೆಯಾದ ವ್ಯಕ್ತಿ. ಪಾನಮತ್ತನಾಗಿ ಮಗ ತಂದೆಗೆ ಚಾಕು ಇರಿದಿದ್ದಾನೆ. ತಂದೆಯನ್ನು ಕೊಂದ ಮಗ ಸುರೇಶ್ ದೊಡ್ಡಮನಿ ಗ್ರಾಮದಿಂದ ಪರಾರಿಯಾಗಿದ್ದಾನೆ.
ಗಾಂಜಾ ಮತ್ತಿನಲ್ಲಿ ವ್ಯಕ್ತಿಯ ಪುಂಡಾಟಿಕೆ: ನೆಲಮಂಗಲ: ಹೆಸರಘಟ್ಟ ರಸ್ತೆ ಬಾಗಲಗುಂಟೆ ಬಳಿಯ ಸಿಲ್ವರ್ ಸ್ಪ್ರಿಂಗ್ ಅಪಾರ್ಟ್ಮೆಂಟ್ ಮುಂದೆ ವ್ಯಕ್ತಿಯೊಬ್ಬ ಗಾಂಜಾ ಮತ್ತಿನಲ್ಲಿ ಪುಂಡಾಟಿಕೆ ಮಾಡಿದ್ದಾನೆ. ಈ ಘಟನೆ ತಡರಾತ್ರಿ ನಡೆದಿದೆ. ಕೆಲಕಾಲ ನಿವಾಸಿಗಳಿಗೆ ಭಯದ ಅತಂಕ ಮೂಡಿಸಿದ್ದ. 35 ವರ್ಷದ ಅಪರಿಚಿತ ವ್ಯಕ್ತಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿ.ಟಿ.ದೇವೇಗೌಡ ಮೊಮ್ಮಗಳು ನಿಧನ
ಮೈಸೂರು: ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ ಗೌಡ ಅವರ ಮೂರು ವರ್ಷದ ಪುತ್ರಿ ಶನಿವಾರ ರಾತ್ರಿ ನಿಧನಳಾಗಿದ್ದಾಳೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬಾಲಕಿಯನ್ನು ದಾಖಲು ಮಾಡಲಾಗಿತ್ತು. ಮೈಸೂರು ತಾಲೂಕಿನ ಗುಂಗಾಲ್ ಛತ್ರದ ತೋಟದ ಮನೆಯಲ್ಲಿ ಭಾನುವಾರ ಮಧ್ಯಾಹ್ನ 12ಕ್ಕೆ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಾಜಿ ಸಚಿವ ಜಿ.ಟಿ.ದೇವೇಗೌಡರ ಮೊಮ್ಮಗಳ ನಿಧನಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.