ಮದುವೆಯಾಗಿ ಕೇವಲ 45 ದಿನಗಳಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ. 15 ವರ್ಷಗಳಿಂದ ಅಂಕಲ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಈ ಕೃತ್ಯ ಎಸಗಿದ್ದಾಳೆ.
ಬಿಹಾರ: ಮೇಘಾಲಯಕ್ಕೆ ಹನಿಮೂನ್‌ಗೆ ಕರೆದೊಯ್ದು ನವವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿದ ಪ್ರಕರಣ ಮಾಸುವ ಮೊದಲೇ ಈಗ ಇಂತಹದ್ದೇ ಪ್ರಕರಣವೊಂದು ಬಿಹಾರದ ಔರಂಗಬಾದ್‌ನಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ 50 ವರ್ಷದ ಅಂಕಲ್ ಜೊತೆಗಿನ 15 ವರ್ಷದ ಅನೈತಿಕ ಸಂಬಂಧವನ್ನು ಮುಂದುವರಿಸುವ ಕಾರಣಕ್ಕಾಗಿ ಮದುವೆಯಾದ ಕೇವಲ 45 ದಿನದಲ್ಲಿ ಪತಿಯನ್ನು ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ನಡೆದಿದೆ.
ಪ್ರಿಯಾಂಶು ಕುಮಾರ್ ಸಿಂಗ್ ಪತ್ನಿಯಿಂದಲೇ ಕೊಲೆಯಾದ ನತದೃಷ್ಟ. ತನ್ನ ಅಂಕಲ್ ಜೊತೆಗಿನ ದೀರ್ಘಕಾಲದ ಸಂಬಂಧವನ್ನು ಮುಂದುವರೆಸುವ ಉದ್ದೇಶದಿಂದ ಹಾಗೂ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಿಂದ ಪ್ರೇರಿತಳಾಗಿ ಈಕೆ ಈ ಕೊಲೆ ಮಾಡಿದ್ದಾಳೆ ಎಂದು ವರದಿಯಾಗಿದೆ. ಪ್ರಿಯಾಂಶೂ ಕುಮಾರ್ ಸಿಂಗ್ ಪತ್ನಿ ಗುಂಜಾ ಸಿಂಗ್ ಪತಿಯನ್ನೇ ಕೊಲೆ ಮಾಡಿದ ಪಾತಕಿ ಮಹಿಳೆ.
ಈಕೆ ತಾನು ಸಂಬಂಧ ಹೊಂದಿದ್ದ ಅಂಕಲ್ ಹಾಗೂ ಆತನ ಇಬ್ಬರು ಸಹಚರರ ಜೊತೆ ಸೇರಿ ಈ ಕೃತ್ಯವೆಸಗಿದ್ದಾಳೆ. ಜೂನ್ 24ರ ರಾತ್ರಿ ಈ ಕೊಲೆ ನಡೆದಿದೆ. ರೈಲು ನಿಲ್ದಾಣದಿಂದ ಹಿಂತಿರುಗುತ್ತಿದ್ದ 24 ವರ್ಷದ ಹಿಮಾಂಶು ಕುಮಾರ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರಂಭದಲ್ಲಿ ಇದನ್ನು ಒಂದು ಕಂಟ್ರಾಕ್ಟ್ ಕಿಲ್ಲಿಂಗ್ ಎಂದು ಭಾವಿಸಿದ್ದರು. ಆದರೆ ಹೆಚ್ಚಿನ ತನಿಖೆ ನಡೆಸಿದಾಗ ಇದರಲ್ಲಿ ಹಿಮಾಂಶು ಪತ್ನಿ ಗುಂಜಾ ಸಿಂಗ್ ಅವರೇ ಶಾಮೀಲಾಗಿರುವುದು ಪೊಲೀಸರಿಗೆ ತಿಳಿದಿದೆ.
ಔರಂಗಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಅಂಬರೀಷ್ ರಾಹುಲ್ ಅವರ ಪ್ರಕಾರ, ಗುಂಜಾ ಸಿಂಗ್ ತನ್ನ ಅಂಕಲ್ ಜೀವನ್ ಸಿಂಗ್(52) ಜೊತೆ ಕಳೆದ 15 ವರ್ಷದಿಂದಲೂ ಅಕ್ರಮ ಸಂಬಂಧದಲ್ಲಿರುವುದು ತಿಳಿದು ಬಂದಿದೆ. ಮದುವೆಗೆ ಇಷ್ಟವಿಲ್ಲದಿದ್ದರೂ ಆಕೆ ಕುಟುಂಬದ ಒತ್ತಾಯದ ಮೇರೆಗೆ ಹಿಮಾಂಶು ಕುಮಾರ್ ಸಿಂಗ್ ಅವರನ್ನು ಮದುವೆಯಾಗಿದ್ದಳು. ಆದರೆ ಮದುವೆಯಾದ ನಂತರ ತನ್ನ ಅಂಕಲ್ ಜೊತೆಗಿನ ಸಂಬಂಧವನ್ನು ರಹಸ್ಯವಾಗಿಡಲು ಹೆಣಗಾಡಿದ ಆಕೆ ಕೊನೆಗೂ ಗಂಡನ ಕೊಲೆ ಮಾಡುವ ಸಂಚು ರೂಪಿಸಿದ್ದಳು.
ಮೇಘಾಲಯದಲ್ಲಿ ಹನಿಮೂನ್ ಸಮಯದಲ್ಲಿ ನಡೆದ ರಾಜ ರಘುವಂಶಿ ಕೊಲೆ ಪ್ರಕರಣದಿಂದ ಈಕೆ ಪ್ರೇರಿತಳಾಗಿದ್ದಳು ಎಂದು ತಿಳಿದು ಬಂದಿದೆ. ಪತಿ ಹಿಮಾಂಶುವಿನ ಕೊಲೆಗೆ ಗುಂಜನ್ ಸಿಂಗ್ ಹಾಗೂ ಜೀವನ್ ಸಿಂಗ್ ಇಬ್ಬರು ಜೊತೆಯಾಗಿ ಸೇರಿ ಬಹಳ ಸೂಕ್ಷ್ಮವಾಗಿ ಸಂಚು ರೂಪಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇವರ ಈ ಪಾತಕ ಆರೋಪಿ ಜೀವನ್‌ಗೆ ಕೃತ್ಯಕ್ಕೆ ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯ ಜೈಶಂಕರ್ ಚೌಬೆ ಹಾಗೂ ಮುಕೇಶ್ ಶರ್ಮಾ ಎಂಬುವವರು ಸಿಮ್ ಕಾರ್ಡ್ ಹಾಗೂ ಲಾಜಿಸ್ಟಿಕ್ ವ್ಯವಸ್ಥೆ ಒದಗಿಸಿ ಸಹಾಯ ಮಾಡಿದ್ದಾರೆ.
ಕೊಲೆಯಾದ ದಿನ ರಾತ್ರಿ ಪ್ರಿಯಾಂಶು ವಾರಾಣಾಸಿಯಿಂದ ಹಿಂತಿರುಗುತ್ತಿದ್ದ. ಆತ ತನ್ನ ಪತ್ನಿಗೆ ಮಾಮೂಲಿಯಂತೆ ತಾನು ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿಯನ್ನು ಪ್ರಿಯಾಂಶು ಪತ್ನಿ ಗುಂಜನ್ ಸಿಂಗ್ ಕೊಲೆಗಾರರಿಗೆ ನೀಡಿದ್ದಳು. ಕೆಲವೇ ಕ್ಷಣಗಳಲ್ಲಿ ಕೊಲೆಗಾರರು ಹಿಮಾಂಶು ಕುಮಾರ್ ಸಿಂಗ್ ಕತೆ ಮುಗಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ ಗುಂಜನ್ ಸಿಂಗ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆಕೆ ಹಾಗೂ ಕೊಲೆಗಾರರನ್ನು ಬಂಧಿಸಲಾಗಿದೆ. ಆದರೆ ಆಕೆಯ ಅಂಕಲ್ ಜೀವನ್ ಸಿಂಗ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆ ಈಗ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ವಿವಾಹವಾಗಲು ಬಯಸುತ್ತಿರುವವರು ಹೆದರುವಂತಾಗಿದೆ.