ಜಲ್‌ಪೈಗುರಿ(ಜ.21): ಕಲ್ಲು ತುಂಬಿದ್ದ ಲಾರಿಗೆ ದಿಬ್ಬಣದ ಕಾರು ಗುದ್ದಿ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿ 14 ಜನರ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದ ಜಲ್‌ಪೈಗುರಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.

ಮದುವೆ ಮುಗಿಸಿಕೊಂಡು ಬರುತ್ತಿದ್ದ ಮೂರು ಕಾರುಗಳು, ರಸ್ತೆಯಲ್ಲಿ ರಾಂಗ್‌ ಸೈಡ್‌ನಲ್ಲಿ ಚಲಿಸುತ್ತಿದ್ದವು. ರಾತ್ರಿ ವೆಳೆಗೆ ಭಾರೀ ಮಂಜು ಕವಿದಿದ್ದ ಕಾರಣ ಮೊದಲ ಕಾರು ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಪಕ್ಕಕ್ಕೆ ಉರುಳಿದೆ. ಅದರ ಬೆನ್ನಲ್ಲೇ ಹಿಂದಿನಿಂದ ಬಂದ ಮತ್ತೆರಡು ಕಾರುಗಳು ಲಾರಿಗೆ ಡಿಕ್ಕಿ ಹೊಡೆದಿವೆ. ಈ ರಭಸಕ್ಕೆ ಲಾರಿಯಲ್ಲಿದ್ದ ಕಲ್ಲು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದೆ.

ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮಡಿದವರ ಕುಟುಂಬ ಸದಸ್ಯರಿಗೆ ಪ್ರಧಾನಿ ಮೋದಿ ತಲಾ 2 ಲಕ್ಷ ರು. ಮತ್ತು ರಾಜ್ಯ ಸರ್ಕಾರ ತಲಾ 2.50 ಲಕ್ಷ ರು. ಪರಿಹಾರ ಘೋಷಿಸಿದೆ.