Ranji Trophy Final ಬಲಿಷ್ಠ ಮುಂಬೈಗೆ ತಿರುಗೇಟು ನೀಡಿದ ಮಧ್ಯಪ್ರದೇಶ..!

ರಣಜಿ ಟ್ರೋಫಿ ಫೈನಲ್‌ನಲ್ಲಿ ಆಕರ್ಷಕ ಶತಕ ಚಚ್ಚಿದ ಯಶ್ ದುಬೆ, ಶುಭಂ ಶರ್ಮಾ
ಮೊದಲ ಇನಿಂಗ್ಸ್‌ನಲ್ಲಿ ಕೇವಲ 6 ರನ್‌ಗಳ ಹಿನ್ನೆಡೆಯಲ್ಲಿರುವ ಮಧ್ಯಪ್ರದೇಶ
ಮೂರನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 368 ರನ್ ಬಾರಿಸಿರುವ ಮಧ್ಯಪ್ರದೇಶ

Yash Dubey Shubham Sharma smash tons Madhya Pradesh Fight back against Mumbai kvn

ಬೆಂಗಳೂರು(ಜೂ.24): 42ನೇ ರಣಜಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿದ್ದ ಬಲಿಷ್ಠ ಮುಂಬೈ ತಂಡಕ್ಕೆ ಶಾಕ್ ನೀಡುವತ್ತ ಮಧ್ಯಪ್ರದೇಶ ತಂಡವು ದಿಟ್ಟ ಹೆಜ್ಜೆಯನ್ನಿಟ್ಟಿದ್ದು, ಮೊದಲ ಇನಿಂಗ್ಸ್‌ ಮುನ್ನಡೆಯ ಹೊಸ್ತಿಲಲ್ಲಿದೆ. ಆರಂಭಿಕ ಬ್ಯಾಟರ್ ಯಶ್ ದುಬೆ(133) ಹಾಗೂ ಶುಭಂ ಎಸ್ ಶರ್ಮಾ(116) ಬಾರಿಸಿದ ಆಕರ್ಷಕ ಶತಕ ಹಾಗೂ ರಜತ್ ಪಾಟಿದಾರ್ (67) ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ಮಧ್ಯಪ್ರದೇಶ ತಂಡವು ಮೂರನೇ ದಿನದಾಟದಂತ್ಯದ ವೇಳೆಗೆ ಮೊದಲ ಇನಿಂಗ್ಸ್‌ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 368 ರನ್ ಬಾರಿಸಿದ್ದು, ಇನ್ನು ಕೇವಲ 6 ರನ್‌ಗಳ ಹಿನ್ನೆಡೆಯಲ್ಲಿದೆ. ರಜತ್ ಪಾಟೀದಾರ್ ಹಾಗೂ ನಾಯಕ ಆಧಿತ್ಯ ಶ್ರೀವಾಸ್ತವ್‌(11) ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium) ನಡೆಯತ್ತಿರುವ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯದಲ್ಲಿ ಮುಂಬೈ ಕ್ರಿಕೆಟ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 374 ರನ್ ಬಾರಿಸಿ ಸರ್ವಪತನ ಕಂಡಿತ್ತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ್ದ ಮಧ್ಯಪ್ರದೇಶ ತಂಡವು ಎರಡನೇ ದಿನದಾಟದಂತ್ಯದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 123 ರನ್ ಬಾರಿಸುವ ಮೂಲಕ ಬಲಿಷ್ಠ ಮುಂಬೈ ತಂಡಕ್ಕೆ (Mumbai Cricket Team) ತಿರುಗೇಟು ನೀಡುವ ಸೂಚನೆ ನೀಡಿತ್ತು. ಅದರಂತೆಯೇ ಮೂರನೇ ದಿನದಾಟದಲ್ಲಿ ಯಶ್ ದುಬೆ (Yash Dubey) ಹಾಗೂ ಶುಭಂ ಎಸ್ ಶರ್ಮಾ ದ್ವಿಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಎರಡನೇ ವಿಕೆಟ್‌ಗೆ ಈ ಜೋಡಿ 222 ರನ್‌ಗಳ ಜತೆಯಾಟವಾಡುವ ಮೂಲಕ ಮುಂಬೈ ಬೌಲರ್‌ಗಳನ್ನು ಕಾಡಿತು.

ಶತಕ ಚಚ್ಚಿದ ಯಶ್ ದುಬೆ-ಶುಭಂ ಶರ್ಮಾ: ಎರಡನೇ ದಿನದಾಟದಂತ್ಯಕ್ಕೆ 76 ರನ್‌ಗಳ ಜತೆಯಾಟ ನಿಭಾಯಿಸಿದ್ದ ಈ ಜೋಡಿ ಮೂರನೇ ದಿನದಾಟವನ್ನು ಎಚ್ಚರಿಕೆಯಿಂದಲೇ ಆರಂಭಿಸಿತು. ಸಿಕ್ಕ ಅವಕಾಶಗಳಲ್ಲಿ ಬೌಂಡರಿ ಬಾರಿಸುತ್ತಾ ರನ್ ವೇಗಕ್ಕೂ ಈ ಜೋಡಿ ಚುರುಕು ಮುಟ್ಟಿಸಿತು. ಆರಂಭಿಕ ಬ್ಯಾಟರ್‌ ಯಶ್ ದುಬೆ 336 ಎಸೆತಗಳನ್ನು ಎದುರಿಸಿ 14 ಬೌಂಡರಿ ಸಹಿತ 133 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಶುಭಂ ಎಸ್ ಶರ್ಮಾ 215 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಆಕರ್ಷಕ 116 ರನ್ ಬಾರಿಸಿ ಮೋಹಿತ್ ಅವಸ್ತಿಗೆ ವಿಕೆಟ್ ಒಪ್ಪಿಸಿದರು. ಈ ಜೋಡಿಯ ದ್ವಿಶತಕದ ಜತೆಯಾಟವು ಮುಂಬೈ ಮೊದಲ ಇನಿಂಗ್ಸ್‌ ಮುನ್ನಡೆ ಸಾಧಿಸುವ ಕನಸಿಗೆ ತಣ್ಣೀರೆರಚಿತು.

ಸ್ಪೋಟಕ ಅರ್ಧಶತಕ ಚಚ್ಚಿದ ರಜತ್ ಪಾಟೀದಾರ್: ಇನ್ನು ಆರ್‌ಸಿಬಿ ಕ್ರಿಕೆಟಿಗ ರಜತ್ ಪಾಟೀದಾರ್ (Rajat Patidar), ರಣಜಿ ಟ್ರೋಫಿ ಫೈನಲ್‌ನಲ್ಲಿ ನಿರ್ಭಯವಾಗಿ ಬ್ಯಾಟ್ ಬೀಸುವ ಮೂಲಕ ಗಮನ ಸೆಳೆದರು. ಇತ್ತೀಚೆಗಷ್ಟೇ ಮುಕ್ತಾಯವಾದ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಆಕರ್ಷಕ ಶತಕ ಚಚ್ಚಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಜತ್ ಪಾಟೀದಾರ್ ಅದೇ ಲಯವನ್ನು ರಣಜಿ ಟ್ರೋಫಿ ಫೈನಲ್‌ನಲ್ಲೂ ಮುಂದುವರೆಸಿದ್ದಾರೆ. ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದ ರಜತ್ ಪಾಟೀದಾರ್ ಕೇವಲ 44 ಎಸೆತಗಳಲ್ಲಿ 9 ಬೌಂಡರಿ ಸಹಿತ ಆಕರ್ಷಕ ಅರ್ಧಶತಕ ಸಿಡಿಸಿದರು. ಸದ್ಯ ಪಾಟೀದಾರ್ 106 ಎಸೆತಗಳನ್ನು ಎದುರಿಸಿ 13 ಬೌಂಡರಿ ಸಹಿತ 67 ರನ್ ಬಾರಿಸಿದ್ದು, ನಾಲ್ಕನೇ ದಿನವೂ ಅಬ್ಬರಿಸಿದರೇ ಮುಂಬೈ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವುದು ಕಷ್ಟಸಾಧ್ಯ ಎನಿಸಬಹುದು.

Latest Videos
Follow Us:
Download App:
  • android
  • ios