* ಐರ್ಲೆಂಡ್ ಪ್ರವಾಸಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಕೋವಿಡ್ ಶಾಕ್* ಕಿವೀಸ್ ಟಿ20 ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್‌ಗೆ ಕೋವಿಡ್ ದೃಢ* ಐರ್ಲೆಂಡ್ ಪ್ರವಾಸದಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನಾಡಲಿರುವ ಕಿವೀಸ್

ಆಕ್ಲೆಂಡ್(ಜು.03): ಮುಂಬರುವ ಜುಲೈ 10ರಿಂದ ಐರ್ಲೆಂಡ್ ವಿರುದ್ದ ಆರಂಭವಾಗಲಿರುವ ಟಿ20 ಸರಣಿಗೂ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ಪಾಳಯದಲ್ಲಿ ಆಘಾತ ಎದುರಾಗಿದ್ದು, ಕಿವೀಸ್ ಟಿ20 ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್‌ಗೆ ಕೋವಿಡ್ 19 ಸೋಂಕು (COVID 19) ತಗುಲಿರುವುದು ದೃಢಪಟ್ಟಿದೆ. ಭಾನುವಾರವಾದ ಇಂದು ನ್ಯೂಜಿಲೆಂಡ್ ತಂಡದೊಂದಿಗೆ ಮಿಚೆಲ್ ಸ್ಯಾಂಟ್ನರ್‌, ಐರ್ಲೆಂಡ್‌ಗೆ ವಿಮಾನವೇರಬೇಕಿತ್ತು. ಆದರೆ ಇದೀಗ ಸ್ಯಾಂಟ್ನರ್ ಕೊಂಚ ತಡವಾಗಿ ಐರ್ಲೆಂಡ್‌ನತ್ತ ಮುಖ ಮಾಡಲಿದ್ದಾರೆ ಎಂದು ವರದಿಯಾಗಿದೆ. ನ್ಯೂಜಿಲೆಂಡ್ ತಂಡವು ಐರ್ಲೆಂಡ್ ಪ್ರವಾಸದಲ್ಲಿ ಮೊದಲಿಗೆ ಏಕದಿನ ಪಂದ್ಯಗಳ ಸರಣಿಯನ್ನಾಡಲಿದ್ದು, ಇದಾದ ಬಳಿಕ ಟಿ20 ಸರಣಿಯನ್ನಾಡಲಿದೆ.

ಇನ್ನು ಐರ್ಲೆಂಡ್ ಪ್ರವಾಸಕ್ಕೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದ (New Zealand Cricket Team) ಹೆಡ್ ಕೋಚ್ ಆಗಿ ನೇಮಕವಾಗಿರುವ ಶೇನ್‌ ಜೊರ್ಗೆನ್‌ಸನ್‌, ಮಿಚೆಲ್ ಸ್ಯಾಂಟ್ನರ್‌ ಕುರಿತಾಗಿ ನಾವು ಧಾವಂತ ಮಾಡುವುದಿಲ್ಲ. ಅವರು ಈ ಸರಣಿಯಲ್ಲಿ ಪಾಲ್ಗೊಳ್ಳುವುದರ ಬಗ್ಗೆ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಅವರು ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾದ ಬಳಿಕವಷ್ಟೇ ಡಬ್ಲಿನ್‌ಗೆ ಬಂದಿಳಿಯಲಿದ್ದಾರೆ ಎಂದು ಹೇಳಿದ್ದಾರೆ.

ಸದ್ಯ ಮಿಚೆಲ್ ಸ್ಯಾಂಟ್ನರ್ (Mitchell Santner) ಅವರ ಆರೋಗ್ಯ ಸ್ಥಿರವಾಗಿದೆ. ಅವರು ತಂಡ ಕೂಡಿಕೊಳ್ಳುವಂತೆ ಮಾಡಲು ಆದ್ಯತೆ ನೀಡಲಾಗುತ್ತಿದೆ. ಹಾಗಂದ ಮಾತ್ರಕ್ಕೆ ನಾವು ಧಾವಂತ ಮಾಡುವುದಿಲ್ಲ. ಈ ವಾರಾಂತ್ಯದ ವೇಳೆಗೆ ಮತ್ತೊಮ್ಮೆ ಅವರ ಆರೋಗ್ಯದ ಟೆಸ್ಟ್‌ ಮಾಡಲಾಗುವುದು. ಆ ಸಂದರ್ಭದಲ್ಲಿ ಅವರು ಆಡಲು ಫಿಟ್ ಆಗಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಅಳೆಯಲಾಗುತ್ತದೆ ಎಂದು ಹೆಡ್ ಕೋಚ್ ಶೇನ್‌ ಜೊರ್ಗೆನ್‌ಸನ್ ಹೇಳಿದ್ದಾರೆ.

ಭಾರತ-ಕಿವೀಸ್ ಸರಣಿಗೆ ವೇಳಾಪಟ್ಟಿ ಪ್ರಕಟ, ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾಗೆ ಅಗ್ನಿಪರೀಕ್ಷೆ..!

ನಾವು ಮೂರು ಪ್ರವಾಸದಲ್ಲಿ ಒಟ್ಟು 11 ಪಂದ್ಯಗಳನ್ನು ಆಡಬೇಕಿದೆ. ಐರ್ಲೆಂಡ್ ಪ್ರವಾಸ ಮುಕ್ತಾಯದ ಬಳಿಕ ನಾವು ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಲಿದ್ದೇವೆ. ಹೀಗಾಗಿ ಮಿಚೆಲ್ ಶೀಘ್ರವೇ ಗುಣವಾಗಲಿ ಎಂದು ಆತುರ ಪಡುವುದಿಲ್ಲ ಎಂದ ಹೆಡ್ ಕೋಚ್ ಶೇನ್‌ ಜೊರ್ಗೆನ್‌ಸನ್ ಹೇಳಿದ್ದಾರೆ.

ಐರ್ಲೆಂಡ್ ಎದುರಿನ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಹೀಗಿದೆ

ಟಾಮ್ ಲೇಥಮ್(ನಾಯಕ), ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಡೇನ್ ಕ್ಲೆವರ್, ಜೇಕೊಬ್ ಡಫ್ಫಿ, ಲಾಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಆಡಂ ಮಿಲ್ನೆ, ಹೆನ್ರಿ ನಿಕೋಲ್ಸ್, ಗ್ಲೆನ್ ಫಿಲಿಫ್, ಮಿಚೆಲ್ ಸ್ಯಾಂಟ್ನರ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಬ್ಲೈರ್ ಟಿಕ್ನರ್, ವಿಲ್ ಯಂಗ್.

ಐರ್ಲೆಂಡ್ ಎದುರಿನ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಹೀಗಿದೆ:
ಮಿಚೆಲ್ ಸ್ಯಾಂಟ್ನರ್(ನಾಯಕ), ಫಿನ್ ಅಲೆನ್, ಮಿಚೆಲ್ ಬ್ರಾಸ್‌ವೆಲ್, ಮಾರ್ಕ್‌ ಚಾಂಪ್ಮನ್, ಡೇನ್ ಕ್ಲೆವರ್, ಲಾಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಆಡಂ ಮಿಲ್ನೆ, ಡೇರಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಫ್ಸ್, ಮಿಚೆಲ್ ರಿಪ್ಪನ್, ಬೆನ್ ಸೀರ್ಸ್, ಇಶ್ ಸೋಧಿ, ಬ್ಲೈರ್ ಟಿಕ್ನರ್.