Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ನಿಲ್ಲದ ಅಗ್ನಿ ಅವಘಡ; ಆಕಸ್ಮಿಕ ಬೆಂಕಿಗೆ ಸುಟ್ಟು ಭಸ್ಮವಾದ 29 ಆಟೋಗಳು!

ಅಕ್ಕಪಕ್ಕದಲ್ಲಿದ್ದ ಆಟೋ ಶೆಡ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 29 ಆಟೋಗಳು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

15 autos caught fire accidentally at bengaluru rav
Author
First Published Feb 24, 2024, 6:34 AM IST

ಬೆಂಗಳೂರು (ಫೆ.24) : ಅಕ್ಕಪಕ್ಕದಲ್ಲಿದ್ದ ಆಟೋ ಶೆಡ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು 29 ಆಟೋಗಳು ಸೇರಿದಂತೆ ಲಕ್ಷಾಂತರ ರು. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಯಂಡಹಳ್ಳಿ ಬಳಿಯ ಗಂಗೊಂಡನಹಳ್ಳಿಯಲ್ಲಿ ಗುರುವಾರ ರಾತ್ರಿ ಈ ಅವಘಡ ಸಂಭವಿಸಿದ್ದು, 29 ಆಟೋಗಳು ಹಾಗೂ 50 ಲಕ್ಷ ರು. ಮೌಲ್ಯದ ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಹೋಗಿವೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗಂಗೊಂಡನಹಳ್ಳಿ ಸಮೀಪ ನದೀಮ್ ಮಾಲಿಕತ್ವದ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಗೋದಾಮು ಹಾಗೂ ರಿಜ್ವಾನ್‌ ಅವರಿಗೆ ಸೇರಿದ ಆಟೋ ಶೆಡ್‌ನಲ್ಲಿ ರಾತ್ರಿ 1.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಆಗ ದಟ್ಟಾ ಹೊಗೆ ಕಂಡು ಭೀತಿಗೊಂಡ ಸ್ಥಳೀಯರು, ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ 5 ವಾಹನಗಳಲ್ಲಿ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಚಂದ್ರಾಲೇಔಟ್ ಠಾಣೆ ಪೊಲೀಸರು ಸತತ ಆರು ತಾಸು ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದ್ದಾರೆ.

ಬೆಂಕಿ ಹೊತ್ತಿದ್ದು ಹೇಗೆ?

ಕೆಲವರು ಪ್ಲಾಸ್ಟಿಕ್ ಗೋದಾಮಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಬಳಿಕ ಆಟೋ ಶೆಡ್‌ಗೆ ಅಗ್ನಿ ಜ್ವಾಲೆ ಹಬ್ಬಿದೆ ಎಂದರೆ, ಮತ್ತೆ ಕೆಲವರು ಶೆಡ್‌ನಲ್ಲಿ ಬೆಂಕಿ ಹೊತ್ತಿಕೊಂಡು ಆಟೋಗಳ ಸಿಲಿಂಡರ್‌ಗಳ ಸ್ಫೋಟಿಸಿದ ಪರಿಣಾಮ ಗೋದಾಮಿಗೆ ಬೆಂಕಿ ಬಿದ್ದಿದೆ ಎಂದಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದು, ಬೆಂಕಿ ಹೇಗೆ ಹೊತ್ತಿಕೊಂಡಿದೆ ಹಾಗೂ ಎಲ್ಲಿಂದ ಶುರುವಾಗಿದೆ ಎಂಬುದು ಖಚಿತವಾಗಿಲ್ಲ.

ರಾಜಧಾನಿಯಲ್ಲಿ ಮತ್ತೊಂದು ಅಗ್ನಿ ಅವಘಡ; ಪ್ಲಾಸ್ಟಿಕ್ ಗೋಡೌನ್ ಹೊತ್ತಿಕೊಂಡ ಬೆಂಕಿ!

ಪ್ಲಾಸ್ಟಿಕ್ ವಸ್ತುಗಳ ಸಂಗ್ರಹಣೆ

ನಗರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಬಳಿಕ ಅವುಗಳನ್ನು ವಿಂಗಡಿಸಿ ಕುಂಬಳಗೋಡು, ಜಿಗಣಿ ಹಾಗೂ ದಾಬಸಪೇಟೆಯ ಕೈಗಾರಿಕೆಗಳಿಗೆ ನದೀಮ್ ಪೂರೈಸುತ್ತಿದ್ದರು. ಅದಕ್ಕಾಗಿ ಬಿಬಿಎಂಪಿ ಹಾಗೂ ಸಾರ್ವಜನಿಕರಿಂದ ನದೀಮ್ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ಘಟನೆಯಲ್ಲಿ ಸುಮಾರು 50 ಲಕ್ಷ ರು. ಮೌಲ್ಯದ ವಸ್ತುಗಳು ಹಾನಿಯಾಗಿದೆ ಎಂದು ನದೀಮ್ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದೇ ರೀತಿ ದಿನ 30 ರು ಬಾಡಿಗೆಯಂತೆ ತಿಂಗಳಿಗೆ 900 ರು.ಗೆ ಶೆಡ್‌ನಲ್ಲಿ ಆಟೋಗಳನ್ನು ಚಾಲಕರು ನಿಲ್ಲಿಸುತ್ತಿದ್ದರು. ಪ್ರತಿ ದಿನದಂತೆ ರಾತ್ರಿ ಆಟೋ ನಿಲ್ಲಿಸಿ ಚಾಲಕರು ಮನೆಗೆ ತೆರಳಿದ ನಂತರ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios