ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಕ್ರಿಕೆಟಿಗ ಯುವರಾಜ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಹೆಸರಿಸಿದ್ದಾರೆ. ಯುವಿ ಕನಸಿನ ತಂಡದಲ್ಲಿ ಯಾರಿಗೆಲ್ಲ ಸ್ಥಾನ ಸಿಕ್ಕಿದೆ ನೋಡಿ.

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ಇದೀಗ, ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ವರ್ಲ್ಡ್‌ ಚಾಂಪಿಯನ್‌ಶಿಪ್ ಆಫ್ ಲೀಗ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ನೇತೃತ್ವದ ಇಂಡಿಯಾ ಚಾಂಪಿಯನ್ಸ್ ತಂಡವು ಬದ್ದ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಬೆನ್ನಲ್ಲೆ ಯುವಿ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡವನ್ನು ಹೆಸರಿಸಿದ್ದಾರೆ. ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿರುವ ಯುವರಾಜ್ ಸಿಂಗ್ ಸ್ವತಃ ತಮ್ಮನ್ನು 11ರ ಬಳಗದಿಂದ ಹೊರಗಿಟ್ಟಿದ್ದು, 12ನೇ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನು ಯುವರಾಜ್ ಸಿಂಗ್, ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಮೂವರು ಭಾರತೀಯರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಒಂದು ಕಾಲದಲ್ಲಿ ಅತ್ಯುತ್ತಮ ಗೆಳೆಯರಾಗಿ ಗುರುತಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿಯನ್ನೇ ಯುವಿ ತಮ್ಮ ಸಾರ್ವಕಾಲಿಕ ಶ್ರೇಷ್ಠ ತಂಡದಲ್ಲಿ ಕೈಬಿಟ್ಟಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಭಾರತ vs ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ..! ಇಲ್ಲಿದೆ ಹೊಸ ಅಪ್‌ಡೇಟ್

ಯುವರಾಜ್ ಸಿಂಗ್ ತಮ್ಮ ಕನಸಿನ ತಂಡದ ಆರಂಭಿಕರಾಗಿ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್ ಹಾಗೂ ರಿಕಿ ಪಾಂಟಿಂಗ್ ಅವರನ್ನು ನೇಮಕ ಮಾಡಿಕೊಂಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಗೆ ಯುವಿ ಸ್ಥಾನ ನೀಡಿದ್ದಾರೆ. ಐದನೇ ಕ್ರಮಾಂಕದಲ್ಲಿ ಮಿಸ್ಟರ್ 360 ಖ್ಯಾತಿಯ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ಮಣೆ ಹಾಕಿದ್ದಾರೆ. ಇನ್ನು ಆರನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್‌ಗೆ ಸ್ಥಾನ ನೀಡಿದ್ದಾರೆ.

👑 pic.twitter.com/yb88JMy9Jy

— Dev 🇮🇳 (@time__square) July 13, 2024

ಇನ್ನು ಏಳನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಸ್ಪಿನ್ ದಂತಕಥೆ ಶೇನ್ ವಾರ್ನ್‌ಗೆ ಸ್ಥಾನ ನೀಡಿದ್ದರೇ, 9ನೇ ಕ್ರಮಾಂಕದಲ್ಲಿ ಲಂಕಾ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರುಳೀಧರನ್‌ಗೆ ಮಣೆ ಹಾಕಿದ್ದಾರೆ. ಇನ್ನು 9ನೇ ಕ್ರಮಾಂಕದಲ್ಲಿ ಗ್ಲೆನ್ ಮೆಗ್ರಾಥ್ ಹಾಗೂ 10ನೇ ಕ್ರಮಾಂಕದಲ್ಲಿ ಪಾಕಿಸ್ತಾನದ ಕ್ರಿಕೆಟ್ ಲೆಜೆಂಡ್ ವಾಸೀಂ ಅಕ್ರಂ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಯುವರಾಜ್ ಸಿಂಗ್ ಕನಸಿನ ಶ್ರೇಷ್ಠ ತಂಡದಲ್ಲಿ ಸ್ಥಾನ ಪಡೆದ ಏಕೈಕ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್‌ಗೆ ಮಣೆ ಹಾಕಿದ್ದಾರೆ. ಇನ್ನು 12ನೇ ಆಟಗಾರನಾಗಿ ತಮ್ಮನ್ನೇ ಹೆಸರಿಸಿಕೊಂಡಿದ್ದಾರೆ.

ಜಿಂಬಾಬ್ವೆ ಬೌಲರ್‌ಗಳನ್ನು ಚೆಂಡಾಡಿದ ಟೀಂ ಇಂಡಿಯಾ; 10 ವಿಕೆಟ್ ಜಯ ಸಾಧಿಸಿ ಸರಣಿ ಗೆದ್ದ ಭಾರತ

ಕೆಣಕಿದವನಿಗೆ ಮಣೆ, ಸ್ನೇಹಿತನಿಗೆ ಗೇಟ್‌ಪಾಸ್ ಕೊಟ್ಟ ಯುವಿ

ಹೌದು, ನೀವು ನಿಜವಾದ ಕ್ರಿಕೆಟ್ ಅಭಿಮಾನಿಗಳಾಗಿದ್ದರೇ, ಯುವರಾಜ್ ಸಿಂಗ್ ಹಾಗೂ ಇಂಗ್ಲೆಂಡ್ ಆಲ್ರೌಂಡರ್ ಆಂಡ್ರ್ಯೂ ಫ್ಲಿಂಟಾಫ್ ನಡುವಿನ ಮಾತಿನ ಚಕಮಕಿಯನ್ನು ಮರೆಯಲು ಸಾಧ್ಯವೇ ಇಲ್ಲ, 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವಿಯನ್ನು ಫ್ಲಿಂಟಾಫ್ ಕೆಣಕಿದ್ದರು. ಇದರಿಂದ ರೊಚ್ಚಿಗೆದ್ದ ಯುವರಾಜ್ ಸಿಂಗ್ 19ನೇ ಓವರ್‌ನಲ್ಲಿ ಸ್ಟುವರ್ಟ್‌ ಬ್ರಾಡ್ ಎಸೆದ ಆರು ಎಸೆತಗಳನ್ನು ಸಿಕ್ಸರ್‌ಗಟ್ಟಿ ತಮ್ಮ ಸಿಟ್ಟು ಹೊರಹಾಕಿದ್ದರು. ಇದಷ್ಟೇ ಅಲ್ಲದೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯುವಿ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದರು.

ಇನ್ನೊಂದೆಡೆ ಯುವರಾಜ್ ಸಿಂಗ್ ಹಾಗೂ ಧೋನಿ ನಡುವೆ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಮೈದಾನದಲ್ಲಿ ಹಾಗೂ ಮೈದಾನದಾಚೆಗೆ ಒಳ್ಳೆಯ ಗೆಳೆತನವಿತ್ತು. ಈ ಜೋಡಿ ಹಲವಾರು ಪಂದ್ಯಗಳಲ್ಲಿ ಜತೆಯಾಗಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಧೋನಿ ನಾಯಕತ್ವದಲ್ಲಿ ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟ್ರೋಫಿ ಜಯಿಸಿದ್ದರು. ಹೀಗಿದ್ದೂ ಸ್ನೇಹಿತ ಧೋನಿಯನ್ನು ತಮ್ಮ ಕನಸಿನ ತಂಡದಿಂದ ಕೈಬಿಟ್ಟು, ಕೆಣಕಿದ ಆಂಡ್ರ್ಯೂ ಫ್ಲಿಂಟಾಫ್‌ಗೆ ಯುವಿ ಮಣೆಹಾಕಿದ್ದೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.

ಹೀಗಿದೆ ನೋಡಿ ಯುವರಾಜ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ತಂಡ:

ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಆಡಂ ಗಿಲ್‌ಕ್ರಿಸ್ಟ್(ವಿಕೆಟ್ ಕೀಪರ್), ಆಂಡ್ರ್ಯೂ ಫ್ಲಿಂಟಾಫ್, ಶೇನ್ ವಾರ್ನ್, ಮುತ್ತಯ್ಯ ಮುರುಳೀಧರನ್, ಗ್ಲೆನ್ ಮೆಗ್ರಾಥ್, ವಾಸೀಂ ಅಕ್ರಂ, ಯುವರಾಜ್ ಸಿಂಗ್(12ನೇ ಆಟಗಾರ)