Mangaluru: ಪಿಯು ಹುಡುಗಿಯರ ಬೆದರಿಸಿ ವೇಶ್ಯಾವಾಟಿಕೆ: 10 ಜನರ ಬಂಧನ
* ಬಾಲಕಿಯರ ಬೆದರಿಸಿ ವೇಶ್ಯಾವಾಟಿಕೆ: ಮತ್ತೆ 7 ಸೆರೆ
* ನಂದಿಗುಡ್ಡೆಯ ಫ್ಲ್ಯಾಟ್‌ನಲ್ಲಿ ನಡೆಯುತ್ತಿದ್ದ ದಂಧೆ ತನಿಖೆ ಮುಂದುವರಿಕೆ
* ಪೋಕ್ಸೋ ಸಂತ್ರಸ್ತೆಯೇ ಈಗ ಆರೋಪಿ
ಮಂಗಳೂರು(ಫೆ.10): ನಗರದ ಫ್ಲ್ಯಾಟ್‌ವೊಂದರಲ್ಲಿ ಪಿಯು ಕಾಲೇಜಿನ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್(Blackmail) ಮಾಡಿ ನಡೆಸುತ್ತಿದ್ದ ವೇಶ್ಯಾವಾಟಿಕೆ(Prostitution) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಈ ಸಂಬಂಧ ಮತ್ತೆ ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.
ಸಂತ್ರಸ್ತ ಬಾಲಕಿಯ(Victim) ದೂರಿನ ಮೇರೆಗೆ ಫೆ.3ರಂದು ಫ್ಲ್ಯಾಟ್‌ಗೆ ದಾಳಿ ನಡೆಸಿದ್ದ ಪೊಲೀಸರು(Police), ಪ್ರಧಾನ ಆರೋಪಿ ಅದೇ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದ ನಂದಿಗುಡ್ಡೆಯ ಶಮೀನಾ (41), ಉಪ್ಪಳದ ಅಬೂಬಕ್ಕರ್ ಸಿದ್ದಿಕ್ (42) ಮತ್ತು ಅಡ್ಯಾರ್‌ಪದವಿನ ಐಸಮ್ಮ (56)ನ್ನು ಬಂಧಿಸಿದ್ದರು(Arrest). ಇದೀಗ ಮೂಡುಬಿದಿರೆ ಹೊಸಬೆಟ್ಟಿನ ಸಂದೀಪ್ (33), ಮಂಗಳೂರು ಕೈಕಂಬದ ಸಿಪ್ರಿಯಾನ್ ಅಂದ್ರಾದೆ (40), ಉದ್ಯಾವರ ಮಂಜೇಶ್ವರದ ಮಹಮ್ಮದ್ ಶರೀಫ್ (46) ಎಂಬವರನ್ನು ಬಂಧಿಸಲಾಗಿದೆ. ಇವರು ಗಿರಾಕಿಗಳಾಗಿ ಆಗಮಿಸಿ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.
Shivamogga: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಮೂವರು ಮಹಿಳೆಯರ ರಕ್ಷಣೆ
ಈ ಜಾಲದಲ್ಲಿ ಪಿಂಪ್‌ಗಳಾಗಿ ಸಹಕಾರ ನೀಡಿದ ತಲಪಾಡಿಯ ರಹಮತ್(48), ಕಣ್ಣೂರಿನ ಸನಾ ಆಲಿಯಾಸ್ ಅಸ್ಮಾ (24), ಬಂಟ್ವಾಳ ನರಿಂಗಾನದ ಉಮ್ಮರ್ ಕುನ್ನಿ ಮತ್ತು ಬೆಂದೂರ್‌ವೆಲ್‌ನ ಮಹಮ್ಮದ್ ಹನೀಫ್ (46) ಎಂಬವರನ್ನೂ ಬಂಧಿಸಲಾಗಿದೆ.
ನಾಲ್ಕು ಎಫ್‌ಐಆರ್:
ಅಪ್ರಾಪ್ತ ಬಾಲಕಿಯ ದೂರಿನ ಆಧಾರದ ಮೇಲೆ ಪೋಕ್ಸೋ ಹಾಗೂ ವಿವಿಧ ಕಲಂಗಳ ಅಡಿಯಲ್ಲಿ ನಾಲ್ಕು ಪ್ರತ್ಯೇಕ ಎಫ್‌ಐಆರ್‌ಗಳನ್ನು(FIR) ಆರೋಪಿಗಳ ಮೇಲೆ ದಾಖಲಿಸಲಾಗಿದೆ. ಈ ಜಾಲದಲ್ಲಿ ಇನ್ನಷ್ಟು ಮಂದಿ ಇರುವ ಸಾಧ್ಯತೆ ಇದ್ದು ತನಿಖೆ(Investigation) ಮುಂದುವರಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಆರೋಪಿಗಳು(Accused) ನಂದಿಗುಡ್ಡದ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಲ್ಲಿರುವ ಪೆಂಟ್‌ಹೌಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಪಿಯು ಕಲಿಯುತ್ತಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದಂತೆ 18 ವರ್ಷ ಮೇಲ್ಪಟ್ಟಇಬ್ಬರು ಯುವತಿಯರನ್ನು ಇಟ್ಟುಕೊಂಡು ದಂಧೆ ನಡೆಸಲಾಗುತ್ತಿತ್ತು. ಬಲವಂತದ ವೇಶ್ಯಾವಾಟಿಕೆಗೆ ಒಳಗಾಗಿ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿದ್ದ ಒಬ್ಬ ವಿದ್ಯಾರ್ಥಿನಿ, ತನ್ನ ಶಾಲಾ ಮುಖ್ಯಸ್ಥರಿಗೆ ನೀಡಿದ ಮಾಹಿತಿಯನ್ನಾಧರಿಸಿ ಸಿಸಿಬಿ ಪೊಲೀಸರು(CCB Police) ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಆರೋಪಿಗಳು ಬಾಲಕಿಯರಿಗೆ ಬ್ಲ್ಯಾಕ್‌ಮೇಲ್ ಮಾಡಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದುದು ಬೆಳಕಿಗೆ ಬಂದಿತ್ತು.
ವ್ಯವಸ್ಥಿತ ಜಾಲ:
ವಿದ್ಯಾರ್ಥಿನಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುವ ವ್ಯವಸ್ಥಿತ ಜಾಲ ಇದು. ತಂಡದ ಮಹಿಳೆಯರು(Woman) ಇತರ ಹೆಣ್ಣುಮಕ್ಕಳ ಜತೆ ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಗಾಳ ಹಾಕಿ ಅವರನ್ನು ದಂಧೆಯಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದರು. ನಂದಿಗುಡ್ಡೆಯಲ್ಲಿ ಮಾತ್ರವಲ್ಲದೆ ಬೇರೆ ಕಡೆಗಳಲ್ಲಿಯೂ ಬಾಲಕಿಯರು, ಯುವತಿಯರನ್ನು ಕೃತ್ಯದಲ್ಲಿ ತೊಡಗಿಸಿಕೊಂಡು ಇದೇ ರೀತಿಯ ಕೃತ್ಯಗಳನ್ನು ಆರೋಪಿಗಳು ಮಾಡಿರುವ ಸಾಧ್ಯತೆ ಇದ್ದು ತನಿಖೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು. ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಇದ್ದರು.
ವಿಡಿಯೊ ಮಾಡಿ ಬ್ಲ್ಯಾಕ್‌ಮೇಲ್!
ಪ್ರಕರಣ ನಡೆದ ನಂದಿಗುಡ್ಡೆ ಫ್ಲ್ಯಾಟ್ ನಿವಾಸಿಯಾಗಿರುವ ಪ್ರಮುಖ ಆರೋಪಿ ಶಮೀನಾ, ಸಂತ್ರಸ್ತ ಬಾಲಕಿಯರನ್ನು ಸುಮಾರು ಎರಡು ತಿಂಗಳಿನಿಂದ ಬ್ಲಾಕ್‌ಮೇಲ್ ಮಾಡಿ ಈ ದಂಧೆಗೆ ಬಳಸಿಕೊಳ್ಳುತ್ತಿದ್ದುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿಯರನ್ನು ಸಂಪರ್ಕಿಸಿ ಆಗಾಗ ಗಿಫ್ಟ್, ಹಣ ನೀಡುತ್ತಿದ್ದ ಈಕೆ ಸಹಾಯ ಮಾಡುವ ನೆಪದಲ್ಲಿ ಬಾಲಕಿಯರನ್ನ ಫ್ಲ್ಯಾಟ್‌ಗೆ ಕರೆತರುತ್ತಿದ್ದಳು. ಮೊದಲ ಬಾರಿ ದೌರ್ಜನ್ಯವಾದಾಗ ವಿದ್ಯಾರ್ಥಿನಿ ಪ್ರತಿರೋಧ ತೋರಿಸಿದ್ದಳು. ಆಗ ಕೊಠಡಿಯಲ್ಲಿ ಕ್ಯಾಮರಾ ಅಳವಡಿಸಿ ವೇಶ್ಯಾವಾಟಿಕೆಯ ದೃಶ್ಯ ಸೆರೆಹಿಡಿದಿದ್ದ ಆರೋಪಿ ಶಮೀನಾ, ಅದನ್ನು ಮನೆಯವರಿಗೆ, ಇತರರಿಗೆ ತೋರಿಸುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಮತ್ತೆ ದಂಧೆಯಲ್ಲಿ ತೊಡಗುವಂತೆ ಬಲವಂತ ಮಾಡುತ್ತಿದ್ದಳು. ಬಾಲಕಿ ಅಂಗಲಾಚುತ್ತಿದ್ದರೂ ಆರೋಪಿಗಳು ಸೇರಿ ಆಕೆಯನ್ನು ಹೆದರಿಸಿ ಬಳಸಿಕೊಳ್ಳುತ್ತಿದ್ದರು ಎನ್ನುವ ಅಂಶವೂ ತನಿಖೆಯಲ್ಲಿ ಗೊತ್ತಾಗಿದೆ.
ಪೋಕ್ಸೋ ಸಂತ್ರಸ್ತೆಯೇ ಈಗ ಆರೋಪಿ!
ತನಿಖೆ ನಡೆಸುತ್ತಿರುವ ಪೊಲೀಸರು ಈ ಪ್ರಕರಣದಲ್ಲಿ ಸಂತ್ರಸ್ತೆಯಾಗಿ ಗುರುತಿಸಿಕೊಂಡಿದ್ದ ಒಬ್ಬ ಮಹಿಳೆಯನ್ನು ಆರೋಪಿಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಮಹಿಳೆ ಈ ಹಿಂದೆ ಪೋಕ್ಸೋ ಪ್ರಕರಣವೊಂದರ ಸಂತ್ರಸ್ತೆಯಾಗಿದ್ದಳು ಎನ್ನುವುದೂ ತಿಳಿದುಬಂದಿದೆ. ಈಕೆ ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಮನವೊಲಿಕೆ ಮಾಡುತ್ತಿದ್ದುದಲ್ಲದೆ, ಈ ದಂಧೆಯಲ್ಲೇ ಮುಂದುವರಿಯುವಂತೆ ಒತ್ತಡ ಕೂಡ ಹಾಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ವೇಶ್ಯಾವಾಟಿಕೆ ಅಡ್ಡೆ ಮೇಲೆ ರೈಡ್ : ಐವರು ಅರೆಸ್ಟ್
ಕೌನ್ಸಿಲಿಂಗ್‌ನಲ್ಲಿ ಇನ್ನೊಬ್ಬ ಬಾಲಕಿ
ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯರಲ್ಲಿ ಪ್ರಸ್ತುತ ಒಬ್ಬಳು ವಿದ್ಯಾರ್ಥಿನಿ ಮಾತ್ರ ತನಗಾದ ದೌರ್ಜನ್ಯದ ಬಗ್ಗೆ ತಿಳಿಸಿದ್ದು, ಅದರಂತೆ ಈವರೆಗಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಬಾಲಕಿ ಮೇಲೆ ಆರೋಪಿಗಳು 6 ಬಾರಿ ಲೈಂಗಿಕ ದೌರ್ಜನ್ಯ(Sexual Harassment) ನಡೆಸಿದ್ದರು. ಪ್ರಕರಣದ ಸಂತ್ರಸ್ತೆಯಾಗಿರುವ ಇನ್ನೊಬ್ಬ ಬಾಲಕಿ ಆಘಾತದಲ್ಲಿದ್ದು, ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಆಕೆ ಇನ್ನೂ ಪೊಲೀಸರಿಗೆ ದೂರು ಸಲ್ಲಿಸಿಲ್ಲ. ದೂರು ದಾಖಲಿಸಿದ ಬಳಿಕ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇದೆ, ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹಿಂಜರಿಯದೆ ದೂರು ನೀಡಿ..
ವಿದ್ಯಾರ್ಥಿನಿಯರು ಸೇರಿದಂತೆ ಯಾವುದೇ ಹೆಣ್ಮಕ್ಕಳು ಬಲವಂತದ ವೇಶ್ಯಾವಾಟಿಕೆಗೆ ಒಳಗಾಗಿ ತೊಂದರೆ ಅನುಭವಿಸಿದ್ದರೆ ಅಥವಾ ಈಗ ಅಂತಹ ಸಂಕಷ್ಟಎದುರಿಸುತ್ತಿದ್ದರೆ ಭಯವಿಲ್ಲದೆ ಪೊಲೀಸರಿಗೆ ಮಾಹಿತಿ ನೀಡಿ. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿರಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.