WTC Final: ಇಂದಿನಿಂದ ಭಾರತ vs ಆಸೀಸ್ ಟೆಸ್ಟ್ ವಿಶ್ವಕಪ್ ಫೈನಲ್
ಲಂಡನ್‌ನ ದಿ ಓವಲ್ ಸ್ಟೇಡಿಯಂನಲ್ಲಿ ಪಂದ್ಯ
ಐಸಿಸಿ ಪ್ರಶಸ್ತಿ ಬರ ನೀಗಿಸಿಕೊಳ್ಳುವ ತವಕದಲ್ಲಿ ಟೀಂ ಇಂಡಿಯಾ
ಭಾರತದ ಆಡುವ ಬಳಗ ಇನ್ನೂ ಅಸ್ಪಷ್ಟ
ಎರಡೂ ತಂಡಗಳಿಗೆ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಮೇಲೆ ಕಣ್ಣು
ಆಸೀಸ್ ನಾಲ್ವರು ವೇಗಿಗಳು, ಒಬ್ಬ ಸ್ಪಿನ್ನರ್ ಕಣಕ್ಕಿಳಿಸುವುವುದು ಬಹುತೇಕ ಖಚಿತ
ಲಂಡನ್(ಜೂ.07): ಬಹುನಿರೀಕ್ಷಿತ 2021-23ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬುಧವಾರದಿಂದ ಇಲ್ಲಿನ ದಿ ಓವಲ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದ್ದು, ಬಲಿಷ್ಠ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ಚೊಚ್ಚಲ ಪ್ರಶಸ್ತಿಗಾಗಿ ಸೆಣಸಲಿವೆ.
2019-21ರ ಅವಧಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದ ಭಾರತ, ಈ ಪಂದ್ಯ ಗೆಲ್ಲುವ ಮೂಲಕ ಕಳೆದೊಂದು ದಶಕದಿಂದ ಎದುರಿಸುತ್ತಿರುವ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಳ್ಳಲು ಎದುರು ನೋಡುತ್ತಿದೆ. ಮತ್ತೊಂದೆಡೆ ಕಳೆದ ಆವೃತ್ತಿಯಲ್ಲಿ ನಿಧಾನಗತಿ ಬೌಲಿಂಗ್‌ಗಾಗಿ ಅಂಕ ಕಳೆದುಕೊಂಡು ಫೈನಲ್ ಸ್ಥಾನದಿಂದ ವಂಚಿತಗೊಂಡಿದ್ದ ಆಸ್ಪ್ರೇಲಿಯಾ, ಈ ಬಾರಿ ಮೊದಲ ಸ್ಥಾನಿಯಾಗಿ ಫೈನಲ್‌ಗೇರಿದ್ದು ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಎತ್ತಿಹಿಡಿಯಲು ಕಾಯುತ್ತಿದೆ.
ಭಾರತ ಕಳೆದೆರಡು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಗಳಲ್ಲೂ ಸ್ಥಿರ ಪ್ರದರ್ಶನ ನೀಡಿದ್ದು, ಬಹುತೇಕ ಸೀಮಿತ ಓವರ್ ಟೂರ್ನಿಗಳಲ್ಲಿ ನಾಕೌಟ್ ಹಂತಕ್ಕೇರಿದೆ. ಆದರೂ ಕಳೆದ 10 ವರ್ಷದಲ್ಲಿ ಭಾರತಕ್ಕೆ ಟ್ರೋಫಿ ಒಲಿದಿಲ್ಲ. 2013ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇ ಕೊನೆ. ಆ ಬಳಿಕ ಭಾರತ 3 ಬಾರಿ ಐಸಿಸಿ ಟೂರ್ನಿಗಳ ಫೈನಲ್‌ನಲ್ಲಿ ಮುಗ್ಗರಿಸಿದ್ದು, 4 ಬಾರಿ ಸೆಮೀಸ್‌ನಲ್ಲಿ ಎಡವಿದೆ.
ಐಪಿಎಲ್ ಗುಂಗಿನಿಂದ ಹೊರಕ್ಕೆ?: ಚೇತೇಶ್ವರ್ ಪೂಜಾರ ಹೊರತುಪಡಿಸಿ ಫೈನಲ್‌ಗೆ ಆಯ್ಕೆಯಾಗಿರುವ ಬೇರೆಲ್ಲಾ ಆಟಗಾರರು 2 ತಿಂಗಳ ಕಾಲ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದರು. ಇದೇ ಕಾರಣಕ್ಕೆ ಐಪಿಎಲ್ ಮುಗಿಯುತ್ತಿದ್ದಂತೆ ವಿಶ್ರಾಂತಿ ಪಡೆಯದೆ ಇಂಗ್ಲೆಂಡ್‌ಗೆ ತೆರಳಿದ ಆಟಗಾರರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ, ಐಪಿಎಲ್ ಗುಂಗಿನಿಂದ ಹೊರಬಂದು ಟೆಸ್ಟ್ ಕ್ರಿಕೆಟ್‌ಗೆ ಬೇಕಿರುವ ಮನಸ್ಥಿತಿಗೆ ಒಗ್ಗಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
WTC Final: 5 ಅಪರೂಪದ ದಾಖಲೆ ಬರೆಯಲು ಕಿಂಗ್ ಕೊಹ್ಲಿ ರೆಡಿ
ಭಾರತದ ಆರಂಭಿಕರ ಪೈಕಿ ಶುಭ್‌ಮನ್ ಗಿಲ್ ಇತ್ತೀಚೆಗೆ ಎಲ್ಲಾ ಮಾದರಿಯಲ್ಲೂ ಪ್ರಚಂಡ ಲಯದಲ್ಲಿದ್ದು, ಅವರ ಪ್ರದರ್ಶನ ನಿರ್ಣಾಯಕವೆನಿಸಲಿದೆ. ನಾಯಕ ರೋಹಿತ್ ಐಪಿಎಲ್‌ನಲ್ಲಿ ಲಯಕ್ಕೆ ಮರಳಲು ಹರಸಾಹಸ ಪಟ್ಟರೂ ಸಾಧ್ಯವಾಗಿರಲಿಲ್ಲ. ಇನ್ನೂ ಪೂಜಾರ ಕಳೆದೆರಡು ತಿಂಗಳಿಂದ ಇಂಗ್ಲೆಂಡ್‌ನಲ್ಲಿದ್ದು, ಅಲ್ಲಿನ ಸಸೆಕ್ಸ್ ಕೌಂಟಿ ತಂಡವನ್ನು ಮುನ್ನಡೆಸುವುದರ ಜೊತೆಗೆ ಬ್ಯಾಟಿಂಗ್ ಲಯವನ್ನೂ ಕಾಪಾಡಿಕೊಂಡಿದ್ದಾರೆ. ಪೂಜಾರ ಆಸೀಸ್ ಪಾಲಿಗೆ ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ. ವಿರಾಟ್ ಕೊಹ್ಲಿ ಜೊತೆ ಅಜಿಂಕ್ಯ ರಹಾನೆ ಮಧ್ಯಮ ಕ್ರಮಾಂಕದ ಹೊಣೆ ಹೊರಲಿದ್ದಾರೆ. 2022ರ ಬಳಿಕ ಮೊದಲ ಬಾರಿಗೆ ರಹಾನೆ ಟೆಸ್ಟ್ ಪಂದ್ಯವಾಡಲು ಕಾಯುತ್ತಿದ್ದಾರೆ.
ಭರತ್ vs ಕಿಶನ್
ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಕೆ.ಎಸ್.ಭರತ್ ಹಾಗೂ ಇಶಾನ್ ಕಿಶನ್ ನಡುವೆ ಪೈಪೋಟಿ ಇದೆ. ಭಾರತದಲ್ಲಿ ನಡೆದಿದ್ದ ಆಸೀಸ್ ವಿರುದ್ಧದ ಸರಣಿಯಲ್ಲಿ ಭರತ್ ಅತ್ಯುತ್ತಮ ಕೀಪಿಂಗ್ ಕೌಶಲ್ಯ ಪ್ರದರ್ಶಿಸಿದ್ದರು. ಆದರೆ ಇಂಗ್ಲೆಂಡ್‌ನಲ್ಲಿ ಹೆಚ್ಚಾಗಿ ಸ್ಪಿನ್ನರ್‌ಗಳು ಬೌಲ್ ಮಾಡುವುದಿಲ್ಲ. ಹೀಗಾಗಿ ಇಶಾನ್ ಕಿಶನ್‌ರನ್ನು ಆಡಿಸಿದರೆ ಕೌಂಟರ್ ಅಟ್ಯಾಕ್‌ಗೆ ಸುಲಭವಾಗಬಹುದು ಎನ್ನುವ ಚರ್ಚೆಯೂ ಇದೆ. ಭಾರತದ ಅಗ್ರ 5 ಬ್ಯಾಟರ್‌ಗಳು ಬಲಗೈ ಆಟಗಾರರಾಗಿರುವ ಕಾರಣ, ಒಬ್ಬ ಎಡಗೈ ಬ್ಯಾಟರ್ ಇದ್ದರೆ ಅನುಕೂಲವಾಗಬಹುದು ಎನ್ನುವ ಲೆಕ್ಕಾಚಾರವೂ ಕಿಶನ್ ಸೇರ್ಪಡೆಗೆ ಕಾರಣವಾಗಬಹುದು.
'ಮನಿ ನೈಸ್, ಆದ್ರೆ..?': ಐಪಿಎಲ್‌ನಿಂದ ಹಿಂದೆ ಸರಿದಿದ್ದರ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಮಿಚೆಲ್ ಸ್ಟಾರ್ಕ್..!
ಬೋಲೆಂಡ್‌ಗೆ ಸ್ಥಾನ
ಗಾಯಾಳು ಹೇಜಲ್‌ವುಡ್ ಬದಲಿಗೆ ಆಸ್ಪ್ರೇಲಿಯಾ ಸ್ಕಾಟ್ ಬೋಲೆಂಡ್‌ರನ್ನು ಆಡಿಸುವುದಾಗಿ ಖಚಿತಪಡಿಸಿದೆ. ಇನ್ನುಳಿದಂತೆ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ಗೊಂದಲ ಇರುವಂತೆ ಕಾಣುತ್ತಿಲ್ಲ. ಭಾರತ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಪೀಟರ್ ಹ್ಯಾಂಡ್‌್ಸಕಂಬ್ ಹೊರಗುಳಿಯಲಿದ್ದಾರೆ. ಟ್ರ್ಯಾವಿಸ್ ಹೆಡ್ 5ನೇ ಕ್ರಮಾಂಕದಲ್ಲಿ ಆಡಲಿದ್ದು, ಡೇವಿಡ್ ವಾರ್ನರ್ ಜೊತೆ ಉಸ್ಮಾನ್ ಖವಾಜ ಇನ್ನಿಂಗ್‌್ಸ ಆರಂಭಿಸಲಿದ್ದಾರೆ. ಕ್ಯಾಮರೂನ್ ಗ್ರೀನ್ ಸೇರಿ ನಾಲ್ವರು ವೇಗಿಗಳು, ನೇಥನ್ ಲಯನ್ ಏಕೈಕ ಸ್ಪಿನ್ನರ್ ಆಗಿ ಆಡುವುದು ಬಹುತೇಕ ಖಚಿತವಾಗಿದೆ.
ಒಟ್ಟು ಮುಖಾಮುಖಿ: 106
ಭಾರತ: 32
ಆಸ್ಪ್ರೇಲಿಯಾ: 44
ಡ್ರಾ: 29
ಟೈ: 01
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್(ನಾಯಕ), ಗಿಲ್, ಪೂಜಾರ, ಕೊಹ್ಲಿ, ರಹಾನೆ, ಜಡೇಜಾ, ಭರತ್/ಕಿಶನ್, ಅಶ್ವಿನ್/ಶಾರ್ದೂಲ್, ಉಮೇಶ್/ಉನಾದ್ಕತ್, ಶಮಿ, ಸಿರಾಜ್.
ಆಸ್ಪ್ರೇಲಿಯಾ: ವಾರ್ನರ್, ಖವಾಜ, ಲಬುಶೇನ್, ಸ್ಟೀವ್ ಸ್ಮಿತ್, ಟ್ರ್ಯಾವಿಸ್ ಹೆಡ್, ಗ್ರೀನ್, ಅಲೆಕ್ಸ್ ಕೇರಿ, ಕಮಿನ್ಸ್(ನಾಯಕ), ಸ್ಟಾರ್ಕ್, ಲಯನ್, ಬೋಲೆಂಡ್.
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪಿಚ್ ರಿಪೋರ್ಟ್
ದಿ ಓವಲ್‌ನಲ್ಲಿ ಸಾಮಾನ್ಯವಾಗಿ ಸ್ಪಿನ್ನರ್‌ಗಳು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. 2012ರಿಂದ ಈಚೆಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ನಡೆದಿರುವ ಎಲ್ಲಾ ಕ್ರೀಡಾಂಗಣಗಳಿಗೆ ಹೋಲಿಸಿದರೆ, ದಿ ಓವಲ್‌ನಲ್ಲಿ ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಪಿಚ್‌ನಲ್ಲಿ ಬೌನ್ಸ್ ಇರಲಿರುವ ಕಾರಣ, ಹೆಚ್ಚು ಗಾಳಿ ಇಲ್ಲದಿದ್ದರೆ ಬ್ಯಾಟರ್‌ಗಳು ಧೈರ್ಯವಾಗಿ ಡ್ರೈವ್ ಶಾಟ್‌ಗಳನ್ನು ಆಡಬಹುದು. ಇಲ್ಲಿ ಮೊದಲ ಇನ್ನಿಂಗ್‌್ಸನ ಸರಾಸರಿ ಮೊತ್ತ 300 ರನ್‌ಗಿಂತ ಹೆಚ್ಚಿದೆ. ಮೊದಲ 3 ದಿನ ಮಳೆ ಮುನ್ಸೂಚನೆ ಇಲ್ಲ. ಆದರೆ ಮೀಸಲು ದಿನ ಸೇರಿ ಕೊನೆಯ 3 ದಿನ ಮಳೆಯಾಗುವ ಸಾಧ್ಯತೆ ಇದೆ.
ಗೆಲ್ಲುವ ತಂಡಕ್ಕೆ 13.2 ಕೋಟಿ ರುಪಾಯಿ!
ಫೈನಲ್‌ನಲ್ಲಿ ಗೆದ್ದು ಚಾಂಪಿಯನ್ ಆಗುವ ತಂಡಕ್ಕೆ 1.6 ಮಿಲಿಯನ್ ಡಾಲರ್(ಅಂದಾಜು 13.2 ಕೋಟಿ ರು.) ಬಹುಮಾನ ಮೊತ್ತ ಸಿಗಲಿದೆ. ರನ್ನರ್-ಅಪ್ ಆಗುವ ತಂಡಕ್ಕೆ 8,00,000 ಡಾಲರ್ (ಅಂದಾಜು 6.6 ಕೋಟಿ ರು.) ದೊರೆಯಲಿದೆ.
ನಾನಾಗಲಿ ಅಥವಾ ಇನ್ಯಾರೇ ನಾಯಕರಾಗಲಿ ಭಾರತ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಕೊಂಡೊಯ್ಯಬೇಕು ಎನ್ನುವುದೊಂದೇ ಗುರಿಯಾಗಿರಲಿದೆ. ನಾವು ಐಸಿಸಿ ಪ್ರಶಸ್ತಿ ಗೆಲ್ಲುವಲ್ಲಿ ಹಿಂದೆ ಬೀಳುತ್ತಿದ್ದೇವೆ ನಿಜ, ಆದರೆ ಅದರಿಂದ ನಾವು ಒತ್ತಡಕ್ಕೆ ಒಳಗಾಗುತ್ತಿಲ್ಲ. - ರೋಹಿತ್ ಶರ್ಮಾ, ಭಾರತದ ನಾಯಕ
ಕಳೆದೊಂದು ವಾರದಿಂದ ಉತ್ತಮ ಹವಾಮಾನವಿದ್ದು, ಮುಂದಿನ 4-5 ದಿನವೂ ಹೀಗೆ ಇದ್ದರೆ ನಮ್ಮ ವೇಗಿಗಳಿಗೆ ಬಹಳ ಅನುಕೂಲವಾಗಲಿದೆ. ದೊಡ್ಡ ಪಂದ್ಯಗಳಲ್ಲಿ ಆಡಿದ ಅನುಭವ ನಮಗೆ ನೆರವಾಗಲಿದೆ. ಗ್ರೀನ್, ಬೋಲೆಂಡ್ ಸೇರ್ಪಡೆಯಿಂದ ಬಲ ಹೆಚ್ಚಿದೆ. - ಪ್ಯಾಟ್ ಕಮಿನ್ಸ್, ಆಸ್ಪ್ರೇಲಿಯಾ ನಾಯಕ