ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆರಂಭಿಕ ದಿನ ಟಾಮ್ ಲಾಥಮ್‌ಗೆ ಮರೆಯಲಾಗದ ದಿನವಾಗಿ ಉಳಿಯಲಿದೆ. ಶೂನ್ಯಕ್ಕೆ ಔಟಾಗಿ ಸೆಹ್ವಾಗ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ವೆಲ್ಲಿಂಗ್ಟನ್(ನ.19): ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್‌‌ಗೆ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಆರಂಭಿಕ ದಿನ ಮರೆಯಲಾಗದ ದಿನವಾಗಿ ಉಳಿಯಲಿದೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಎಸೆದ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಟಾಮ್ ಲಾಥಮ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಮೊದಲ ಓವರ್‌ನಲ್ಲೇ ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡಿದ್ದರಿಂದ ಲಾಥಮ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಬ್ಯಾಟರ್ ಆಗಿ 15ನೇ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಮೂಲಕ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಬ್ಯಾಟರ್ ಆಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಕ್ರೈಗ್ ಬ್ರಾಥ್‌ವೇಟ್ ಅಗ್ರಸ್ಥಾನದಲ್ಲಿದ್ದಾರೆ. ಅವರು 19 ಬಾರಿ ಡಕ್‌ಔಟ್ ಆಗಿದ್ದಾರೆ. ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಅಥರ್ಟನ್ 17 ಬಾರಿ ಶೂನ್ಯಕ್ಕೆ ಔಟಾಗಿ ಎರಡನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಮಾರ್ವನ್ ಅಟಪಟ್ಟು 16 ಡಕ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಟಾಮ್ ಲಾಥಮ್ ಮತ್ತು ವೀರೇಂದ್ರ ಸೆಹ್ವಾಗ್ ತಲಾ 15 ಡಕ್‌ಗಳೊಂದಿಗೆ ಜಂಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರರಾಗಿ ಅತಿ ಹೆಚ್ಚು ಡಕ್‌ಔಟ್ ಆದವರು

ಕ್ರೈಗ್ ಬ್ರಾಥ್‌ವೇಟ್ – 19

ಮೈಕ್ ಅಥರ್ಟನ್ – 17

ಮರ್ವನ್ ಅಟಪಟ್ಟು – 16

ಟಾಮ್ ಲಾಥಮ್ – 15

ವೀರೇಂದ್ರ ಸೆಹ್ವಾಗ್ – 15

ಮೊದಲ ಸೆಷನ್‌ನಲ್ಲೇ ಭಾರತದ ನಾಲ್ಕು ವಿಕೆಟ್ ಬೇಟೆ

ಮೊದಲ ಟೆಸ್ಟ್ ಪಂದ್ಯದ ಆರಂಭದಲ್ಲೇ ಭಾರತ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಮೊದಲ ಸೆಷನ್‌ನಲ್ಲೇ ನಾಲ್ಕು ವಿಕೆಟ್ ಕಬಳಿಸಿದ ಭಾರತ, ಲಂಚ್ ವಿರಾಮದ ವೇಳೆಗೆ ನ್ಯೂಜಿಲೆಂಡ್ ತಂಡವನ್ನು 60 ರನ್‌ಗಳಿಗೆ 4 ವಿಕೆಟ್ ಎಂಬ ಸಂಕಷ್ಟಕ್ಕೆ ತಳ್ಳಿತು.

ಭಾರತದ ಪರ ಜಸ್‌ಪ್ರೀತ್ ಬುಮ್ರಾ ಎರಡು ವಿಕೆಟ್ ಕಬಳಿಸಿದರು. ಆರಂಭಿಕ ಆಟಗಾರ ಟಾಮ್ ಲಾಥಮ್‌ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ ಬುಮ್ರಾ, ಬಳಿಕ ಡ್ಯಾರಿಲ್ ಮಿಚೆಲ್ ಅವರನ್ನು ಕೇವಲ ಒಂದು ರನ್‌ಗೆ ಪೆವಿಲಿಯನ್‌ಗೆ ಕಳುಹಿಸಿದರು. ಅನ್ಶುಲ್ ಕಾಂಬೋಜ್ ಮತ್ತು ಆಕಾಶ್ ದೀಪ್ ತಲಾ ಒಂದು ವಿಕೆಟ್ ಪಡೆದರು. ದೇವನ್ ಕಾನ್ವೆ (4) ಮತ್ತು ರಚಿನ್ ರವೀಂದ್ರ (15) ವಿಕೆಟ್ ಕಳೆದುಕೊಂಡರು.

ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲ ಓವರ್‌ನಲ್ಲೇ ಬುಮ್ರಾ ಲಾಥಮ್ ಅವರನ್ನು ಔಟ್ ಮಾಡಿದರು. ಬಳಿಕ ಕಾಂಬೋಜ್ ದೇವನ್ ಕಾನ್ವೆ ವಿಕೆಟ್ ಪಡೆದರು. ಇದರಿಂದ ನ್ಯೂಜಿಲೆಂಡ್ 12 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಆ ಬಳಿಕ ಹೆನ್ರಿ ನಿಕೋಲ್ಸ್ ಮತ್ತು ರಚಿನ್ ರವೀಂದ್ರ ತಂಡದ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಈ ಜೋಡಿ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತವನ್ನು 50 ರನ್‌ಗಳ ಗಡಿ ದಾಟಿಸಿತು. 18.2 ಓವರ್‌ಗಳಲ್ಲಿ ನ್ಯೂಜಿಲೆಂಡ್ 50 ರನ್ ಪೂರೈಸಿತು.

ಆದರೆ, ಮುಂದಿನ ಓವರ್‌ನಲ್ಲೇ ಆಕಾಶ್ ದೀಪ್ ಈ ಜೋಡಿಯನ್ನು ಬೇರ್ಪಡಿಸಿದರು. ರಚಿನ್ ರವೀಂದ್ರ ಅವರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು. ಲಂಚ್ ವಿರಾಮಕ್ಕೂ ಸ್ವಲ್ಪ ಮೊದಲು ಬುಮ್ರಾ ಮತ್ತೊಂದು ಆಘಾತ ನೀಡಿದರು. ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಡ್ಯಾರಿಲ್ ಮಿಚೆಲ್ ಅವರನ್ನು ಔಟ್ ಮಾಡಿದರು.

ನಿಕೋಲ್ಸ್-ಫಿಲಿಫ್ಸ್ ಜುಗಲ್ಬಂದಿ: 

ಒಂದು ಹಂತದಲ್ಲಿ ಕೇವಲ 70 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ನ್ಯೂಜಿಲೆಂಡ್ ತಂಡಕ್ಕೆ ಆರನೇ ವಿಕೆಟ್‌ಗೆ ಹೆನ್ರಿ ನಿಕೋಲ್ಸ್ ಹಾಗೂ ಗ್ಲೆನ್ ಫಿಲಿಫ್ಸ್ ಆಸರೆಯಾಗಿದ್ದಾರೆ. ಈ ಜೋಡಿ ಆರನೇ ವಿಕೆಟ್‌ಗೆ ಸದ್ಯ 156 ರನ್‌ಗಳ ಜತೆಯಾಟವಾಡಿದೆ. ನಿಕೋಲ್ಸ್ ಅಜೇಯ 103 ರನ್ ಬಾರಿಸಿದರೆ, ಗ್ಲೆನ್ ಫಿಲಿಫ್ಸ್ ಮತ್ತೊಂದು ತುದಿಯಲ್ಲಿ 87 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 75 ಓವರ್ ಅಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು 5 ವಿಕೆಟ್ ನಷ್ಟಕ್ಕೆ 226 ರನ್ ಕಲೆ ಹಾಕಿದೆ.