Asianet Suvarna News Asianet Suvarna News

ಕ್ಯಾನ್ಸರ್ ಮಣಿಸಿದ ವೀರ ಯುವರಾಜ್‌ ಸಿಂಗ್‌ಗಿಂದು 41ನೇ ಹುಟ್ಟುಹಬ್ಬದ ಸಡಗರ..!

41ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್
ಟಿ20 ವಿಶ್ವಕಪ್ ಹಾಗೂ ಏಕದಿನ ವಿಶ್ವಕಪ್ ಗೆಲುವಿನ ರೂವಾರಿ ಯುವಿ
ಕ್ಯಾನ್ಸರ್ ಮಣಿಸಿ ಲಕ್ಷಾಂತರ ಮಂದಿಗೆ ಸ್ಪೂರ್ತಿಯಾದ ಪಂಜಾಬ್ ಪುತ್ತರ್

Yuvraj Singh turns 41: A look at his magnificent feats
Author
First Published Dec 12, 2022, 1:16 PM IST

ಬೆಂಗಳೂರು(ಡಿ.12): ಭಾರತ ಕ್ರಿಕೆಟ್ ಕಂಡ ಅತ್ಯದ್ಭುತ ಆಲ್ರೌಂಡರ್, ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಆಧಾರಸ್ತಂಭ, ಚುರುಕಿನ ಕ್ಷೇತ್ರರಕ್ಷಕ, ವಿಶ್ವಕಪ್ ಹೀರೋ, ಮಾರಣಾಂತಿಕ ಕ್ಯಾನ್ಸರ್ ಮಣಿಸಿದ ಛಲದಂಕ ಮಲ್ಲ, 'ಯು ವಿ ಕ್ಯಾನ್‌' ಎನ್‌ಜಿಒ ಮೂಲಕ ಕ್ಯಾನ್ಸರ್ ವಿರುದ್ದ ಹೋರಾಡುತ್ತಿರುವ ಮಾಜಿ ಕ್ರಿಕೆಟಿಗ ಯವರಾಜ್ ಸಿಂಗ್ ಇಂದು 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೇಶದಾದ್ಯಂತ ಮಾತ್ರವಲ್ಲದೇ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಯುವರಾಜ್‌ ಸಿಂಗ್ ಅವರಿಗೆ ಹುಟ್ಟಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿವೆ. 

ಒಂದೂವರೆ ದಶಕಗಳ ಕಾಲ ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ರಂಜಿಸಿದ್ದ ಯುವರಾಜ್ ಸಿಂಗ್, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್‌ ಭಾರತ ಗೆಲ್ಲುವಲ್ಲಿ ಮಹತ್ತರ ಪಾತ್ರವಹಿಸಿದ್ದರು. 2007ರ ಟಿ20 ವಿಶ್ವಕಪ್‌ನಲ್ಲಿ 6 ಬಾಲ್‌ಗೆ 6 ಸಿಕ್ಸರ್ ಸಿಡಿಸುವ ಮೂಲಕ ಯುವಿ, ಸಿಕ್ಸರ್ ಕಿಂಗ್ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದರು. ಇದೆಲ್ಲದರಾಚೆಗೆ ಮಾರಾಣಾಂತಿಕ ಕ್ಯಾನ್ಸರ್ ವಿರುದ್ದ ಹೋರಾಡಿ ಗೆಲುವಿನ ನಗೆ ಬೀರುವ ಮೂಲಕ ಲಕ್ಷಾಂತರ ಕ್ಯಾನ್ಸರ್ ಪೀಡಿತರ ಪಾಲಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. 

ಯುವರಾಜ್ ಸಿಂಗ್ ಎನ್ನುವ ದಿಟ್ಟ ಹೋರಾಟಗಾರನ ಹೆಜ್ಜೆಗುರುತು ಮೆಲುಕು ಹಾಕೋಣ ಬನ್ನಿ:

ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿನ ಪಕ್ಷಿನೋಟ:

2000ನೇ ಇಸವಿಯಲ್ಲಿ ಕೀನ್ಯಾ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಯುವಿ, ಸುಮಾರು 17 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದರು. ಭಾರತ ಪರ 304 ಏಕದಿನ 40 ಟೆಸ್ಟ್ ಹಾಗೂ 58 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 8,701, 1900 ಹಾಗೂ 1,177 ರನ್‌ ಬಾರಿಸಿದ್ದರು. ಇದಷ್ಟೇ ಬೌಲಿಂಗ್‌ನಲ್ಲಿ 148 ವಿಕೆಟ್ ಕಬಳಿಸಿ ಮಿಂಚಿದ್ದರು.

ಟಿ20 ವಿಶ್ವಕಪ್ ಗೆಲುವಿನ ರೂವಾರಿ ಯುವಿ:

2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಯುವಿ, ಇಂಗ್ಲೆಂಡ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್ ಒಂದೇ ಓವರ್‌ನಲ್ಲಿ 6 ಎಸೆತಗಳಲ್ಲಿ 6 ಸಿಡಿಸಿ ಅಬ್ಬರಿಸಿದ್ದರು. ಇದಷ್ಟೇ ಅಲ್ಲದೇ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಇಂದಿಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಸಿಡಿಸಿದ ದಾಖಲೆ ಯುವರಾಜ್ ಸಿಂಗ್ ಹೆಸರಿನಲ್ಲಿದೆ.

2011ರ ಏಕದಿನ ವಿಶ್ವಕಪ್‌ ಗೆದ್ದ ಕೆಚ್ಚೆದೆಯ ಬ್ಯಾಟರ್:

2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಮಹತ್ತರ ಪಾತ್ರವಹಿಸಿದ್ದರು. ಯುವಿ ಬ್ಯಾಟಿಂಗ್‌ನಲ್ಲಿ 300+ ರನ್ ಹಾಗೂ ಬೌಲಿಂಗ್‌ನಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. ಇದಷ್ಟೇ ಅಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಂದ್ಯವೊಂದರಲ್ಲಿ 50+ ರನ್ ಹಾಗೂ 5+ ವಿಕೆಟ್ ಕಬಳಿಸಿದ ಮೊದಲ ಆಟಗಾರ ಎನ್ನುವ ದಾಖಲೆಗೂ ಯುವಿ ಪಾತ್ರರಾಗಿದ್ದರು. 

'ಸೂಪರ್ ಓವರ್‌' ಗೆದ್ದು ಚಾಂಪಿಯನ್ ಆಸ್ಟ್ರೇಲಿಯಾದ ಸೊಲ್ಲಡಗಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ..!

ಕ್ಯಾನ್ಸರ್‌ ಗೆದ್ದ ಛಲದಂಕ ಮಲ್ಲ ಯುವಿ:

ಯುವರಾಜ್ ಸಿಂಗ್, 2011ರಲ್ಲಿ ಏಕದಿನ ವಿಶ್ವಕಪ್ ಆಡುವಾಗಲೇ ತಮಗೆ ಕ್ಯಾನ್ಸರ್ ತಗುಲಿದ್ದು ಪತ್ತೆಯಾಗಿತ್ತು. ಹೀಗಿದ್ದೂ ನೋವಿನ ನಡುವೆಯೇ ಛಲಬಿಡದೇ ಹೋರಾಡಿ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಇದಾದ ಬಳಿಕ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಯುವಿ ಒಂಬತ್ತು ವಾರಗಳ ಕಾಲ ಕಿಮೋಥೆರಫಿಗೆ ಒಳಗಾಗಿ ಕ್ಯಾನ್ಸರ್‌ ಮಣಿಸಿ ಮೈದಾನಕ್ಕೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

Follow Us:
Download App:
  • android
  • ios