ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್‌ಗೆ 457 ರನ್‌ಗಳ ಬೃಹತ್ ಗುರಿ ನೀಡಿದೆ. ಯಸ್ತಿಕಾ ಭಾಟಿಯಾ ಅವರ ಚೊಚ್ಚಲ ಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.
ಲಂಡನ್: ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಗೆಲುವಿನತ್ತ ದಾಪುಗಾಲಿಟ್ಟಿದೆ. ಈ ಕ್ರೀಡಾಂಗಣದಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ಎನಿಸಿಕೊಂಡಿರುವ ಈ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ಇಂಗ್ಲೆಂಡ್ ಗೆಲುವಿಗೆ 457 ರನ್ ಗುರಿ ನೀಡಿದೆ. ಗುರಿ ಬೆನ್ನತ್ತಲು ಇಳಿದ ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಗಿದೆ.
115 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿ 2ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 154 ರನ್ ಗಳಿಸಿದ್ದ ಭಾರತ ತಂಡ 3ನೇ ದಿನವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಯಸ್ತಿಕಾ ಭಾಟಿಯಾ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅವರು 158 ಎಸೆತಗಳಲ್ಲಿ 113 ರನ್ ಗಳಿಸಿದರು. ಸ್ಮೃತಿ ಮಂಧನಾ(70) ಹಿಂದಿನ ದಿನದ ಮೊತ್ತಕ್ಕೆ ಕೇವಲ 1 ರನ್ ಸೇರಿಸಿ ಔಟಾದರು. ಜೆಮಿಮಾ ರೋಡ್ರಿಗ್ಸ್(3), ನಾಯಕಿ ಹರ್ಮನ್‌ಪ್ರೀತ್ ಕೌರ್(16), ದೀಪ್ತಿ ಶರ್ಮಾ(10) ಮಿಂಚಲಿಲ್ಲ. ಕೊನೆಯಲ್ಲಿ ಸ್ಫೋಟಕ ಆಟವಾಡಿದ ರಿಚಾ ಘೋಷ್ 52 ಎಸೆತಗಳಲ್ಲಿ ಔಟಾಗದೆ 50 ರನ್ ಸಿಡಿಸಿದರು. ತಂಡದ 7 ವಿಕೆಟ್ ನಷ್ಟದಲ್ಲಿ 341 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.
457 ರನ್ ಗುರಿ:
ಮಹಿಳಾ ಟೆಸ್ಟ್ ಪಂದ್ಯ 4 ದಿನ ಮಾತ್ರ ಇರುವುದರಿಂದ ಮಂಗಳವಾರ ಕೊನೆ ದಿನ. ಹೀಗಾಗಿ ಭಾರತ ಸೋಮವಾರ 2ನೇ ಅವಧಿಯಲ್ಲೇ ಡಿಕ್ಲೇರ್ ಘೋಷಿಸಿತು. 457 ರನ್‌ಗಳ ಬೃಹತ್ ಗುರಿ ಬೆನ್ನತ್ತಲು ಆರಂಭಿಸಿದ ಇಂಗ್ಲೆಂಡ್ 100 ರನ್ ಗಳಿಸುವ ಮೊದಲೇ ಪ್ರಮುಖ ಐವರ ವಿಕೆಟ್ ಕಳೆದುಕೊಂಡಿದೆ. ಮಾಯಾ ಬೌಷೀರ್ 23 ರನ್ ಗಳಿಸಿದರೆ, ಟ್ಯಾಮಿ ಬ್ಯೂಮೊಂಟ್ 2, ಕೊನೆ ಪಂದ್ಯವಾಡುತ್ತಿರುವ ಹೀಥರ್ ನೈಟ್ 13 ರನ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಆಸರೆಯಾಗಿದ್ದ ನಾಯಕಿ ಸ್ಕೀವರ್ ಬ್ರಂಟ್(11) ಕೂಡಾ ವಿಫಲರಾದರು. ಅಲೈಸಿ ಕ್ಯಾಪ್ಸಿ 21 ರನ್ ಗಳಿಸಿ ನಿರ್ಗಮಿಸಿದರು. ಸದ್ಯ ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ತಂಡವು 6 ವಿಕೆಟ್ ಕಳೆದುಕೊಂಡು 130 ರನ್ ಬಾರಿಸಿದ್ದು, ಇನ್ನೂ 327 ರನ್‌ಗಳ ಹಿನ್ನಡೆಯಲ್ಲಿದೆ.
2ನೇ ಇನ್ನಿಂಗ್ಸ್‌ನಲ್ಲಿ ಭಾರತ 300+ ರನ್: ಇದು ಎರಡನೇ ಬಾರಿ
ಭಾರತ ಮಹಿಳಾ ತಂಡ ಟೆಸ್ಟ್‌ನಲ್ಲಿ 2ನೇ ಬಾರಿ 2ನೇ ಇನ್ನಿಂಗ್ಸ್‌ನಲ್ಲಿ 300ಕ್ಕೂ ಹೆಚ್ಚು ರನ್ ಕಲೆಹಾಕಿತು. ಈ ಹಿಂದೆ 2021ರಲ್ಲಿ ಇಂಗ್ಲೆಂಡ್ ವಿರುದ್ಧವೇ ಬ್ರಿಸ್ಟೋಲ್ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 344 ರನ್ ಗಳಿಸಿತ್ತು.
ಪಂದ್ಯದಲ್ಲಿ 640 ರನ್: ಭಾರತದ 2ನೇ ಗರಿಷ್ಠ
ಭಾರತ ತಂಡ ಈ ಪಂದ್ಯದಲ್ಲಿ ಒಟ್ಟು(2 ಇನ್ನಿಂಗ್ಸ್ ಸೇರಿ) 626 ರನ್ ಗಳಿಸಿತು. ಇದು ತಂಡದ ಗರಿಷ್ಠ ಸ್ಕೋರ್. 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತ 2 ಇನ್ನಿಂಗ್ಸ್‌ನಲ್ಲಿ ಒಟ್ಟಾಗಿ 640 ರನ್ ಕಲೆಹಾಕಿದ್ದು ಈಗಲೂ ದಾಖಲೆ. ಇಂಗ್ಲೆಂಡ್ ವಿರುದ್ಧ 2023ರಲ್ಲಿ ಮುಂಬೈ ಟೆಸ್ಟ್‌ನಲ್ಲಿ ಭಾರತ 614 ರನ್ ಗಳಿಸಿತ್ತು.
ಯಸ್ತಿಕಾ ಚೊಚ್ಚಲ ಶತಕ
ಭಾರತದ ಪರ 4ನೇ ಟೆಸ್ಟ್ ಪಂದ್ಯ ಆಡುತ್ತಿರುವ ಯಸ್ತಿಕಾ ಭಾಟಿಯಾ ತಮ್ಮ ಚೊಚ್ಚಲ ಶತಕ ಪೂರ್ಣಗೊಳಿಸಿದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೇ ಅವರ ಮೊದಲ ಶತಕ. ಅವರು ಭಾರತ ಪರ 3 ಅಥವಾ 4ನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು.


