ಮ್ಯಾಂಚೆಸ್ಟರ್(ಆ.08): ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ತಂಡ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೂರನೇ ದಿನದಾಟದಂತ್ಯದ ವೇಳೆಗೆ ಮತ್ತಷ್ಟು ಬಿಗಿ ಹಿಡಿತ ಸಾಧಿಸಿದೆ. ಮೂರನೇ ದಿನದಾಟದಂತ್ಯದ ವೇಳೆಗೆ ಪಾಕಿಸ್ತಾನ 8 ವಿಕೆಟ್ ಕಳೆದುಕೊಂಡು 137 ರನ್ ಬಾರಿಸಿದ್ದು ಒಟ್ಟಾರೆ 244 ರನ್‌ ಗಳಿಸಿದೆ.

ಮೊದಲ ಇನಿಂಗ್ಸ್‌ನಲ್ಲಿ 107 ರನ್‌ಗಳ ಮುನ್ನಡೆ ಪಡೆದ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕುವ ಪ್ರಯತ್ನಕ್ಕೆ ಇಂಗ್ಲೆಂಡ್ ಬೌಲರ್‌ಗಳು ಅಡ್ಡಿಯಾದರು. ಕ್ರಿಸ್ ವೋಕ್ಸ್, ಕ್ರಿಸ್ ಬ್ರಾಡ್ ಹಾಗೂ ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಹಾಗೂ ಡೋಮಿನಿಕ್ ಬೆಸ್ ಒಂದು ವಿಕೆಟ್ ಕಬಳಿಸುವ ಮೂಲಕ ಪ್ರವಾಸಿ ತಂಡಕ್ಕೆ ಆಘಾತ ನೀಡಿದರು. ಇದೀಗ ಯಾಸಿರ್ ಶಾ(12) ಹಾಗೂ ಮೊಹಮ್ಮದ್ ಅಬ್ಬಾಸ್(0) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಪಾಕಿಸ್ತಾನ 244 ರನ್ ಮುನ್ನಡೆ ಸಾಧಿಸಿದೆ.

ಪಾಕ್‌ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್..!

ಇದಕ್ಕೂ ಮೊದಲು ಎರಡನೇ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 92 ರನ್‌ಗಳಿಸಿದ್ದ ಇಂಗ್ಲೆಂಡ್ ಒಲಿ ಪೋಪ್(62), ಜೋಸ್ ಬಟ್ಲರ್(38) ಹಾಗೂ ಸ್ಟುವರ್ಟ್ ಬ್ರಾಡ್(29) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತಂಡ ಇನ್ನೂರರ ಗಡಿ ದಾಟಲು ನೆರವಾದರು.  ಪಾಕಿಸ್ತಾನ ಪರ ಯಾಸಿರ್ ಶಾ 4 ವಿಕೆಟ್ ಪಡೆದರೆ. ಶಹದಾಬ್ ಖಾನ್ ಹಾಗೂ ಮೊಹಮ್ಮದ್ ಅಬ್ಬಾಸ್ ತಲಾ ಶಾಹಿನ್ ಅಫ್ರಿದಿ ಹಾಗೂ ನಸೀಮ್ ಶಾ ತಲಾ ಒಂದೊಂದು ವಿಕೆಟ್ ಪಡೆದರು.