WTC FInal: ಟೆಸ್ಟ್‌ ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ; ಯಾರಿಗೆಲ್ಲಾ ಸ್ಥಾನ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಅಧಿಕೃತ ಚಾಲನೆ
ಟೆಸ್ಟ್ ವಿಶ್ವಕಪ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ
ರವಿಚಂದ್ರನ್ ಅಶ್ವಿನ್‌ಗೆ ನಿರಾಸೆ, ಸ್ಥಾನ ಪಡೆದ ಅಜಿಂಕ್ಯ ರಹಾನೆ

WTC Final Team India win the toss and elect to bowl first against Australia kvn

ಲಂಡನ್(ಜೂ.07): ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಹೈವೋಲ್ಟೇಜ್ ಟೆಸ್ಟ್‌ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇಲ್ಲಿನ ದಿ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ನಿರೀಕ್ಷೆಯಂತೆಯೇ ಭಾರತ ತಂಡವು ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್‌ನೊಂದಿಗೆ ಕಣಕ್ಕಿಳಿದಿದ್ದು, ರವಿಚಂದ್ರನ್ ಅಶ್ವಿನ್ ಆಡುವ ಹನ್ನೊಂದರ ಬಳಗದಿಂದ ಹೊರಬಿದ್ದಿದ್ದಾರೆ. ಇನ್ನು ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ತಂಡ ಕೂಡಿಕೊಂಡಿದ್ದಾರೆ.

WTC Final: ಇಂದಿನಿಂದ ಭಾರತ vs ಆಸೀಸ್‌ ಟೆಸ್ಟ್‌ ವಿಶ್ವಕಪ್‌ ಫೈನಲ್‌

ಇನ್ನು ಸಾಕಷ್ಟು ಕುತೂಹಲ ಕೆರಳಿಸಿದ್ದ ವಿಕೆಟ್ ಕೀಪರ್ ಸ್ಥಾನಕ್ಕೆ ಶ್ರೀಕಾರ್ ಭರತ್ ಹಾಗೂ ಇಶಾನ್ ಕಿಶನ್ ನಡುವೆ ಸಾಕಷ್ಟು ಪೈಪೋಟಿಯಿತ್ತು.ಈ ಪೈಕಿ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದ ಶ್ರೀಕಾರ್ ಭರತ್, ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಇಶಾನ್ ಕಿಶನ್‌ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಮತ್ತಷ್ಟು ಸಮಯ ಕಾಯಬೇಕಾಗಿದೆ.

ಭಾರತದ ಫೈನಲ್‌ ಹಾದಿ

6 ಸರಣಿಗಳಲ್ಲಿ 4ರಲ್ಲಿ ಜಯ 1ರಲ್ಲಿ ಸೋಲು, 1 ಡ್ರಾ

ಒಟ್ಟು 216 ಅಂಕಗಳಿಗೆ ಸ್ಪರ್ಧಿಸಿ 127 ಅಂಕ ಪಡೆದ ಭಾರತ

ಶೇ.58.80 ಅಂಕ ಪ್ರತಿಶತದೊಂದಿಗೆ ಪಟ್ಟಿಯಲ್ಲಿ 2ನೇ ಸ್ಥಾನ

ಆಸ್ಪ್ರೇಲಿಯಾ ಫೈನಲ್‌ ಹಾದಿ

6 ಸರಣಿಗಳಲ್ಲಿ 4ರಲ್ಲಿ ಜಯ, 1ರಲ್ಲಿ ಸೋಲು, 1 ಡ್ರಾ

ಒಟ್ಟು 228 ಅಂಕಗಳಿಗೆ ಸ್ಪರ್ಧಿಸಿ 152 ಅಂಕ ಪಡೆದ ಆಸೀಸ್‌

ಶೇ.66.67 ಅಂಕ ಪ್ರತಿಶತದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನ

ಗೆಲ್ಲುವ ತಂಡಕ್ಕೆ 13.2 ಕೋಟಿ ರುಪಾಯಿ ಬಹುಮಾನ!

ಫೈನಲ್‌ನಲ್ಲಿ ಗೆದ್ದು ಚಾಂಪಿಯನ್‌ ಆಗುವ ತಂಡಕ್ಕೆ 1.6 ಮಿಲಿಯನ್‌ ಡಾಲರ್‌(ಅಂದಾಜು 13.2 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ರನ್ನರ್‌-ಅಪ್‌ ಆಗುವ ತಂಡಕ್ಕೆ 8,00,000 ಡಾಲರ್‌ (ಅಂದಾಜು 6.6 ಕೋಟಿ ರು.) ದೊರೆಯಲಿದೆ.

ತಂಡಗಳು ಹೀಗಿವೆ ನೋಡಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆ ಎಸ್ ಭರತ್‌(ವಿಕೆಟ್ ಕೀಪರ್), ಶಾರ್ದೂಲ್‌ ಠಾಕೂರ್, ಉಮೇಶ್‌ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌.

ಆಸ್ಪ್ರೇಲಿಯಾ: ಡೇವಿಡ್ ವಾರ್ನರ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಕ್ಯಾಮರೋನ್ ಗ್ರೀನ್‌, ಅಲೆಕ್ಸ್‌ ಕೇರಿ(ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್‌(ನಾಯಕ), ಮಿಚೆಲ್ ಸ್ಟಾರ್ಕ್, ನೇಥನ್ ಲಯನ್‌, ಸ್ಕಾಟ್ ಬೋಲೆಂಡ್‌.

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Latest Videos
Follow Us:
Download App:
  • android
  • ios