ಟೀಂ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ತಮ್ಮ ಮೊದಲ 33 ಟೆಸ್ಟ್ ಪಂದ್ಯಗಳನ್ನು 33 ವಿಭಿನ್ನ ಮೈದಾನಗಳಲ್ಲಿ ಆಡುವ ಮೂಲಕ ಅವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಿ, ಸಂಜಯ್ ಮಂಜ್ರೇಕರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಕ್ರೈಸ್ಟ್‌ಚರ್ಚ್(ನ.27): ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ಗುರುವಾರ (ನವೆಂಬರ್ 27) ಆರಂಭವಾದ ಎರಡನೇ ಟೆಸ್ಟ್ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದ ಜೈಸ್ವಾಲ್, ಅಪರೂಪದ ವಿಶ್ವ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ವಿಶೇಷ ದಾಖಲೆ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ.

ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಕೇವಲ ಮೂರು ವರ್ಷಗಳಾಗಿರುವ ಜೈಸ್ವಾಲ್, ತಮ್ಮ 34ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಈ ಅವಧಿಯಲ್ಲಿ ಭಾರತ ಕಂಡ ಅತ್ಯುತ್ತಮ ಟೆಸ್ಟ್ ಆರಂಭಿಕ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಎಡಗೈ ಬ್ಯಾಟರ್, ವಿಭಿನ್ನ ಮೈದಾನಗಳಲ್ಲಿ ಅತಿಹೆಚ್ಚು ಪಂದ್ಯವನ್ನಾಡಿದ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

33 ಟೆಸ್ಟ್, 33 ವಿಭಿನ್ನ ಮೈದಾನ!

ಯಶಸ್ವಿ ಜೈಸ್ವಾಲ್ ಅವರ ಟೆಸ್ಟ್ ವೃತ್ತಿಜೀವನದ ವಿಶೇಷವೆಂದರೆ, ತಮ್ಮ ಮೊದಲ 33 ಟೆಸ್ಟ್ ಪಂದ್ಯಗಳನ್ನು ಅವರು 33 ವಿಭಿನ್ನ ಮೈದಾನಗಳಲ್ಲಿ ಆಡಿದ್ದಾರೆ. ಟೆಸ್ಟ್ ಪದಾರ್ಪಣೆ ವೆಸ್ಟ್ ಇಂಡೀಸ್‌ನಲ್ಲಿ ಮಾಡಿದ ಜೈಸ್ವಾಲ್, ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಎರಡು ಪಂದ್ಯಗಳ ಸರಣಿಯನ್ನಾಡಿದ್ದರು.

ಭಾರತದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ಟೆಸ್ಟ್ ಪಂದ್ಯವನ್ನಾಡಿದ ಜೈಸ್ವಾಲ್, ನಂತರ ಬಾಂಗ್ಲಾದೇಶ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧವೂ ತವರಿನಲ್ಲಿ ಆಡಿದ್ದಾರೆ. ಈ ಐದು ತಂಡಗಳ ವಿರುದ್ಧ ಭಾರತದಲ್ಲಿ ನಡೆದ ಪಂದ್ಯಗಳು 14 ವಿಭಿನ್ನ ಮೈದಾನಗಳಲ್ಲಿ ನಡೆದಿವೆ. ಇನ್ನು 2024-25ರ ಆಸ್ಟ್ರೇಲಿಯಾ ಪ್ರವಾಸ ಮತ್ತು 2025ರ ಇಂಗ್ಲೆಂಡ್ ಪ್ರವಾಸದಲ್ಲಿ ತಲಾ ಐದು ಟೆಸ್ಟ್ ಪಂದ್ಯಗಳನ್ನಾಡಿರುವ ಜೈಸ್ವಾಲ್, ಈ ಎರಡು ದೇಶಗಳಲ್ಲಿಯೂ ವಿಭಿನ್ನ ಮೈದಾನಗಳಲ್ಲಿ ಆಡಿದ್ದಾರೆ.

ಸಂಜಯ್ ಮಂಜ್ರೇಕರ್ ವಿಶ್ವ ದಾಖಲೆಗೆ ಸರಿಗಟ್ಟಿದ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಅವರು ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರ ಅಪರೂಪದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಮಂಜ್ರೇಕರ್ 1994ರಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ 33 ಪಂದ್ಯಗಳನ್ನು 33 ವಿಭಿನ್ನ ಮೈದಾನಗಳಲ್ಲಿ ಆಡಿದ್ದರು. ತಮ್ಮ 34ನೇ ಟೆಸ್ಟ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಿದಾಗ ಮಂಜ್ರೇಕರ್ ಮೊದಲ ಬಾರಿಗೆ ಒಂದೇ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಿದ್ದರು. ಇದೀಗ ಜೈಸ್ವಾಲ್ ಕೂಡ ತಮ್ಮ ಮೊದಲ 33 ಟೆಸ್ಟ್ ಪಂದ್ಯಗಳನ್ನು ವಿಭಿನ್ನ ಮೈದಾನಗಳಲ್ಲಿ ಆಡುವ ಮೂಲಕ ಈ ದಾಖಲೆಗೆ ಸಮನಾಗಿದ್ದಾರೆ.

ಸಚಿನ್ ತೆಂಡೂಲ್ಕರ್ ದಾಖಲೆ ಹಿಂದಿಕ್ಕಿದ ಜೈಸ್ವಾಲ್

ಸಚಿನ್ ತೆಂಡೂಲ್ಕರ್ ಕೂಡ ಈ ವಿಶೇಷ ದಾಖಲೆಯ ಪಟ್ಟಿಯಲ್ಲಿ ಜೈಸ್ವಾಲ್‌ಗೆ ಸಮೀಪದಲ್ಲಿದ್ದರು. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಬಳಿಕ ಜೈಸ್ವಾಲ್ ಸಚಿನ್ ದಾಖಲೆಯನ್ನು ಸರಿಗಟ್ಟಿದ್ದರು. ಆದರೆ ಸಚಿನ್ ತಮ್ಮ ತವರೂರಾದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 1994ರಲ್ಲಿ ಎರಡನೇ ಬಾರಿ ಟೆಸ್ಟ್ ಪಂದ್ಯವನ್ನಾಡಿದ್ದರು. ಹೀಗಾಗಿ ತಮ್ಮ ಮೊದಲ 33 ಟೆಸ್ಟ್ ಪಂದ್ಯಗಳನ್ನು ವಿಭಿನ್ನ ಮೈದಾನಗಳಲ್ಲಿ ಆಡಿದ ಪಟ್ಟಿಯಲ್ಲಿ ಜೈಸ್ವಾಲ್ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ.

ನಾಗ್ಪುರ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ಸಾಧ್ಯತೆ

ಭಾರತದ ಮುಂದಿನ ನಿಗದಿತ ಟೆಸ್ಟ್ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ಜನವರಿ 21ರಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (VCA) ಸ್ಟೇಡಿಯಂನಲ್ಲಿ ನಡೆಯಲಿದೆ. ಜೈಸ್ವಾಲ್ ಈ ಮೈದಾನದಲ್ಲಿ ಇನ್ನೂ ಟೆಸ್ಟ್ ಪಂದ್ಯವನ್ನಾಡಿಲ್ಲ. ಒಂದು ವೇಳೆ ಅವರು ನಾಗ್ಪುರ ಟೆಸ್ಟ್‌ನಲ್ಲೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದರೆ, ವಿಭಿನ್ನ ಮೈದಾನಗಳಲ್ಲಿ ಸತತ ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯನ್ನು ಮತ್ತಷ್ಟು ವಿಸ್ತರಿಸುವ ಅವಕಾಶವಿದೆ.

ಇದೇ ರೀತಿಯಾಗಿ ಫಿಟ್‌ನೆಸ್ ಕಾಪಾಡಿಕೊಂಡು ತಂಡದಲ್ಲಿ ಮುಂದುವರಿದರೆ, 2027ರ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್ ಅವರ ಈ ದಾಖಲೆ ಸರಣಿಗೆ ಅಂತ್ಯವಾಗುವ ಸಾಧ್ಯತೆ ಇದೆ. ಜನವರಿ 29ರಿಂದ ಚೆನ್ನೈನಲ್ಲಿ ನಡೆಯಲಿರುವ ಆ ಪಂದ್ಯ ಅವರ ವೃತ್ತಿಜೀವನದ 35ನೇ ಟೆಸ್ಟ್ ಆಗಿರಲಿದೆ. ಆ ವೇಳೆಗೆ ಅವರು ಗುವಾಹಟಿ, ರಾಂಚಿ ಮತ್ತು ಅಹಮದಾಬಾದ್‌ನಲ್ಲಿಯೂ ಎರಡನೇ ಬಾರಿ ಟೆಸ್ಟ್ ಪಂದ್ಯವನ್ನಾಡಲಿದ್ದಾರೆ.

ಕೇವಲ ಮೂರು ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲೇ ಯಶಸ್ವಿ ಜೈಸ್ವಾಲ್ ಇಂತಹ ಅಪರೂಪದ ದಾಖಲೆಗಳನ್ನು ನಿರ್ಮಿಸಿರುವುದು ಅವರ ಸಾಧನೆಗೆ ಮತ್ತೊಂದು ಹೆಗ್ಗಳಿಕೆಯಾಗಿದೆ.

ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ:

ಇನ್ನು ಭಾರತ ಎದುರು ಟಾಸ್ ಸೋತು ಬ್ಯಾಟ್ ಮಾಡಲಿಳಿದ ನ್ಯೂಜಿಲೆಂಡ್ ತಂಡವು ಮೊದಲ ವಿಕೆಟ್‌ಗೆ ನಾಯಕ ಲಾಥಮ್ ಹಾಗೂ ಡೆವೊನ್ ಕಾನ್ವೇ 77 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಆದರೇ ಕಾನ್ವೆ ವಿಕೆಟ್ ಪತನದ ಬಳಿಕ ಕಿವೀಸ್ ತಂಡವು ನಾಟಕೀಯ ಕುಸಿತ ಕಂಡಿತು. ಲಾಥಮ್ 59 ರನ್ ಗಳಿಸಿ ಆಕಾಶ್‌ ದೀಪ್‌ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಹೆನ್ರಿ ನಿಕೋಲ್ಸ್(16) ಹಾಗೂ ರಚಿನ್ ರವೀಂದ್ರ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. 110 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಕಿವೀಸ್‌ ತಂಡಕ್ಕೆ ಸದ್ಯ ಡೇರಲ್ ಮಿಚೆಲ್(10) ಹಾಗೂ ಟಾಮ್ ಬ್ಲಂಡೆಲ್(12) ತಂಡಕ್ಕೆ ಆಸರೆಯಾಗಿದ್ದಾರೆ. ಇದೀಗ 56 ಓವರ್ ಅಂತ್ಯದ ವೇಳೆಗೆ ನ್ಯೂಜಿಲೆಂಡ್ ತಂಡವು 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ.