Asianet Suvarna News Asianet Suvarna News

13 ವರ್ಷದ ಬಾಲಕಿ ಮೇಲೆ 80 ಜನರಿಂದ ಲೈಂಗಿಕ ದೌರ್ಜನ್ಯ

* ದತ್ತು ಪಡೆದು ಮಗುವನ್ನು ಬಲವಂತವಾಗಿ ವ್ಯಭಿಚಾರಕ್ಕೆ ತೊಡಗಿಸಿದ್ದ ಮಹಿಳೆ

* 13 ವರ್ಷದ ಬಾಲಕಿ ಮೇಲೆ 80 ಜನರಿಂದ ಅತ್ಯಾಚಾರ

* 10 ಜನರನ್ನು ಬಂಧಿಸಿದ ಪೊಲೀಸರು

13-year-old raped by 80 men for over 8 months in Andhra Pradesh and Telangana pod
Author
Bangalore, First Published Apr 21, 2022, 10:28 AM IST

ಹೈದರಾಬಾದ್‌(ಏ.21): ಬಲವಂತವಾಗಿ ವ್ಯಭಿಚಾರಕ್ಕೆ ತೊಡಗಿಸಲಾಗಿದ್ದ 13 ವರ್ಷದ ಬಾಲಕಿಯ ಮೇಲೆ 80ಕ್ಕೂ ಹೆಚ್ಚು ಜನರು ಆಂಧ್ರಪ್ರದೇಶದಲ್ಲಿ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ 10 ಜನರನ್ನು ಪೊಲೀಸರು ಬಂಧಿಸಿದ್ದು, ಒಟ್ಟು ಬಂಧಿತರ ಸಂಖ್ಯೆ 74ಕ್ಕೇರಿದೆ. ಬಾಲಕಿಯನ್ನು ಗುಂಟೂರು ಪೊಲೀಸರು ರಕ್ಷಿಸಿದ್ದಾರೆ.

ಕೋವಿಡ್‌ನಿಂದ ತಾಯಿಯನ್ನು ಕಳೆದುಕೊಂಡ ಬಾಲಕಿಯನ್ನು ಆಕೆಯ ತಾಯಿಯ ಸ್ನೇಹಿತೆಯೊಬ್ಬರು ದತ್ತು ಪಡೆದುಕೊಂಡು ಬಲವಂತವಾಗಿ ವ್ಯಭಿಚಾರದಲ್ಲಿ ತೊಡಗಿಸಿದ್ದರು. ಸುಮಾರು 8 ತಿಂಗಳುಗಳ ಕಾಲ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಹಲವು ಕಡೆ ಬಾಲಕಿಯ ಮೇಲೆ ಅತ್ಯಾಚಾರಗಳು ನಡೆದಿದ್ದವು. ಈ ವಿಷಯ ಬಾಲಕಿಯ ತಂದೆಗೆ ತಿಳಿಯುತ್ತಿದ್ದಂತೆ 2021ರ ಆಗಸ್ಟ್‌ನಲ್ಲಿ ದೂರು ದಾಖಲಿಸಿದ್ದರು. ನಂತರ ಶೋಧ ಕಾರ್ಯ ಆರಂಭಿಸಿದ ಪೊಲೀಸರು ಕಳೆದ ಜನವರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ವ್ಯಕ್ತಿಯನ್ನು ಬಂಧಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇಲ್ಲಿಯವರೆಗೆ ಒಟ್ಟು 74 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ಮೇಲೆ ರೇಪ್‌: ಆರೋಪಿ ಜೈಲಲ್ಲೇ ಆತ್ಮಹತ್ಯೆ

ಇತ್ತೀಚೆಗೆ ತನ್ನ ನಾದಿನಿಯ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿಯೊಬ್ಬ, ಶನಿವಾರ ಪಶ್ಚಾತ್ತಾಪದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಸಮೀಪದ ನಿವಾಸಿ ದೀಪು(31) ಮೃತನಾಗಿದ್ದು, ಜೈಲಿನ ಕ್ವಾರಂಟೈನ್‌ ಕೇಂದ್ರದ ಸ್ನಾನಗೃಹದಲ್ಲಿ ಬೆಳಗ್ಗೆ 5.20ರ ಸುಮಾರಿಗೆ ಬೆಡ್‌ ಶಿಟ್‌ನಿಂದ ವಿಚಾರಣಾಧೀನ ಕೈದಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆಗ ಆತನನ್ನು ರಕ್ಷಿಸಿದ ಜೈಲು ಸಿಬ್ಬಂದಿ, ಜೈಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಚಾರಣಾಧೀನ ಕೈದಿ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಗು ಕೊಂದು ಅಪಘಾತ ನಾಟಕ ಕಟ್ಟಿದ್ದ:

ಲಾರಿ ಚಾಲಕನಾಗಿದ್ದ ತೂಬಗೆರೆ ದೀಪು, ತನ್ನ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳ ಜತೆ ಅತ್ತಿಬೆಲೆ ಸಮೀಪದ ನೆಲ್ಲೂರಹಳ್ಳಿಯಲ್ಲಿ ನೆಲೆಸಿದ್ದ. ಮಾ.20ರಂದು ತನ್ನ ನಾದಿನಿಯ ಎರಡೂವರೆ ವರ್ಷದ ಹೆಣ್ಣು ಮಗುವನ್ನು ಕಾರಿನಲ್ಲಿ ಕರೆದೊಯ್ದು ಲೈಂಗಿಕವಾಗಿ ಶೋಷಿಸಿದ್ದ. ಆ ವೇಳೆ ಮಗು ಕೂಗಿಕೊಂಡಿದ್ದಕ್ಕೆ ಕೋಪಗೊಂಡ ದೀಪು, ಮಗುವಿಗೆ ಕಪಾಳಕ್ಕೆ ಹೊಡೆದಿದ್ದ. ಇದರಿಂದ ಮಗು ಪ್ರಜ್ಞಾಹೀನವಾಯಿತು. ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರೂ ಮಗುವಿನ ಜೀವ ಉಳಿಯಲಿಲ್ಲ.

ಆದರೆ, ಚಿಕಿತ್ಸೆ ನೀಡಿದ ವೈದ್ಯರಿಗೆ ಕಾರಿನಲ್ಲಿ ಹೋಗುವಾಗ ಹಂಫ್ಸ್‌ನಲ್ಲಿ ಬ್ರೇಕ್‌ ಹಾಕಿದ್ದರಿಂದ ಮಗುವಿಗೆ ಪೆಟ್ಟಾಯಿತು ಎಂದು ಹೇಳಿದ್ದ. ಈ ಮಾತಿನಿಂದ ಅನುಮಾನಗೊಂಡ ವೈದ್ಯರು, ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅನಂತರ ಮಗುವಿನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ಸಾವಿಗೂ ಮುನ್ನ ಮಗುವಿನ ಮೇಲೆ ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ನಡೆದಿದ್ದ ಸಂಗತಿ ಬಯಲಾಯಿತು. ಈ ವರದಿ ಆಧರಿಸಿ ಪೊಕ್ಸೋ ಕಾಯ್ದೆ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡ ಅತ್ತಿಬೆಲೆ ಪೊಲೀಸರು, ಆರೋಪಿಯನ್ನು ಬಂಧಿಸಿ ಮಾ.28ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಟ್ಟಿದ್ದರು. ಜೈಲಿಗೆ ಬಂದ ಆರೋಪಿಗೆ ಜೈಲು ಆವರಣದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ತನ್ನ ಕೃತ್ಯದಿಂದ ಪಶ್ಚಾತ್ತಾಪಪಟ್ಟಿದ್ದ ಆತ, ಶನಿವಾರ ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios